ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸದೆ ನೆರೆಯ ತಾಲೂಕಿನ ಎರಡು ಕೆರೆಗಳಿಗೆ ಮಾತ್ರ ನೀರು ತುಂಬಿಸಲು ಮುಂದಾಗಿರುವ ನೀರಾವರಿ ಇಲಾಖೆ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರೈತರು, ಸರ್ಕಾರ ತಾಲೂಕಿನ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಾವರಿ ಇಲಾಖೆ ಕ್ರಮ ಖಂಡಿಸಿರುವ ರೈತಮುಖಂಡ ಸಿಂದಘಟ್ಟ ಮುದ್ದುಕುಮಾರ್, ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸದಿದ್ದರೆ ರೈತರು ತಮ್ಮ ತಮ್ಮ ವ್ಯಾಪ್ತಿಯ ಕೆರೆಗಳ ತೂಬು ಎತ್ತಿ ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಆರಂಭಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.ಹೇಮೆಯ ನೀರಿನ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ದೇಶ ಪೂರ್ವಕವಾಗಿ ರಾಜಕೀಯ ಮಾಡಿದ್ದಾರೆ. ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಕೂಡ ತಮ್ಮ ಕ್ಷೇತ್ರ ವ್ಯಾಪ್ತಿಯ ತೊಣ್ಣೂರು ಕೆರೆಗೆ ಮಾತ್ರ ನೀರು ಬಿಡಿಸಿಕೊಂಡು ಕೆ.ಆರ್.ಪೇಟೆ ತಾಲೂಕಿನ ರೈತರ ಹಿತವನ್ನು ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ, ತಾಲೂಕು ವ್ಯಾಪ್ತಿಯಲ್ಲಿ ರೈತರು ಅಕ್ರಮವಾಗಿ ಕೆರೆಗಳಿಗೆ ನೀರು ಹರಿಸಿಕೊಳ್ಳುವುದನ್ನು ತಡೆಯಲು ಕಾಲುವೆ ಏರಿ ಮೇಲೆ ನಿರಂತರ ಬೀಟ್ ಆರಂಭಿಸಿದ್ದಾರೆ. ತುಮಕೂರು ಭಾಗಕ್ಕೆ ಹೇಮೆ ನೀರು ಹರಿಸಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಪ್ರದೇಶಕ್ಕೆ ನೀರು ಹರಿಸದ ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕೆರೆ ಕಟ್ಟೆಗಳು ಒಣಗಿದ್ದು ಭೀಕರ ಬರದ ಛಾಯೆ ಕಾಣಿಸಿಕೊಂಡಿದೆ. ಕೆರೆಗಳಲ್ಲಿ ನೀರಿಲ್ಲದ ಕಾರಣ ಅಂತರ್ಜಲ ಮಟ್ಟವೂ ಕುಸಿದಿದ್ದು ಸಾವಿರಾರು ಕೊಳವೆ ಬಾವಿಗಳು ನೆಲಕಚ್ಚಿವೆ. ಅಳಿದುಳಿದ ಬೆಳೆಗಳ ಸಂರಕ್ಷಣೆ ಮತ್ತು ಕುಡಿಯುವ ನೀರಿನ ದಾಹ ತಣಿಸಲು ಹೇಮಾವತಿ ಎಡದಂಡೆ ನಾಲೆ ಮೂಲಕ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.