ಗದಗ: ಇಲ್ಲಿಯ ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ತೆರಳು ಮುಂಭಾಗದಲ್ಲಿರುವ ರಸ್ತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ ಅವರ ಹೆಸರು ನಾಮಕರಣ ಮಾಡಿದರು.ನಂತರ ಮಾತನಾಡಿದ ಅವರು, ಅತ್ಯಂತ ಮುಖ್ಯ ಸುಂದರ ರಸ್ತೆಗೆ ನಾಮಕರಣ ಆಗಿರೋದು ಎಲ್ಲರಿಗೂ ಸಂತೋಷ ತಂದಿದೆ. ಮಾಜಿ ಶಾಸಕ ಸಿ ಎಸ್. ಮುತ್ತಿನಪೆಂಡಿಮಠ ಅವರ ರಾಜಕೀಯ ಜೀವನ ನಂತರದ ಒಡನಾಟ ಅನ್ಯೋನ್ಯವಾಗಿತ್ತು. ಅವರೊಂದಿಗೆ ಡಿ.ಆರ್. ಪಾಟೀಲ ಒಡನಾಟ ಸ್ನೇಹ ಸಂಬಂಧ ತುಂಬಾ ಚೆನ್ನಾಗಿತ್ತು. ಮುತ್ತಿನಪೆಂಡಿಮಠ ಅವರ ಸ್ನೇಹಿತರನ್ನು ನಾನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದೆ. ಅವರ ತತ್ವ ಸಿದ್ಧಾಂತ ಮೆಚ್ಚುವಂಥವು. ಅವರು ನಮ್ಮ ಹಿತೈಷಿಗಳು ಎಂಬುದು ಸಂತೋಷ ಎನಿಸಿತು ಎಂದರು.
ಮಾಜಿ ಸಚಿವ ಎಸ್. ಎಸ್. ಪಾಟೀಲ ಮಾತನಾಡಿ, ಸಿ.ಎಸ್. ಮುತ್ತಿನಪೆಂಡಿಮಠ ಅವರು ವಕೀಲರಾಗಿ ಜನಸೇವೆ ಮಾಡಿದ್ದಾರೆ. ನಾನು ಶಾಸಕನಾಗಲು ಪ್ರಮುಖ ಕಾರಣ ಸಿ. ಎಸ್. ಮುತ್ತಿನಪೆಂಡಿಮಠ ಎಂದರೆ ತಪ್ಪಾಗದು ಎಂದರು.
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರಸ್ತೆಗೆ ಸಿ. ಎಸ್. ಮುತ್ತಿನಪೆಂಡಿಮಠ ಹೆಸರಿಡಲು ನಗರಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿ ಅಂಗೀಕರಿಸಲಾಗಿದೆ. ಅವರು ಎರಡು ಬಾರಿ ಶಾಸಕರಾಗಿ ಉತ್ತಮ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ. ಅವರ ಕಾರ್ಯಗಳ ಮೂಲಕ ಜನಸಾಮಾನ್ಯರಲ್ಲಿ ಇಂದಿಗೂ ಅವರು ಅಜರಾಮರರಾಗಿದ್ದಾರೆ ಎಂದರು. ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯ ಪದ್ಮಾ ಕಟಗಿ, ಅನೀಲ ಅಬ್ಬಿಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೆಮನಿ ಪಾಟೀಲ, ಡಾ. ಎಂ.ಬಿ. ಪಾಟೀಲ, ವಿಶ್ವನಾಥ ಪಾಟೀಲ, ಪ್ರತಿಷ್ಠಾನದ ಅಧ್ಯಕ್ಷ ವಸಂತ ಮೇಟಿ ಹಾಜರಿದ್ದರು.