ಬೆಳಗಾವಿ : ಜಿಲ್ಲೆಯಾದ್ಯಂದ ಪುಷ್ಯ ಮಳೆಯ ಆರ್ಭಟ ಮುಂದುವರೆದಿದ್ದು, ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ ಸೇರಿದಂತೆ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, 17 ಸೇತುವೆಗಳು ಮುಳುಗಡೆಯಾಗಿವೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಐದು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ 17 ಸೇತುವೆ ಮುಳುಗಡೆಯಾಗಿವೆ. ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಪರ್ಯಾಯ ಮಾರ್ಗದ ಮೂಲಕ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಏಳು ಸೇತುವೆ ಜಲಾವೃತಗೊಂಡಿವೆ. ಬೆಳಗಾವಿ ವ್ಯಾಪ್ತಿಯಲ್ಲಿ ಹತ್ತು ಸಂಪರ್ಕ ಸೇತುವೆ ಮುಳುಗಿವೆ. ದೂದಗಂಗಾ ನದಿಗೆ ದತ್ತವಾಡ-ಮಲ್ಲಿಕವಾಡ, ಬೋಜ್-ಕಾರದಗಾ, ಬೋಜವಾಡಿ-ಕುಣ್ಣೂರ, ವೇದಗಂಗಾ ನದಿಗೆ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಕೃಷ್ಣಾ ನದಿಗೆ ಮಾಂಜರಿ-ಬಾವನಸೌದತ್ತಿ, ಹಿರಣ್ಯಕೇಶಿ ನದಿಗೆ ಯರನಾಳ-ಮದಮಕ್ಕನಾಳ, ಘಟಪ್ರಭಾ ನದಿಗೆ ಸುಣಧೋಳಿ-ಮೂಡಲಗಿ, ಅವರಾದಿ-ನಂದಗಾಂವ, ಕಮಲದಿನ್ನಿ-ಹುಣಶ್ಯಾಳ ಪಿವೈ, ವಡ್ಡರಹಟ್ಟಿ-ಉದಗಟ್ಟಿ, ಗೋಕಾಕ್-ಶಿಂಗಳಾಪುರ, ಮಲಪ್ರಭಾಗೆ ಖಾನಾಪುರ-ಹೆಮ್ಮಡಗಾ, ಸಾತ್ನಾಳಿ-ಮಾಸಾಳಿ ಸಂಪರ್ಕ ಕಡಿತಗೊಂಡಿದೆ.
ಪಶ್ಚಿಮ ಘಟ್ಟಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 4 ಸೇತುವೆ ಜಲಾವೃತಗೊಂಡಿವೆ. ಮೂಡಲಗಿ ತಾಲೂಕಿನ 4 ಸೇತುವೆಗಳು ಮುಳುಗಿವೆ. ಸುಣಧೋಳಿ-ಮೂಡಲಗಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಂ ಬ್ಯಾರೇಜ್, ಅವರಾದಿ-ನಂದಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಂ ಬ್ಯಾರೇಜ್, ಕಮಲದಿನ್ನಿ-ಹುಣಶ್ಯಾಳ ಪಿ.ವೈ. ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ, ವಡ್ಡರಹಟ್ಟಿ-ಗೋಕಾಕ ತಾಲೂಕಿನ ಉದಗಟ್ಟಿ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿವೆ. 4 ಸೇತುವೆಗಳ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 34 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳಗಾವಿಯಲ್ಲಿ ಮಳೆಯ ಅಬ್ಬರ:
ಬೆಳಗಾವಿ ನಗರದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ನಗರದ ರಸ್ತೆಗಳಲ್ಲಿ ನೀರು ಹರಿದು, ರಸ್ತೆಗಳೆಲ್ಲವೂ ನದಿಯಂತೆ ಭಾಸವಾಗುತ್ತಿವೆ. ಉಜ್ವಲ ನಗರದ ಸೇತುವೆ ಕೆಳಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ವಾಹನ ಸವಾರರು ಹರಸಾಹಸ ಮಾಡಿ ಸಂಚರಿಸುತ್ತಿರುವುದು ಕಂಡುಬಂತು. ಮಾರ್ಕಂಡೇಯ ನದಿ ಹಾಗೂ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದ್ದು, ನದಿ ಹಾಗೂ ನಾಲಾ ತೀರದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಜಲಾವೃತಗೊಂಡಿವೆ.
ಗೋಡೆ ಕುಸಿದು ವ್ಯಕ್ತಿ ಸಾವು:
ನಿಪ್ಪಾಣಿ ತಾಲೂಕಿನ ಜತ್ರಾಟ್ ಗ್ರಾಮದಲ್ಲಿ ಪಕ್ಕದ ಮನೆಗೋಡೆ ಕುಸಿದು ಶೆಡ್ ಮೇಲೆ ಬಿದ್ದಿದ್ದರಿಂದ ಒಳಗೆ ಮಲಗಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಿರುಪತಿ ಹತ್ಕರ್ (45) ಮೃತ ವ್ಯಕ್ತಿ. ಸ್ಥಳಕ್ಕೆ ನಿಪ್ಪಾಣಿ ತಹಸೀಲ್ದಾರ್ ಹಾಗೂ ಚಿಕ್ಕೋಡಿ ಉಪವಿಭಾಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.