ಕಳಪೆ ಕಾಮಗಾರಿಯಿಂದ ರಸ್ತೆ ಆಯ್ತು ಗುಂಡಿ, ಗುಂಡಿ

KannadaprabhaNewsNetwork |  
Published : Oct 02, 2024, 01:11 AM IST
ಸುರಪುರ ತಾಲೂಕಿನ ಸೂಗುರ, ಹೆಮ್ಮಡಗಿ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಗುಂಡಿಗಳು.  | Kannada Prabha

ಸಾರಾಂಶ

ಸುರಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಿಸಿರುವ ರಸ್ತೆ ಕಾಮಗಾರಿ ಮುಗಿದು ವರ್ಷ ಆಗುವುದರೊಳಗೆ ಕಿತ್ತು ಹೋಗಿದ್ದು, ದೊಡ್ಡ ದೊಡ್ಡ ಗುಡಿಗಳು ಬಿದ್ದು ಸಂಚಾರ ದುಸ್ತರವಾಗಿದೆ.

ನಾಗರಾಜ್ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಿಸಿರುವ ರಸ್ತೆ ಕಾಮಗಾರಿ ಮುಗಿದು ವರ್ಷ ಆಗುವುದರೊಳಗೆ ಕಿತ್ತು ಹೋಗಿದ್ದು, ದೊಡ್ಡ ದೊಡ್ಡ ಗುಡಿಗಳು ಬಿದ್ದು ಸಂಚಾರ ದುಸ್ತರವಾಗಿದೆ. ತಾಲೂಕಿನ ಸೂಗೂರ, ಹೆಮ್ಮಡಗಿ, ಅಡ್ಡೊಡಗಿ, ಚೌಡೇಶ್ವರ ಹಾಳ ಕ್ರಾಸ್‌ವರೆಗೂ 2022-23ರಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಅಂದಾಜು 5 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ಆದರೆ, ವರ್ಷ ತುಂಬುವ ಮೊದಲೇ ಡಾಂಬಾರ್ ಕಿತ್ತು ಹೋಗಿ ಮಣ್ಣಿನ ರಸ್ತೆಯಾಗಿದೆ. ಈ ಕಳಪೆ ಕಾಮಗಾರಿಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಕೋಟ್ಯಂತರ ರು. ಗುಳುಂ?

ಒಂದು ಕಿ.ಮೀ.ಗೆ 60 ರಿಂದ 80 ಲಕ್ಷ ರು. ಖರ್ಚು ಮಾಡಲಾಗಿದೆ. ಸುಮಾರು ನಾಲ್ಕೈದು ಕೋಟಿ ರುಪಾಯಿಗಳು ಅನುದಾನದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಹೊಸ ರಸ್ತೆ ಮಾಡಲಾಗಿದೆ. ಕಳಪೆ ಕಾಮಗಾರಿಯಿಂದ ಅನುದಾನ ಗುಳಂ ಆಗಿರಬಹುದು ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರು ಕಳಪೆ ಕಾಮಗಾರಿಯಿಂದ ವರ್ಷ ಕಳೆಯುವಷ್ಟರಲ್ಲಿ ರಸ್ತೆ ಕಿತ್ತು ಹೋಗಿದೆ. ಇದರಿಂದ ಐದಾರು ಗ್ರಾಮಗಳು ಜನರು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವಾಹನಗಳು ರಸ್ತೆಯಲ್ಲಿ ಬಂದರೆ ದಾರಿಯಲ್ಲೇ ನಿಯಂತ್ರಣ ತಪ್ಪಿ ಬಿದ್ದು ಅಪಘಾತಗಳಾಗುವಷ್ಟು ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ.

ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಎದ್ದು, ದೊಡ್ಡ ದೊಡ್ಡ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಾಮಾನ್ಯವಾಗಿವೆ. ವೃದ್ಧರು ಈ ರಸ್ತೆಯಲ್ಲಿ ಸಂಚಾರ ಮಾಡಲು ಪರದಾಡುವಂತಾಗಿದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ತಿರುಗಿಯೂ ನೋಡದಿರುವುದು ಆಶ್ಚರ್ಯ ಮೂಡಿಸಿದೆ.

ಮರಳು ವಾಹನಗಳ ಸಂಚಾರ :

ಮರಳು ತುಂಬಿಕೊಂಡು ಹೋಗಲು ಪಿಡಬ್ಲ್ಯೂಡಿ ಮತ್ತು ತಹಸೀಲ್ದಾರ್ ಅವರು ರಾಯಲ್ಟಿ ಪಡೆಯುತ್ತಾರೆ. ಮರಳು ತುಂಬಿದ ಭಾರೀ ಲಾರಿಗಳ ಸಂಚಾರದಿಂದ ರಸ್ತೆ ಕಿತ್ತು ಹೋಗಿವೆ. ಧೂಳು ಎದ್ದು ಕಟಾವ್ ಹಂತದಲ್ಲಿರುವ ಹತ್ತಿ, ತೊಗರಿ, ಶೇಂಗಾ ಬೆಳೆಗಳ ಮೇಲೆ ಕೂರುತ್ತಿದೆ. ಹತ್ತಿ ಬಣ್ಣ ಕೆಂಪಾಗಿದೆ. ತೊಗರಿ ಇಳುವರಿ ಕುಂಠಿತವಾಗಿದೆ. ಶೇಂಗಾ ಬೆಳೆಗೆ ರೋಗ ಬರುತ್ತಿದೆ. ಈ ಬಗ್ಗೆ ತಹಸೀಲ್ದಾರರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ರೈತ ಮುಖಂಡ ವೆಂಕಟೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಪೆ ಕಾಮಗಾರಿಯಿಂದ ನಿರ್ಮಿಸಿದ ವರ್ಷದೊಳಗಡೆಯೇ ರಸ್ತೆ ಸಂಪೂರ್ಣ ಕಿತ್ತು ಗುಂಡಿಗಳು ಬಿದ್ದಿವೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಪಂಚಾಯತ್ ರಾಜ್ ಇಲಾಖೆ ಸಚಿವರು ಕ್ರಮ ಕೈಗೊಳ್ಳದಿದ್ದರೆ ಇಲಾಖೆ ಮುಂದೆ ಶೀಘ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತೆ.

ಮಲ್ಲಿಕಾರ್ಜುನ ಕ್ರಾಂತಿ, ದಲಿತ ಮುಖಂಡ, ಸುರಪುರ.

ನಾನು ಬಂದು ವರ್ಷವಾಗಿದೆ. ನಾನು ಇಲ್ಲಿಗೆ ಬರುವುದಕ್ಕಿಂತ ಮುಂಚೆಯೇ ಕೆಲಸ ಮುಗಿದಿದೆ. ಸಂಬಂಧಿಸಿದ ಸೆಕ್ಸನ್ ಅಧಿಕಾರಿಯನ್ನು ಮಾಹಿತಿ ಪಡೆದು ತಿಳಿಸುವೆ. ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನೀಯರ್ ಸಯೀದ್ ಮುಕ್ತೇರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!