ಮಂಜುನಾಥ ಸಾಯೀಮನೆ
ಶಿರಸಿ:ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಅತಿ ಪ್ರಮುಖ ಸ್ಥಳ, ಇಕ್ಕಟ್ಟಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಈಗ ಹೆದ್ದಾರಿ ಕಾಮಗಾರಿ ಆರಂಭಗೊಂಡಿದೆ. ಸಾಲು ಸಾಲಾಗಿ ಬರುವ ವಾಹನಗಳ ಮಧ್ಯೆ ಇಕ್ಕಟ್ಟಿನ ಸ್ಥಳದಲ್ಲಿಯೇ ವಾಹನಕ್ಕೂ ದಾರಿ ಬಿಟ್ಟು ಕಾಮಗಾರಿ ನಡೆಸುವ ಸ್ಥಿತಿ ಉಂಟಾಗಿದೆ. ಇದರಿಂದಾಗಿ ಕಾರ್ಮಿಕರೂ ಭಯದಲ್ಲಿಯೇ ಕೆಲಸ ಮಾಡುವಂತಾಗಿದೆ.
ಹೌದು, ಶಿರಸಿ-ಕುಮಟಾ ರಸ್ತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಲ್ಲಿಯ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾಮಗಾರಿಯ ನಿರೀಕ್ಷಿತ ವೇಗವನ್ನು ಅರ್ಧಕ್ಕಿಳಿಸಿದೆ. ಗುತ್ತಿಗೆ ಪಡೆದ ಆರ್‌ಎನ್‌ಎಸ್ ಹಲವು ಸವಾಲುಗಳೊಂದಿಗೆ ಕಾಮಗಾರಿ ನಡೆಸುತ್ತಿದೆ. ಮಳೆಗಾಲದ ನಾಲ್ಕೈದು ತಿಂಗಳು ಏನೂ ಮಾಡಲಾಗದೇ ಕಳೆದುಹೋಗಿ, ಉಳಿದ ಎಂಟು ತಿಂಗಳಿನಲ್ಲಿಯೇ ಭರದಿಂದ ಕೆಲಸ ನಿರ್ವಹಿಸಿದೆ.ಶಿರಸಿಯಿಂದ ದೇವಿಮನೆ ಘಟ್ಟದ ವರೆಗೆ ಬಹುತೇಕ ರಸ್ತೆ ನಿರ್ಮಾಣ ಕಾರ್ಯ ಮುಗಿದಿದ್ದರೆ ಅತ್ತ ಕುಮಟಾ ಭಾಗದಿಂದ ಕತಗಾಲ ವರೆಗೆ ಒಂದು ಪಕ್ಕದಲ್ಲಿ ರಸ್ತೆ ನಿರ್ಮಾಣವಾಗಿದೆ. ಈಗ ಪ್ರಮುಖ ಹಂತದ ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಘಟ್ಟದ ಮೇಲೆ ಬೆಣ್ಣೆಹೊಳೆ ಸೇತುವೆ, ಅಮ್ಮಿನಳ್ಳಿ ಬಳಿ ಇನ್ನೊಂದು ಸೇತುವೆ ಸೇರಿದಂತೆ 12 ಸೇತುವೆಗಳಾಗಬೇಕಿದೆ. ಇದುವರೆಗೂ ಇಕ್ಕೆಲಗಳಲ್ಲಿ ಜಾಗ ಇದ್ದ ಕಾರಣ ಪಕ್ಕಕ್ಕೆ ವಾಹನ ಸಂಚಾರಕ್ಕೆ ಅವಕಾಶ ನೀಡಿ ರಸ್ತೆ ನಿರ್ಮಾಣ ಕೈಗೊಳ್ಳಲಾಗುತ್ತಿತ್ತು. ಆದರೆ, ಈಗ ದೇವಿಮನೆ ಘಟ್ಟ ಪ್ರದೇಶದಲ್ಲಿ 12 ಅಡಿ ಅಗಲದ ಜಾಗದಲ್ಲಿಯೇ ಬರುವ ವಾಹನಗಳಿಗೂ ದಾರಿ ಬಿಟ್ಟುಕೊಟ್ಟು ಕಾಮಗಾರಿ ನಡೆಸಬೇಕಾಗಿದೆ. ನಾಲ್ಕು ಕಡೆಗಳಲ್ಲಿ ಹೇರ್ ಪಿನ್ ತಿರುವು, ಬಹುತೇಕ ಕಡೆಗಳಲ್ಲಿ ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.
ಈ ಇಕ್ಕಟ್ಟಿನ ಸ್ಥಳದಲ್ಲಿ ವಾಹನ ಸಂಚಾರದೊಂದಿಗೆ ಕಾಮಗಾರಿ ನಡೆಸುವುದು ಕಷ್ಟವಾದ್ದರಿಂದ ಮೇ ತಿಂಗಳ ವರೆಗೆ ರಸ್ತೆ ಸಂಚಾರ ಸ್ಥಗಿತಗೊಳಿಸಿಕೊಡುವಂತೆ ಆರ್‌ಎನ್‌ಎಸ್ ಜಿಲ್ಲಾಡಳಿತವನ್ನು ಕೋರಿಕೊಂಡಿತ್ತು. ಅದರಂತೆ ಜಿಲ್ಲಾಡಳಿತ ನ. 1ರಿಂದ ಸಂಚಾರ ನಿರ್ಭಂಧಿಸುವುದಾಗಿಯೂ ಸೂಚಿಸಿತ್ತು. ಆದರೆ, ಆ ಬಳಿಕ ನಡೆದ ಬೆಳವಣಿಗೆಗಳು, ಜನಪ್ರತಿನಿಧಿಗಳ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಈ ಆದೇಶವನ್ನು ಹಿಂಪಡೆದು ರಸ್ತೆ ಸಂಚಾರವನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ. ವಾಹನ ಸಂಚಾರ ಬಂದ್ ಮಾಡಿದರೆ, ರಸ್ತೆ ಆಸು-ಪಾಸು ಹಳ್ಳಿ, ಗ್ರಾಮಗಳ ಜನರ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಪ್ರತಿನಿತ್ಯ ಬಸ್‌ನ್ನು ಅವಲಂಭಿಸಿರುವ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ, ಮಾರುಕಟ್ಟೆಗೆ ಬೆಳೆ ಸಾಗಾಟ ಮಾಡುವ ಕೃಷಿಕರಿಗೆ, ಉಡುಪಿ-ಮಂಗಳೂರು ಕಡೆ ಸಂಚರಿಸಬೇಕಾದ ರೋಗಿಗಳಿಗೆ ಹೀಗೆ ಹಲವರಿಗೆ ಸಂಚಾರ ಸಮಸ್ಯೆ ಎದುರಾಗುತ್ತದೆ. ಶಿರಸಿ ಮಾರ್ಗವಾಗಿ ಕರಾವಳಿ ಪ್ರದೇಶಕ್ಕೆ ಸುತ್ತು ಬಳಸಿ ಸಂಚರಿಸುವಂತಾಗಿ ದುಪ್ಪಟ್ಟು ವೆಚ್ಚ ಮಾಡಬೇಕಾಗುತ್ತದೆ ಎಂದು ರಸ್ತೆ ಸಂಚಾರ ಎಂದಿನಂತೆ ಇರುವಂತೆ ನೋಡಿಳ್ಳಲಾಗಿದೆ.ವಾಹನಗಳದ್ದೇ ಗೋಳು:
ಈ ಮಾರ್ಗದಲ್ಲಿ ಈಗ ತುರ್ತು ಸ್ಥಿತಿಯ ವಾಹನಗಳು ಮಾತ್ರ ಸಂಚರಿಸುವುದಿಲ್ಲ. ಎಲ್ಲ ಬಸ್, ಕಾರ್ ಇನ್ನಿತರ ವಾಹನಗಳು ಸಂಚರಿಸುತ್ತಿವೆ. ಒಂದು ತಾಸಿಗೆ 350ಕ್ಕೂ ಅಧಿಕ ವಾಹನಗಳು ಈ ಮಾರ್ಗದಲ್ಲಿ ಬರುತ್ತಿವೆ. ಬೃಹತ್ ಲಾರಿಗಳೂ ಸಹ ಯಾರದೇ ಆತಂಕವಿಲ್ಲದೇ ಈ ರಸ್ತೆಯಲ್ಲಿ ಬರುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಜೆಸಿಬಿ ಬಳಸಿ ಕೆಲಸ ಮಾಡುವ ವೇಳೆ ವಾಹನಗಳು ಸಾಲು ಸಾಲು ಬಂದು ನಿಲ್ಲುತ್ತಿವೆ. ಪ್ರವಾಸಿ ವಾಹನಗಳ ಸಾಲೂ ಈಗ ಜಾಸ್ತಿಯಾಗಿದೆ. ಕೆಲಸ ನಿಲ್ಲಿಸಿ ಜೆಸಿಬಿ ಯಂತ್ರವನ್ನು ಪಕ್ಕಕ್ಕೆ ಸರಿಸಿ ವಾಹನಗಳಿಗೆ ದಾರಿ ಮಾಡಲೆಂದೇ ಹತ್ತಾರು ಕಾರ್ಮಿಕರು ತಮ್ಮ ಕೆಲಸ ಬಿಟ್ಟು ನಿಂತಿದ್ದಾರೆ.ಶಿರಸಿ ಮತ್ತು ಕುಮಟಾದಲ್ಲಿ ರಸ್ತೆ ಆರಂಭವಾಗುವ ಸ್ಥಳದಲ್ಲಾದರೂ ಪೊಲೀಸ್ ಸಿಬ್ಬಂದಿ ಇಟ್ಟು ಅನಗತ್ಯ ಸಂಚಾರ ಮಾಡುವ ವಾಹನಗಳ ಸ್ಥಗಿತ ಮಾಡಬೇಕು. ಬದಲಿ ಮಾರ್ಗದಲ್ಲಿ ಸಾಗುವ ಸಾಧ್ಯತೆ ಇದ್ದ ವಾಹನಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತಾಗಬೇಕು. ಇನ್ನೊಂದೆಡೆ ಕಾಮಗಾರಿಯನ್ನು ಈ ಮಳೆಗಾಲದ ಪೂರ್ವದಲ್ಲಾದರೂ ಮುಗಿಸಲು ವಾಹನದಾರರು ಸ್ವಯಂಪ್ರೇರಣೆಯಿಂದ ಅನುವು ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಶಿರಸಿ-ಕುಮಟಾ ರಸ್ತೆಯಲ್ಲಿ ಎಲ್ಲ ವಾಹನಗಳ ಸಂಚಾರ ಬಂದ್ ಮಾಡುವುದು ಸೂಕ್ತವಾಗುವುದಿಲ್ಲ. ಆದರೆ ಘಟ್ಟದ ರಸ್ತೆ ಸೇತುವೆ ಕಾಮಗಾರಿಗೆ ಅನುಕೂಲ ಆಗುವಂತೆ ಈ ಮಾರ್ಗದಲ್ಲಿ ಭಾರಿ ವಾಹನಗಳು ಮತ್ತು ವೇಗದೂತ ಬಸ್‌ಗಳಿಗೆ ಬೇರೆ ಮಾರ್ಗ ತೋರಿಸಬಹುದು ಎಂದು ತಾಪಂ ಮಾಜಿ ಉಪಾಧ್ಯಕ್ಷ ಸಂತೋಷ ಗೌಡರ ಹೇಳಿದ್ದಾರೆ.