ಹಲ್ಲೆ ನಡೆಸಿದ ದರೋಡೆಕೋರನಿಗೆ ಪೊಲೀಸ್‌ ಗುಂಡೇಟು

KannadaprabhaNewsNetwork |  
Published : Jul 27, 2024, 12:47 AM IST
ಗುಂಡೇಟು | Kannada Prabha

ಸಾರಾಂಶ

ಅಂತಾರಾಜ್ಯ ಕುಖ್ಯಾತ ದರೋಡೆಕಾರನಾದ ಫರ್ಹಾನ್ ಶೇಖ್ ವಿರುದ್ಧ ವಿವಿಧ ರಾಜ್ಯದಲ್ಲಿ 15 ಪ್ರಕರಣಗಳಿವೆ. ಕಳ್ಳತನದ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ ತಪ್ಪಿಸಿಕೊಳ್ಳಲು ಯತ್ನಿಸುವಾಗ ನಮ್ಮ ಸಿಬ್ಬಂದಿ ಫೈರಿಂಗ್‌ ಮಾಡಿದ್ದಾರೆ. ಈ ಘಟನೆಯಲ್ಲಿ ನಮ್ಮ ಮೂವರು ಸಿಬ್ಬಂದಿಗೂ ಗಾಯಗೊಂಡಿದ್ದಾರೆ.

ಹುಬ್ಬಳ್ಳಿ:

ನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಬಂದೂಕು ಸದ್ದುಮಾಡಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಅಂತಾರಾಜ್ಯ ದರೋಡೆಕೋರನ ಮೇಲೆ ಪೊಲೀಸರು ಗುಂಡು ಹಾರಿಸಿ, ವಶಕ್ಕೆ ಪಡೆದಿದ್ದಾರೆ.

ಗಾಮನಗಟ್ಟಿ ತಾರಿಹಾಳ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಗುಂಡೇಟಿನಿಂದ ದರೋಡೆಕೋರ ಗಾಯಗೊಂಡರೆ, ಆತನ ದಾಳಿಯಿಂದ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಎಲ್ಲರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.

ಆಗಿದ್ದೇನು?

ನಗರದ ಕೇಶ್ವಾಪುರದಲ್ಲಿ ಕಳೆದ ವಾರ ಭುವನೇಶ್ವರ ಜುವೆಲರಿ ಶಾಪ್‌ನಲ್ಲಿ ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ, ಅಂತಾರಾಜ್ಯ ಕಳ್ಳ ಮುಂಬೈ ಮೂಲದ ಫರ್ಹಾನ್‌ ಶೇಖ ಎಂಬಾತನನ್ನು ಗುರುವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದರು. ಈತನಿಗೆ ಸಹಕಾರ ನೀಡಿದವರ ಬಂಧನಕ್ಕಾಗಿ ಈತನನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸ್‌ ಸಿಬ್ಬಂದಿ ಮಹೇಶ ಹಾಗೂ ಮಹಿಳಾ ಪೇದೆ ಸುಜಾತಾ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಅವರು ಗಾಯಗೊಂಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿಗೆ ಪೊಲೀಸರು ಮೊದಲಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಈತ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಈತನ ಪ್ರಯತ್ನ ಮಾತ್ರ ನಿಂತಿಲ್ಲ. ಬಳಿಕ ಕೇಶ್ವಾಪುರ ಠಾಣೆಯ ಮಹಿಳಾ ಪಿಎಸ್‌ಐ ಮಂಜುಳಾ ಮಾಡಗ್ಯಾಳ ಈತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆಗ ಆತ ಕುಸಿದು ಬಿದ್ದಿದ್ದಾನೆ. ಆತನನ್ನು ವಶಕ್ಕೆ ಪಡೆದು ಕಿಮ್ಸ್‌ಗೆ ದಾಖಲಿಸಿದ್ದಾರೆ. ಆರೋಪಿಯ ಹಲ್ಲೆಯಿಂದ ಸಿಬ್ಬಂದಿಗಳಾದ ಮಹೇಶ ಹಾಗೂ ಸುಜಾತ ಇಬ್ಬರಿಗೂ ಗಾಯಗಳಾಗಿವೆ. ಇವರನ್ನು ಕಿಮ್ಸ್‌ನಲ್ಲಿ ದಾಖಲಿಸಲಾಗಿದೆ.

ಗುಂಡೇಟಿನಿಂದ ಗಾಯಗೊಂಡಿರುವ ಫರ್ಹಾನ್‌ ಶೇಖನಿಗೆ ಕಿಮ್ಸ್‌ನ ಬಂಧಿ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಮೂವರೋ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಕಿಮ್ಸ್‌ಗೆ ಕಮಿಷನರ್‌ ಭೇಟಿ:

ಚಿಕಿತ್ಸೆ ಪಡೆಯುತ್ತಿರುವ ಫರ್ಹಾನ ಶೇಖ ಹಾಗೂ ಸಿಬ್ಬಂದಿಗಳನ್ನು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಡಿಸಿಪಿಗಳಾದ ರವೀಶ, ಮಾನಿಂಗ ನಂದಗಾವಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿದ್ದರು. ಈ ನಡುವೆ ಈತನಿಗೆ ಚಿನ್ನಾಭರಣ ಅಂಗಡಿ ಕಳ್ಳತನ ಮಾಡಲು ಸಹಕರಿಸಿದ ಇತರರ ಶೋಧ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.

ಯಾರೀತ:

ಫರ್ಹಾನ ಶೇಖ ಮುಂಬೈ ಮೂಲದವನು. ಈತ ನಟೋರಿಯಸ್‌ ಆರೋಪಿ. ಅಂತಾರಾಜ್ಯ ಕಳ್ಳತನ, ಡಕಾಯಿತಿ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಮುಂಬೈ ಸೇರಿ ವಿವಿಧೆಡೆ 8 , ತೆಲಂಗಾಣ ಮತ್ತು ಕರ್ನಾಟಕದಲ್ಲಿ ತಲಾ 3, ಗುಜರಾತ್‌ನಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು 15 ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಈತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಅಂತಾರಾಜ್ಯ ಕುಖ್ಯಾತ ದರೋಡೆಕಾರನಾದ ಫರ್ಹಾನ್ ಶೇಖ್ ವಿರುದ್ಧ ವಿವಿಧ ರಾಜ್ಯದಲ್ಲಿ 15 ಪ್ರಕರಣಗಳಿವೆ. ಕಳ್ಳತನದ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ ತಪ್ಪಿಸಿಕೊಳ್ಳಲು ಯತ್ನಿಸುವಾಗ ನಮ್ಮ ಸಿಬ್ಬಂದಿ ಫೈರಿಂಗ್‌ ಮಾಡಿದ್ದಾರೆ. ಈ ಘಟನೆಯಲ್ಲಿ ನಮ್ಮ ಮೂವರು ಸಿಬ್ಬಂದಿಗೂ ಗಾಯಗಳಾಗಿದ್ದು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್‌ ಆಯುಕ್ತ ಡಾ. ಎನ್‌. ಶಶಿಕುಮಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು