ಮುಂಡರಗಿಯ ಹೆಸರೂರು ರಸ್ತೆ ಅಕ್ಕಪಕ್ಕ ಕಸವೋ ಕಸ

KannadaprabhaNewsNetwork |  
Published : Jan 24, 2026, 03:30 AM IST
22ಎಂಡಿಜಿ3, ಮುಂಡರಗಿ ಪಟ್ಟಣದ ಹೆಸರೂರ ರಸ್ತೆಯ ಪಕ್ಕದಲ್ಲಿ ಹಾಕಿರುವ ಕಸ.22ಎಂಡಿಜಿ3ಎ, ಮುಂಡರಗಿ ಪಟ್ಟಣದ ರಾಮೇನಹಳ್ಳಿ ರಸ್ತೆಯ ಪಕ್ಕದಲ್ಲಿ ಹಾಕಿರುವ ಕಬ್ಬಿನ ಕಸ. | Kannada Prabha

ಸಾರಾಂಶ

ಹೆಸರೂರು ವೃತ್ತದಿಂದ ಸ್ವಲ್ಪವೇ ದೂರದಲ್ಲಿ ರಸ್ತೆಬದಿ ಕೋಳಿ ಪುಚ್ಚ, ಪ್ಲಾಸ್ಟಿಕ್, ಫೇಪರ್ಸ್, ಹರಿದ ಬಟ್ಟೆ ಸೇರಿದಂತೆ ವಿವಿಧ ಕಸವನ್ನು ತಂದು ಸುರಿಯುತ್ತಿದ್ದಾರೆ. ಇಲ್ಲಿ ಕಸ ತಂದು ಸುರಿಯುವುದರಿಂದ ರಾತ್ರಿ ವೇಳೆ ಅದನ್ನು ತಿನ್ನಲು ನಾಯಿಗಳ ಹಿಂಡೇ ಬಂದಿರುತ್ತವೆ.

ಶರಣು ಸೊಲಗಿಮುಂಡರಗಿ: ಪಟ್ಟಣದ ಹೆಸರೂರು ರಸ್ತೆ, ರಾಮೇನಹಳ್ಳಿ ರಸ್ತೆಗಳ ಅಕ್ಕಪಕ್ಕದಲ್ಲಿ ಪಟ್ಟಣದ ಕೆಲವು ಸಣ್ಣಪುಟ್ಟ ವ್ಯಾಪಾರಸ್ಥರು ಕಸ ತಂದು ಬಿಸಾಕುತ್ತಿದ್ದಾರೆ. ಈ ಭಾಗದಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಹೆಸರೂರು ವೃತ್ತದಿಂದ ಸ್ವಲ್ಪವೇ ದೂರದಲ್ಲಿ ರಸ್ತೆಬದಿ ಕೋಳಿ ಪುಚ್ಚ, ಪ್ಲಾಸ್ಟಿಕ್, ಫೇಪರ್ಸ್, ಹರಿದ ಬಟ್ಟೆ ಸೇರಿದಂತೆ ವಿವಿಧ ಕಸವನ್ನು ತಂದು ಸುರಿಯುತ್ತಿದ್ದಾರೆ. ಇಲ್ಲಿ ಕಸ ತಂದು ಸುರಿಯುವುದರಿಂದ ರಾತ್ರಿ ವೇಳೆ ಅದನ್ನು ತಿನ್ನಲು ನಾಯಿಗಳ ಹಿಂಡೇ ಬಂದಿರುತ್ತವೆ. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಬಾರಿ ನಾಯಿ ಅಟ್ಟಿಸಿಕೊಂಡು ಹೋಗಿದ್ದರಿಂದ ಬೈಕ್ ಸವಾರರು ಬಿದ್ದಿದ್ದುಂಟು. ಎದುರಿನ ಸ್ವಲ್ಪವೇ ದೂರದಲ್ಲಿ ಬಾಲಕಿಯರ ವಸತಿನಿಲಯವಿದ್ದು, ನಿತ್ಯವೂ ಮಕ್ಕಳು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ರಾಮೇನಹಳ್ಳಿ ರಸ್ತೆಯೂ ಇದಕ್ಕೆ ಹೊರತಾಗಿಲ್ಲ. ಇಲ್ಲಿಯೂ ನಂಜನಗೂಡು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಅಕ್ಕಪಕ್ಕದಲ್ಲಿಯೇ ನಿತ್ಯ ಅಂಗಡಿಗಳ ಕಸ ಮತ್ತು ಪ್ಲಾಸ್ಟಿಕ್ ಎಸೆಯಲಾಗುತ್ತಿದೆ. ಅಲ್ಲದೇ ಪುರಸಭೆ ಮುಖ್ಯಾಧಿಕಾರಿ ವಸತಿನಿಲಯದ ಎದುರಿನಲ್ಲಿರುವ ಉದ್ಯಾನವನದ ಮುಂದೆ ಸಾಕಷ್ಟು ಕಸ, ಗಲೀಜು ತುಂಬಿದ್ದರೂ ಪುರಸಭೆ ಮಾತ್ರ ಇತ್ತ ತಿರುಗಿ ನೋಡುತ್ತಿಲ್ಲ. ಪಟ್ಟಣದಲ್ಲಿನ ಕಬ್ಬಿನ ಅಂಗಡಿಯವರು ಕಸವನ್ನು ತಂದು ಉದ್ಯಾನವನದ ಪಕ್ಕದಲ್ಲಿಯೇ ಹಾಕುತ್ತಾರೆ.

ಹೆಸರೂರು ರಸ್ತೆ ಹಾಗೂ ರಾಮೇನಹಳ್ಳಿ ರಸ್ತೆಯೂ ಸೇರಿದಂತೆ ಪಟ್ಟಣದ ವಿವಿಧೆಡೆ ಸಾರ್ವಜನಿಕರು ನಿತ್ಯ ರಸ್ತೆ ಪಕ್ಕದಲ್ಲಿ ಕಸ ತಂದು ಹಾಕಿದರೂ ಪುರಸಭೆ ಇದುವರೆಗೂ ಯಾರೊಬ್ಬರ ಮೇಲೆಯೂ ದೂರು ದಾಖಲಿಸಿದ್ದಾಗಲಿ, ದಂಡ ಹಾಕಿದ್ದಾಗಲಿ ಮಾಡಿಲ್ಲ. ಹೀಗಾಗಿ ಕಸ ಹಾಕುವವರಿಗೆ ಎಲ್ಲಿ ಕಸ ಹಾಕಿದರೂ ಕೇಳುವವರಿಲ್ಲ ಎನ್ನುವಂತಾಗಿದೆ.

ಪಟ್ಟಣದ ಅನೇಕ ಪ್ರಮುಖ ರಸ್ತೆಗಳಲ್ಲಿ ಬಯಲು ಬಹಿರ್ದೆಸೆ ಮುಕ್ತವಾಗಿ ಜರುಗುತ್ತಿದ್ದು, ಸ್ವಚ್ಛ ಭಾರತ ಯೋಜನೆ ಮೂಲಕ ಇದುವರೆಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತಿಳಿವಳಿಕೆ ಅಥವಾ ಕ್ರಮ ಕೈಗೊಂಡಿಲ್ಲ.

ಪುರಸಭೆಯಿಂದ ಸ್ವಚ್ಛ ಭಾರತ ಯೋಜನೆಯಲ್ಲಿ ಮನೆ ಮನೆಗೆ ಹಸಿ ಕಸ ಹಾಗೂ ಒಣ ಕಸ ಹಾಕುವ ಬಕೆಟ್‌ಗಳನ್ನು ಬಹುತೇಕ ಎಲ್ಲ ವಾರ್ಡ್‌ಗಳಿಗೂ ನೀಡಿದ್ದು, ಪಟ್ಟಣದ ಹೆಸರೂರು ರಸ್ತೆ ಆಶ್ರಯ ಕಾಲನಿಯ ಆಂಜನೇಯ ದೇವಸ್ಥಾನದ ಭಾಗದಲ್ಲಿ ಯಾವುದೇ ಮನೆಗಳಿಗೆ ಇದುವರೆಗೂ ನೀಡಿಲ್ಲ.

ಜನತೆ ತಮ್ಮ ಮನೆಯಲ್ಲಿನ ಬಕೆಟ್ ಅಥವಾ ಇತರೆ ವಸ್ತುಗಳಲ್ಲಿ ಅಥವಾ ಚೀಲದಲ್ಲಿ ಹಸಿಕಸ ಹಾಗೂ ಒಣ ಕಸ ಹಾಕಿರುತ್ತಾರೆ. ಆದರೆ ಕಸ ವಿಲೇವಾರಿ ವಾಹನದವರು ಎರಡೂ ಕಸ ಒಂದರಲ್ಲಿಯೇ ಹಾಕಿದರೆ ನಾವು ವಿಲೇವಾರಿ ಮಾಡುವುದಿಲ್ಲ ಎಂದು ಜನರಿಗೆ ತಾಕೀತು ಮಾಡುತ್ತಾರೆ. ಈ ಕುರಿತು ಹಿರಿಯ ಅಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ನಾಮಫಲಕ ಹಾಕಲಿ: ಕಸ ವಿಲೇವಾರಿಗೆಂದೇ ಸರ್ಕಾರ ಲಕ್ಷಾಂತರ ರು. ಹಣ ಖರ್ಚು ಮಾಡುತ್ತಿದ್ದು, ಸಾರ್ವಜನಿಕರು ಮಾತ್ರ ಇಲ್ಲಿಯೇ ಕಸ ತಂದು ಹಾಕುತ್ತಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆಗೆ ಗಮನಹರಿಸದಿರುವುದು ವಿಷಾದದ ಸಂಗತಿ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕದಂತೆ ಸ್ವಚ್ಛಗೊಳಿಸಿ ನಾಮಫಲಕ ಹಾಕುತ್ತಿರುವ ಪುರಸಭೆ ಇಲ್ಲಿಯೂ ಆ ರೀತಿ ಸ್ವಚ್ಛಗೊಳಿಸಿ ನಾಮಫಲಕ ಹಾಕಿಸಬೇಕು. ಆದಾಗ್ಯೂ ಹಾಕಿದಾಗ ಸಿಸಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಾದ ಪರಸಪ್ಪ ಸಿ.ಎಚ್. ಮುಂಡರಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ