ಪತ್ರಕರ್ತರಲ್ಲಿ ಜಾತೀಯತೆ ಬೆಳೆದಿರುವುದು ಸಮಾಜಕ್ಕೆ ಮಾರಕ: ಕೆ. ನಿಂಗಜ್ಜ

KannadaprabhaNewsNetwork |  
Published : Sep 23, 2026, 02:30 AM IST
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ವರದಿಗಾರರನ್ನು ಕನಕಗಿರಿ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕನಕಗಿರಿ ಪಟ್ಟಣದ ಸ.ಪ.ಪೂ. ಕಾಲೇಜು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಮಂಗಳವಾರ ಪತ್ರಿಕಾ ದಿನಾಚರಣೆ ಹಾಗೂ ಕೆಯುಡಬ್ಲ್ಯೂಜೆ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ನಡೆಯಿತು.

ಕನಕಗಿರಿ: ಸಮಾಜ ತಿದ್ದುವ ಪತ್ರಿಕಾ ರಂಗದಲ್ಲಿ ಜಾತಿಯ ಮೇಲಾಟ ನಡೆಯುತ್ತಿರುವುದು ಕಳವಳಕಾರಿಯಾಗಿದೆ ಎಂದು ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ ಹೇಳಿದರು.

ಅವರು ಪಟ್ಟಣದ ಸ.ಪ.ಪೂ. ಕಾಲೇಜು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಕೆಯುಡಬ್ಲ್ಯೂಜೆ ಜಿಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸದಾ ಸೇವೆಯನ್ನು ಬಯಸುವ ಪತ್ರಿಕಾ ಕ್ಷೇತ್ರ ಇಂದು ಉದ್ಯಮವಾಗಿ ಬದಲಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ಪತ್ರಕರ್ತರಲ್ಲಿಯೂ ರಾಜಕೀಯದಂತೆ ಜಾತೀಯತೆ ಬೆಳೆದಿದ್ದು, ಇದು ಸಮಾಜಕ್ಕೆ ಮಾರಕವಾಗಿದೆ. ಪತ್ರಕರ್ತರಾಗಲು ಇಚ್ಛಿಸುವ ವ್ಯಕ್ತಿ ಜಾತಿ ಮತ್ತು ಧರ್ಮದಿಂದ ದೂರವಿದ್ದು, ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಾಗ ಮಾತ್ರ ಮಾಧ್ಯಮದ ಉನ್ನತಿಯಾಗಲಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಶರಣಬಸವ ಹುಲಿಹೈದರ ಮಾತನಾಡಿ, ಸಮಾಜದ ಸೇವೆಗೆ ಪತ್ರಿಕೆಯ ಅತ್ಯವಶ್ಯವಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಪತ್ರಿಕೆಗಳಿಗಿಂತ ಜಾಲತಾಣಗಳೇ ಹೆಚ್ಚು ಕೆಲಸ ಮಾಡುತ್ತಿವೆ. ಪತ್ರಕರ್ತರು ಎಐ ಬಳಸುವುದರಿಂದ ಹೆಚ್ಚಿನ ಜ್ಞಾನ ವೃದ್ಧಿಯಾಗಲಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಮೆಹಬೂಬುಹುಸೇನ ಬಿ., ಮಧುಸೂದನ ಮಾದಿನಾಳ, ಮಹಾಂತೇಶ ಅಂಗಡಿ ಹಾಗೂ ಎರಡು ದಶಕಗಳಿಂದ ಮಾಧ್ಯಮ ಸೇವೆಯಲ್ಲಿರುವ ಪ್ರವೀಣ ಕೋರಿಶೆಟ್ಟರ್ ಅವರನ್ನು ತಾಲೂಕು ಘಟಕದಿಂದ ಸನ್ಮಾನಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರಯ್ಯಸ್ವಾಮಿ ಅಧ್ಯಕ್ಷತೆವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯ ಅಮರೇಶ ದೇವರಾಳ, ಉಪನ್ಯಾಸಕರಾದ ರೇಖಾ ಚಕ್ರಸಾಲಿ, ಶಿವಪುತ್ರಪ್ಪ ಗಳಪೂಜಿ ಇದ್ದರು. ಹನುಮೇಶಗೌಡ ಕಾರ್ಯಕ್ರಮ ನಿರೂಪಿಸಿದರೆ, ಶಿವಶರಣ ವಂದಿಸಿದರು, ಅಮೂಲ್ಯಾ ಪ್ರಾರ್ಥಿಸಿದರು.

ಸ್ವರೂಪ ಬದಲು: ಆಧುನಿಕ ಯುಗದಲ್ಲಿ ಮಾಧ್ಯಮದ ಸ್ವರೂಪ ಬದಲಾಗಿದೆ. ಸಂಕ್ಷಿಪ್ತ ವಾರ್ತೆಗಳು, ಡಿಜಿಟಲ್ ಪೋರ್ಟಲ್‌ಗಳು ಹಳ್ಳಿ ಸುದ್ದಿಯನ್ನು ತಕ್ಷಣಕ್ಕೆ ಹೊರ ಜಗತ್ತಿಗೆ ತಲುಪಿಸುತ್ತಿವೆ. ರಾಜ್ಯ ವ್ಯಾಪಿ ಯುಟ್ಯೂಬ್, ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಹೆಚ್ಚಾಗಿ ಹುಟ್ಟಿಕೊಂಡಿವೆ. ಇವು ಬೇಗ ಸುದ್ದಿಯನ್ನು ತಲುಪಿಸುತ್ತಿವೆಯಾದರೂ ಒಮ್ಮೊಮ್ಮೆ ಸುದ್ದಿಯ ನೈಜತೆ ಪರಿಶೀಲನೆ ಕೊರತೆಯಿಂದಾಗಿ ನಕಲಿ ಸುದ್ದಿಗಳು ಹಬ್ಬುವ ಆತಂಕಕ್ಕೂ ಕಾರಣವಾಗಿವೆ ಎಂದು ಪತ್ರಿಕೋದ್ಯಮ ವಿಭಾಗದ ಅಧ್ಯಾಪಕ ವಿಜಯ ಸರೋದೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಬೀದಿಪಾಲು ಮಾಡುವ ಆದೇಶ ಕೈಬಿಡಲು ಒತ್ತಾಯ
ಬಡವರ ಒಕ್ಕಲೆಬ್ಬಿಸಲು ಹುನ್ನಾರ: ತಿಮ್ಮಪ್ಪ ಎಂ.ಕೆ.