ರವಿ ಮೇಗಳಮನಿ
ಪಟ್ಟಣದ ಸರ್ವಜ್ಞ ಸರ್ಕಲ್‌ನಿಂದ ಕೋರ್ಟ್ ಮುಂಭಾಗ ಹೋಗುವ ಸಾಮಿಲ್‌ನ ವರಗಿನ ಹೊಲಬಿಕೊಂಡ ಗ್ರಾಮದ ಮಾರ್ಗದ ಕಡೆ ಸಂಪರ್ಕ ಕಲ್ಪಿಸಲು ಲೋಕೋಪಯೋಗಿ ಇಲಾಖೆಗೆ ಸೇರಿದ ಅರ್ಧ ಕಿ.ಮೀ. ರಸ್ತೆ ತಗ್ಗು ಗುಂಡಿ ಬಿದ್ದು ಹಾಳಾಗಿದ್ದು, ಸವಾರರು ಹಾಗೂ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ತಾಲೂಕಿನಾದ್ಯಂತ ಜಿಟಿ ಜಿಟಿ ಮಳೆ ಬರುತ್ತಿರುವುದರಿಂದ ಬೇಸಿಗೆ ಸಂದರ್ಭದಲ್ಲಿಯೇ ಹಾಳಾಗಿದ್ದ ರಸ್ತೆಗಳು ಈಗ ತೀರಾ ಹದಗೆಟ್ಟಿವೆ. ಪಟ್ಟಣದ ಬನ್ನಿಕೋಡ್ ಬಡಾವಣೆಗೆ ಹೋಗುವ ರಸ್ತೆಯಂತೂ ತೀರಾ ಹಾಳಾಗಿದೆ. ಅಲ್ಲಿನ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ. ಬೇಸಿಗೆ ಕಾಲದಲ್ಲಿ ಧೂಳುಮಯವಾಗಿದ್ದ ರಸ್ತೆಗಳು ಈಗ ಗುಂಡಿಮಯವಾಗಿವೆ. ರಸ್ತೆಯಲ್ಲಿ ಕೆಸರು ಹರಡಿಕೊಂಡಿದ್ದು, ಅದೇ ಸ್ಥಿತಿಯಲ್ಲಿ ಜನರು ಓಡಾಡುತ್ತಿದ್ದಾರೆ. ಪಟ್ಟಣದ ನವನಗರ, ಬಸವೇಶ್ವರ ನಗರದ 2ನೇ ಅಡ್ಡ ರಸ್ತೆ, ಸುತ್ತಮುತ್ತಲಿನ ರಸ್ತೆಗಳು ಹದಗೆಟ್ಟಿದೆ. ಈ ಮಾರ್ಗದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ತೀರಾ ಹದಗೆಟ್ಟ ರಸ್ತೆಯು ಕೆಸರು ಹೆಚ್ಚಾಗಿ ಬೈಕ್‌ಗಳು ಉರುಳಿಬಿದ್ದು ಅನಾಹುತಗಳು ಸಂಭವಿಸುತ್ತಿವೆ. ಪಟ್ಟಣದ ಬನ್ನಿಕೋಡ್ ಬಡಾವಣೆಗೆ ಹೋಗುವ ರಸ್ತೆಯಂತು ತೀರಾ ಹಾಳಾಗಿದೆ. ಈ ನಗರದಲ್ಲಿ ಮುಲ್ಲಾನಾ ಅಜಾದ ಶಾಲೆ ಇರುವುದರಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲಿಯೆ ತಗ್ಗುಗುಂಡಿಗಳನ್ನು ದಾಟಿ ಬಿದ್ದು ಎದ್ದು ಹೋಗುತ್ತಿದ್ಧರೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ತಗ್ಗು ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಬನ್ನಿಕೋಡ್ ವಾರ್ಡಿನ ನಿವಾಸಿ ಶಿವಯೋಗಿ ಮಕರಿ ಆಗ್ರಹಿಸಿದ್ದಾರೆ.ಪಟ್ಟಣದ ವಾರ್ಡಗಳ ರಸ್ತೆಗಳಲ್ಲಿ ಜೆಜೆಎಂ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಮನೆ ಮನೆಗಳಿಗೆ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ರಸ್ತೆಯನ್ನು ಎಲ್ಲಾ ಕಡೆ ಅಗೆದು ಪೈಪ್‌ಲೈನ್ ಹಾಕುತ್ತಿದ್ದು, ರಸ್ತೆಗಳು ತೀರಾ ಹದಗೆಟ್ಟಿವೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಸಹಾಯಕ ಎಂಜಿನಿಯರ್, ಅಧಿಕಾರಿಗಳನ್ನು ಕಳುಹಿಸಿ, ಪರಿಶೀಲನೆ ನಡೆಸಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು ಎಂದು ಪಿಡಬ್ಲ್ಯುಡಿ ಎಇ ಬಸವರಾಜ ಡಿ.ಬಿ. ಹೇಳಿದರು.