ಕನ್ನಡಪ್ರಭ ವಾರ್ತೆ ಕೊರಟಗೆರೆ
ದೇಶದಲ್ಲಿ ಅಸಮಾನತೆ, ಜಾತಿ ಪದ್ದತಿ ಇತ್ಯಾದಿ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ, ಜ್ಞಾನದ ಬೆಳಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿ ಉತ್ತಮ ಸಮಾಜ ನಿರ್ಮಾಣಕ್ಕೆ ಅನುಭವ ಮಂಟಪವನ್ನು ಹುಟ್ಟುಹಾಕಿದ ಕ್ರಾಂತಿಕಾರಿ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾದ ಸಮಾಜ ಸುಧಾರಕ, ವಿಶ್ವಜ್ಞಾನಿ, ವಚನಕಾರ ಬಸವ ಜಯಂತಿ ಆಚರಣೆ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ವಾರ್ಚನೆ ಸಲ್ಲಿಸಿ ಮಾತನಾಡಿದರು. ಬಸವಣ್ಣನವರು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸಮಾನತೆಯನ್ನು ಸಾರಿದವರು. ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಗಳಾಗಿದ್ದ ವೇಳೆ ಹಸಿವುನಿಂದ ಬಳಲುತ್ತಿದ್ದವರ ಹಸಿವು ನೀಗಿಸಿ, ಪ್ರತಿಯೊಂದು ಮನೆ ಮನೆಯಲ್ಲಿನ ಅಂಕು-ಡೋಂಕುಗಳನ್ನು ತಿದ್ದಲು ವಚನ ಸಾಹಿತ್ಯವನ್ನು ರೂಪಸಿ ಸುಮಾರು ೩೦೦ಕ್ಕೂ ವಚನಕಾರರನ್ನು ಒಳಗೊಂಡು ೨೫ಸಾವಿರ ವಚನಗಳನ್ನು ಸಾಮಾಜಿಕ ನ್ಯಾಯ, ಲಿಂಗಭೇದ, ಅಸ್ಪೃಶ್ಯತೆಗಾಗಿಯೇ ರಚಿಸಿದ್ದರು ಎಂದರು. ಬಸವಣ್ಣನವರು ದೇಶದ ಅತ್ಯುತ್ತಮ ಸಮಾಜ ಸೇವಕರಲ್ಲಿ ಒಬ್ಬರಾಗಿದ್ದರು, ಕರ್ನಾಟಕದಲ್ಲಿ ಭಕ್ತಿ ಚಳುವಳಿಗಳಲ್ಲಿ ಎರಡು ಪ್ರಾಥಮಿಕ ವರ್ಗಗಳಾಗಿದ್ದವು, ಭಕ್ತಿಚಳುವಳಿಯ ಮೊದಲ ರೂಪವನ್ನು ಮಾದರ್ ಚೆನ್ನಯ್ಯ ಪ್ರಾರಂಭಿಸಿದರು. ನಂತರ ಬಸವಣ್ಣ ನವರು ಅದನ್ನು ಮುಂದುವರಿಸಿದರು. ಭಕ್ತಿ ಚಳುವಳಿಯ ಎರಡನೇ ರೂಪವು ವಚನ ಸಾಹಿತ್ಯವನ್ನ ಆಧರಿಸಿದೆ. ಈ ಸುಧಾರಣೆಗಳ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತರಲಾಯಿತ್ತು. ಭಕ್ತಿ ಮಾರ್ಗವನ್ನು ಬಸವಣ್ಣನವರು ಬೆಂಬಲಿಸಿದರು ಎಂದು ತಿಳಿಸಿದರು.ಸಿಪಿಐ ಅನಿಲ್ ಮಾತನಾಡಿ, ಬಸವಣ್ಣನವರು ಮಹಾನ್ ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕರಾಗಿ ಹೆಸರನ್ನು ಗಳಿಸಿದ ಇವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ತಲೆ ಎತ್ತಿ ನಿಂತಿದ್ದ ಪಿಡುಗುಗಳನ್ನು ತೊಡೆದು ಹಾಕಲು ಸಾಮಾಜಿಕ ಜಾಗೃತಿಯನ್ನು ಪಸರಿಸಲು ಆರಂಭಿಸಿದರು. ಜಾತಿ, ಬಣ್ಣ, ಅಂತಸ್ತಿನಲ್ಲಿ ವ್ಯತ್ಯಾಸವಿದ್ದರೂ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಸಾರಿದ ಬಸವಣ್ಣನವರು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದ ತಿಳಿಸಿದರು.ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಎಂ ಶಿವಾನಂದ್ ಮಾತನಾಡಿ, ಪ್ರಸಿದ್ದ ಸಂತರಾಗಿದ್ದ ಇವರು ರಾಜನೀತಿಜ್ಞರಾಗಿ, ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದು, ಕಾಯಕವೇ ಕೈಲಾಸ ಎಂದು ಮನುಕುಲಕ್ಕೆ ಪಾಠ ಕಲಿಸಿಕೊಟ್ಟ ವಿಶ್ವ ಬಸವಣ್ಣನವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ನಮಗೆಲ್ಲರಿಗೂ ಪಾಠ, ಬದುಕಿಗೆ ದಾರಿ ಎಂದು ಹೇಳಿದರು.ಈ ವೇಳೆ ಗ್ರೇಡ್-೨ ತಹಸೀಲ್ದಾರ್ ರಾಮ್‌ಪ್ರಸಾದ್, ವೀರಶೈವ ಸಮಾಜದ ಉಪಾಧ್ಯಕ್ಷ ವಿನಯ್‌ಕುಮಾರ್, ಕಾರ್ಯದರ್ಶಿ ಚೆನ್ನಬಸಪ್ಪ, ಖಚಾಂಚಿ ಶಿವಾನಂದ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಮುಖಂಡರಾದ ಎಲ್.ಸಿ ರಾಜಣ್ಣ, ಪರ್ವತಯ್ಯ, ಸುರೇಶ್, ಚಂದ್ರಶೇಖರ್, ಪವನ್‌ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.