ಶನಿವಾರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇಲ್ಲಿನ ಪ್ರಮುಖ ರಸ್ತೆಗಳು ನೀರು ತುಂಬಿ ನದಿಯಾಗಿ ಮಾರ್ಪಟ್ಟಿದ್ದವು.
ಕನ್ನಡಪ್ರಭ ವಾರ್ತೆ ಗೋಕರ್ಣ
ಶನಿವಾರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇಲ್ಲಿನ ಪ್ರಮುಖ ರಸ್ತೆಗಳು ನೀರು ತುಂಬಿ ನದಿಯಾಗಿ ಮಾರ್ಪಟ್ಟಿದ್ದವು.ಮಹಾಬಲೇಶ್ವರ ಮಂದಿರದ ಪಶ್ಚಿಮ ಬಾಗಿಲಿನ ಎದುರಗಡೆ ಮುಖ್ಯ ಕಡಲತೀರಕ್ಕೆ ಸಾಗುವ ಮಾರ್ಗದಲ್ಲಿ ಮಳೆ ನೀರು ಸಂಗಮ ನಾಲೇ ಸೇರುವಲ್ಲಿ ಪಕ್ಕದ ಅಂಗಡಿಕಾರರು ಚರಂಡಿ ಮುಚ್ಚಿದ ಪರಿಣಾಮ ನೀರು ತುಂಬಿ ಸಂಚಾರಕ್ಕೆ ತೊಡಕಾಯಿತು. ಇದರಿಂದ ದೇವಾಲಯದ ಅಮೃತಾನ್ನ ಭೋಜನ ಶಾಲೆಯ ಆವಾರಕ್ಕೂ ನೀರು ನುಗ್ಗಿತ್ತು. ದೇವಾಲಯದ ಹೊರಗಡೆ ಬಿಟ್ಟಿದ್ದ ಪಾದರಕ್ಷೆಗಳು ತೇಲುತ್ತಾ ಅತ್ತಿತ್ತ ಸಾಗುವುದು, ಹೊಲಸು ನೀರು ತುಳಿದು ಭಕ್ತರ ಸಾಗುವ ದೃಶ್ಯ ಕಂಡು ಬಂತು.ಮಹಾಗಣಪತಿ ಮಂದಿರದ ಪಕ್ಕದ ಗಾಯತ್ರಿ ಓಣಿಯಿಂದ ಬಂದ ಪರ್ವತ ಪ್ರದೇಶದ ಭಾರಿ ಪ್ರಮಾಣದ ನೀರು ಮಹಾಬಲೇಶ್ವರ ಮಂದಿರದ ಆವಾರ, ಮುಂಭಾಗದ ರಸ್ತೆಗಳಿಗೆ ನುಗ್ಗಿತ್ತು. ಎಲ್ಲೆಂದರಲ್ಲಿ ಬಿಸಾಡಿದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ನೀರಿನಲ್ಲಿ ತೇಲಿ ಬಂದಿದ್ದವು.ಇದರಂತೆ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ನೀರು ತುಂಬಿ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ತೆರಳಲು ತೀವ್ರ ತೊಂದರೆಯಾಯಿತು. ಇಲ್ಲಿ ಚರಂಡಿ ಸರಿಪಡಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಿಕೊಡಲು ಬೇಸಿಗೆಯಲ್ಲೇ ಗ್ರಾಪಂ ಹಾಗೂ ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗಿತ್ತು, ಆದರೆ ಯಾವುದೇ ಕ್ರಮ ತೆಗೆದುಕೊಳ್ಳದ ಪರಿಣಾಮ ಈ ಆವಾಂತರಕ್ಕೆ ಕಾರಣ ಎಂದು ಗ್ರಾಪಂ ಮಾಜಿ ಸದಸ್ಯ ಗಣಪತಿ ನಾಯ್ಕ ಹೇಳಿದ್ದಾರೆ. ನಿರ್ಜೀವವಾದ ಗ್ರಾಪಂ:
ಇಲ್ಲಿ ಆಗುತ್ತಿರುವ ಹಾಲಿ ಸ್ಥಿತಿಗತಿ ಕುರಿತು ಗ್ರಾಪಂ ಕಾರ್ಯದರ್ಶಿಗೆ ವಿಷಯ ತಿಳಿಸಿ ಪ್ರತಿಕ್ರಿಯೆ ಪಡೆಯಲು ಪತ್ರಿಕೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಗ್ರಾಪಂ ಅಭಿವೃದ್ದಿ ಅಧಿಕಾರಿ ಹಲವು ಪ್ರಯತ್ನದ ನಂತರ ದೂರವಾಣಿಗೆ ಸಿಕ್ಕಿದ್ದು, ತಾನು ಕುಮಟಾದಲ್ಲಿದ್ದೇನೆ, ಇಲ್ಲಿ ಮಳೆಯಿದೆ ಎಂಬ ಉತ್ತರ ನೀಡುತ್ತಾ ಸೋಮವಾರ ನೋಡೋಣ ಎನ್ನುವ ಉತ್ತರವಿತ್ತರು. ಜಿಪಂ ಕಾರ್ಯನಿರ್ವಾಹಣಾಧಿಕಾರಿ ಕರೆ ಸ್ವೀಕರಿಸದೆ ನಿರ್ಲಕ್ಷಿಸಿದ್ದಾರೆ. ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಯಾರಿಗೆ ಸ್ಪಂದಿಸಬಹುದು ಎಂಬುದೇ ತಿಳಿಯದಾಗಿದೆ. ಮಳೆಗಾಲದಲ್ಲಿ ಆಗುವ ಇಂತಹ ಅವಾಂತರಕ್ಕೆ ಮುಂಜಾಗ್ರತೆ ಕೈಗೊಳ್ಳುವ ಹೊಣೆಗಾರಿಕೆ ಯಾರದು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.