ಕಲಘಟಗಿಯ ಕೆರೆಗಳ ಒಡಲಿಗೆ ಹರಿದು ಬಂದ ಬೇಡ್ತಿ!

KannadaprabhaNewsNetwork |  
Published : Sep 19, 2025, 01:01 AM IST
ಬೇಡ್ತಿನದಿ. | Kannada Prabha

ಸಾರಾಂಶ

ಕಲಘಟಗಿಯ ಬೇಡ್ತಿ ನದಿ ನೀರನ್ನು ಇದೇ ರೀತಿ ಏತ ನೀರಾವರಿ ಮೂಲಕ ಇಡೀ ತಾಲೂಕಿನ ಕೆರೆಗಳನ್ನು ಮರುಪೂರಣ ಮಾಡಿಸುವ ಯೋಜನೆಯನ್ನು ಕಾರ್ಮಿಕ ಸಚಿವ, ಜಿಲ್ಲಾ ಉಸ್ತುವಾರಿ ಹಾಗೂ ಕಲಘಟಗಿಯ ಶಾಸಕರೂ ಆಗಿರುವ ಸಂತೋಷ ಲಾಡ್‌ ಯಶಸ್ವಿಗೊಳಿಸಿದ್ದಾರೆ. ಈ ಕುರಿತು ಕನ್ನಡಪ್ರಭ ಸರಣಿ ಲೇಖನಗಳ ಮೂಲಕ ಯೋಜನೆ ವಿಸ್ಕೃತ ಮಾಹಿತಿ ನೀಡುತ್ತಿದೆ.

ಬಸವರಾಜ ಹಿರೇಮಠ

ಧಾರವಾಡ: ಬರೀ ಕೆರೆ-ಕಟ್ಟೆಗಳು, ಗುಡ್ಡಗಾಡುಗಳಿಂದಲೇ ರಚಿತವಾಗಿರುವ ಕಲಘಟಗಿಯು ಮಲೆನಾಡಿನ ಆರಂಭದ ಊರು. ಜಲಮೂಲಕ್ಕೇನು ಕಡಿಮೆ ಏನಿಲ್ಲ. ಆದರೆ, ಇಷ್ಟು ವರ್ಷಗಳ ಕಾಲ ಇದ್ದ ಜಲಮೂಲವನ್ನು ಸರಿಯಾಗಿ ಬಳಸಿಕೊಳ್ಳದೇ ಹಿಂದುಳಿದ ತಾಲೂಕಿನ ಪಟ್ಟಿಯಲ್ಲಿ ಕಲಘಟಗಿ ಇನ್ನೂ ಉಳಿದಿದೆ.

ಹಿಂದುಳಿದ ತಾಲೂಕಾಗಿರುವ ಕಲಘಟಗಿಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದ ರಾಜ್ಯ ಸರ್ಕಾರ ರೈತರ ಹೊಲಗಳಿಗೆ ಈಗಾಗಲೇ ನೀರು ಹರಿಸಲಾಗುತ್ತಿದೆ. ಬಹು ದಿನಗಳ ಕಲಘಟಗಿ ಜನತೆಯ ಕನಸು ಸಹ ಈ ಮೂಲಕ ನನಸಾಗಿದೆ.

ಕಲಘಟಗಿ ಮೂಲಕವೇ ಹರಿದು ಹೋಗಿ ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದ್ದ ಬೇಡ್ತಿ ಕೊಳ್ಳದ 0.449 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಕಲಘಟಗಿಯ ಕರೆಗಳ ಒಡಲು ತುಂಬಿಸುವ ಮೊದಲ ಹಂತದ ಯೋಜನೆ ಶುರುವಾಗಿದೆ. ₹122 ಕೋಟಿ ವೆಚ್ಚದಲ್ಲಿ ಬರೋಬ್ಬರಿ 41 ಕೆರೆಗಳು ವರ್ಷದ ಎಲ್ಲ ಹೊತ್ತು ತುಂಬಿ ತುಳುಕುತ್ತಿವೆ. ಈ ಕೆರೆಗಳ ನೀರನ್ನು ಕೆರೆ ಸುತ್ತಲಿನ ಪ್ರದೇಶದ ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಂಡು ಆರ್ಥಿಕವಾಗಿ ಸ್ವಾವಂಬಿಯಾಗಬೇಕು ಎನ್ನುವುದೇ ಯೋಜನೆ ಮುಖ್ಯ ಉದ್ದೇಶ.

ಬೆಲವಂತರ ಬಳಿ ಪಂಪಹೌಸ್‌: ಕಲಘಟಗಿ ಸಮೀಪದ ಬೆಲವಂತರ ಗ್ರಾಮ ಬಳಿ ಬೇಡ್ತಿ ನದಿಯಿಂದ ತಾಲೂಕಿನ 41 ಕೆರೆಗಳಿಗೆ ನೀರು ತುಂಬಿಸಲು ಪಂಪಹೌಸ್‌ ನಿರ್ಮಾಣ ಮಾಡಿದ್ದು, ಇಲ್ಲಿಂದ ನೀರನ್ನು ಪಂಪ್‌ ಮಾಡಿ ಕೆರೆಗಳಿಗೆ ನಿತ್ಯ ನೀರು ಹೋಗುತ್ತಿದೆ.

ಕಲಘಟಗಿಯ ದಕ್ಷಿಣ ಭಾಗದಲ್ಲಿ ಸೋಮನಕೊಪ್ಪದ ಸಾವಿಹಳ್ಳಿಕೆರೆ, ಆಲದಕಟ್ಟಿ ಕೆರೆ, ತಾವರೆಗೆರೆಯ ಹಿರೇಕೆರೆ, ಬಮ್ಮಿಗಟ್ಟಿ ಕೆರೆ, ಮುಕ್ಕಲ್‌ನ ಕಲ್ಲಿಕೆರೆ, ಜಿನ್ನೂರಿನ ದೊಡ್ಡಕೆರೆ, ಬಗಡಗೇರಿಯ ಲಕ್ಕವನಕೆರೆ, ತಬಕದಹೊನ್ನಳ್ಳಿಯ ತುಂಬಿಕೆರೆ, ಪರಸಾಪೂರದ ಹಿರೇಕೆರೆ, ಬೀರವಳ್ಳಿಯ ಕಡಬಗಟ್ಟಿ ಕೆರೆ, ಬಿದರಗಡ್ಡಿಯ ಹಿರೇಕೆರೆ ಹಾಗೂ ಬೆಂಡಲಗಟ್ಟಿಯ ಹೊಸಕೇರಿಗಳಲ್ಲಿ ಬೇಡ್ತಿ ಬಂದಿದ್ದಾಳೆ. ಕಲಘಟಗಿಯ ಉತ್ತರ ವಿಭಾಗದಲ್ಲಿ ದೇವಿಕೊಪ್ಪ ಕೆರೆ, ಹಿಂಡಸಗೇರೆಯ ಸಲಕಿನಕೆರೆ, ತಂಬೂರಿನ ಉತ್ತರ ಕುಮಾರ ಕೆರೆ, ಸಂಗಟಿಕೊಪ್ಪದ ಹಿರಿಕೆರೆ, ಕಲಘಟಗಿಯ ಮಂಗೇಶಕೆರೆ, ಹತಕಿನಾಳ ಹಾಗೂ ಸಂಗಮೇಶ್ವರದ ಫಾರೆಸ್ಟ್‌ ಕೆರೆ, ಕೂಡಲಗಿಯ ಪಂಚಸ್ಥಳ ಕೆರೆ, ಮಡಕಿಹೊನ್ನಳ್ಳಿಯ ಅಗಸರ ಕೆರೆ, ಹುಲಗಿನಕಟ್ಟಿಯ ಜೊಂಡಗೇರಿಕೆರೆ ಹಾಗೂ ತುಮರಿಕೊಪ್ಪದ ಹಾಲವಾಡಕೆರೆಗಳಿಗೆ ನೀರು ಹೋಗುತ್ತಿದೆ.

ಹಾಗೆಯೇ, ಹಾರೊಗೇರಿ, ಕಾಮಧೇನುವಿನ ಹಿರೇಕೆರೆ, ಕಾಡನಕೊಪ್ಪದ ದೊಡ್ಡಕೆರೆ, ಚಳಮಟ್ಟಿಯ ಚಳಮಟ್ಟಿಕೆರೆ, ಹಿರೇಹೊನ್ನಳ್ಳಿಯ ಹಿರೇಕೆರೆ, ಕುರುವಿನಕೊಪ್ಪದ ಗಂಗಮ್ಮನಕೆರೆ, ಮುತ್ತಗಿಯ ತುಂಬಿಕೆರೆ, ಬಿ.ಕೆ. ಶಿಗಿಗಟ್ಟಿಯ ಕೆರೆ, ಹುಲಿಕೊಪ್ಪದ ಹೊಸಕೇರಿ, ಮುತ್ತಗಿಯ ತಳವಾರ ಕೆರೆ, ಎಮ್ಮೆಟ್ಟಿಯ ನಂದಿಕಟ್ಟೆ ಕೆರೆ ಹಾಗೂ ಮಾಚಾಪೂರದ ಕ್ಯಾಸಿನಕೆರೆಯೂ ಈ ಪಟ್ಟಿಯಲ್ಲಿದೆ.

ಕಲಘಟಗಿಯ ಬೆಲವಂತರ ಬಳಿ ಪಂಪಹೌಸ್‌ ನಿರ್ಮಿಸಿ ನೀರು ಎತ್ತುವ ಕಾರ್ಯ 2024ರ ಆಗಸ್ಟ್‌ 14ರಿಂದಲೇ ಶುರುವಾಗಿದೆ. ಕಳೆದ ಒಂದು ವರ್ಷದಿಂದ 41 ಕೆರೆಗಳಿಗೆ ನೀರು ಸಹ ಹರಿಯುತ್ತಿದೆ. ತಾಲೂಕಿನ ಮಹತ್ವದ ಯೋಜನೆ ಇದಾಗಿದ್ದರಿಂದ ಮುಖ್ಯಮಂತ್ರಿಗಳಿಂದಲೇ ಈ ಯೋಜನೆ ಅಧಿಕೃತವಾಗಿ ಉದ್ಘಾಟಿಸಲು ತೀರ್ಮಾನಿಸಲಾಗಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಕಾರಣ ಉದ್ಘಾಟನೆ ಬಾಕಿ ಉಳಿದಿದೆ. ಪ್ರಸ್ತುತ ಇದೇ ಯೋಜನೆಯ ಮುಂದುವರೆದ ಭಾಗವಾಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ತುಂಬಿಸುವ ₹179.50 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮೊದಲ ಹಂತದ ಯೋಜನೆ ಉದ್ಘಾಟನೆ ಹಾಗೂ 2ನೇ ಹಂತದ ಯೋಜನೆಗೆ ಭೂಮಿ ಪೂಜೆ ಮಾಡಲು ಸಚಿವ ಸಂತೋಷ ಲಾಡ್‌ ಯೋಜನೆ ಹಾಕಿದ್ದಾರೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ