ದರೋಡೆ ಮಾಡಿದ್ದು 7.1 ಕೋಟಿ, ಆದ್ರೆ ಖರ್ಚು ಆಗಿದ್ದು ಈಗ 1.5 ಲಕ್ಷ !

KannadaprabhaNewsNetwork |  
Published : Nov 25, 2025, 04:15 AM ISTUpdated : Nov 25, 2025, 12:31 PM IST
Those born on these dates earn a lot of money by doing high level jobs

ಸಾರಾಂಶ

ಹಾಡುಹಗಲೇ ಎಟಿಎಂಗೆ ತುಂಬಿಸಲೆಂದು ಕೊಂಡೊಯ್ಯುತ್ತಿದ್ದ 7.1 ಕೋಟಿ ರು. ಲೂಟಿ ಮಾಡಿದ್ದ ಆರೋಪಿಗಳು ಕೋಟಿಗಟ್ಟಲೇ ಹಣ ದರೋಡೆ ಮಾಡಿದ್ದರೂ ಈ ಪೈಕಿ ಕೇವಲ ಒಂದೂವರೆ ಲಕ್ಷ ರು. ಮಾತ್ರ ಖರ್ಚು ಮಾಡಿದ್ದಾರೆ!

  ಬೆಂಗಳೂರು :  ಹಾಡುಹಗಲೇ ಎಟಿಎಂಗೆ ತುಂಬಿಸಲೆಂದು ಕೊಂಡೊಯ್ಯುತ್ತಿದ್ದ 7.1 ಕೋಟಿ ರು. ಲೂಟಿ ಮಾಡಿದ್ದ ಆರೋಪಿಗಳು ಕೋಟಿಗಟ್ಟಲೇ ಹಣ ದರೋಡೆ ಮಾಡಿದ್ದರೂ ಈ ಪೈಕಿ ಕೇವಲ ಒಂದೂವರೆ ಲಕ್ಷ ರು. ಮಾತ್ರ ಖರ್ಚು ಮಾಡಿದ್ದಾರೆ!

ತಮ್ಮ ಕೈಯಲ್ಲಿ ಕೋಟಿಗಟ್ಟಲೆ ಹಣವಿದ್ದರೂ ಆರೋಪಿಗಳು ವಾಹನಕ್ಕೆ ಪೆಟ್ರೋಲ್‌, ಲಾಡ್ಜ್‌ನಲ್ಲಿ ಉಳಿದುಕೊಳ್ಳಲು ಹಾಗೂ ಇತರೆ ಖರ್ಚಿಗೆ ಕೇವಲ ಒಂದೂವರೆ ಲಕ್ಷ ರು. ವ್ಯಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಕೆಲವರು ಗಾಂಜಾ ವ್ಯಸನಿಗಳಾಗಿದ್ದರು. ಅವರನ್ನು ಮಾದಕ ವ್ಯಸನಿಗಳ ಪುನರ್‌ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು. ನಂತರ ಹೊರಗಡೆ ಬಂದಿದ್ದರು. ಹಣದ ಆಸೆ ತೋರಿಸಿ ದರೋಡೆ ಕೃತ್ಯಕ್ಕೆ ಇವರನ್ನು ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರಿಗೆ ಗ್ರಿಲ್:

ಈ ದರೋಡೆ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿರುವ ಮತ್ತಿಬ್ಬರು ಆರೋಪಿಗಳನ್ನು ದಕ್ಷಿಣ ವಿಭಾಗದ ಸಿದ್ದಾಪುರ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕಲ್ಯಾಣ ನಗರ ನಿವಾಸಿ ದಿನೇಶ್ (32) ಮತ್ತು ಜಿನೇಶ್‌ (28) ಬಂಧಿತರು. ಈ ಮೂಲಕ ದರೋಡೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಪ್ರಕರಣದಲ್ಲಿ ಇದುವರೆಗೂ 6.55 ಕೋಟಿ ರು. ಜಪ್ತಿ ಮಾಡಲಾಗಿದ್ದು, ಆರೋಪಿಗಳಿಂದ ಬಾಕಿ ಇರುವ 56 ಲಕ್ಷ ರು. ರಿಕವರಿ ಮಾಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಜಿನೇಶ್‌ನನ್ನು ಬೆಂಗಳೂರಿನಲ್ಲಿ ಮತ್ತು ದಿನೇಶ್‌ನನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಈ ಮುನ್ನ ಸಿಎಂಎಸ್ ವಾಹನದ ಮೇಲ್ವಿಚಾರಕ ಗೋಪಾಲ್ ಅಲಿಯಾಸ್‌ ಗೋಪಿ, ಸಿಎಂಎಸ್‌ ಮಾಜಿ ಉದ್ಯೋಗಿ ಕ್ಸೇವಿಯರ್, ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್‌, ಕೃತ್ಯಕ್ಕೆ ಸಾಥ್ ನೀಡಿದ್ದ ನವೀನ್, ನೆಲ್ಸನ್ ಹಾಗೂ ರವಿ, ಈತನ ಸಹೋದರ ರಾಕೇಶ್‌ನನ್ನು ಬಂಧಿಸಲಾಗಿತ್ತು.

ಇದೀಗ ಬಂಧನಕ್ಕೊಳಗಾಗಿರುವ ಇಬ್ಬರು ಆರೋಪಿಗಳು ಅಶೋಕ್‌ ಪಿಲ್ಲರ್ ಬಳಿ ದರೋಡೆ ವೇಳೆ ಆರ್‌ಬಿಐ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಹೋಗಿದ್ದರು. ಈ ಆರೋಪಿಗಳ ಬಳಿ ಯಾವುದೇ ಹಣ ಪತ್ತೆಯಾಗಿಲ್ಲ. ಆದರೆ, ಬೇರೆಡೆ ಹಣ ಇಟ್ಟಿರುವುದಾಗಿ ಹೇಳುತ್ತಿದ್ದು, ಆ ಹಣವನ್ನು ವಶಕ್ಕೆ ಪಡೆಯುವ ಸಂಬಂಧ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ಪೈಕಿ ದಿನೇಶ್‌ ಕ್ಸೇವಿಯರ್‌ನ ಸ್ನೇಹಿತ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನೇಶ್ ಮತ್ತು ಜಿನೇಶ್ ಘಟನೆ ಬಳಿಕ ಚಿತ್ತೂರು-ವೇಲೂರು ಮಾರ್ಗವಾಗಿ ಚೆನ್ನೈಗೆ ಹೋಗಿದ್ದರು. ಅಲ್ಲದೆ, ಈ ಇಬ್ಬರು ಆರೋಪಿಗಳ ಬಳಿ ಬಾಕಿ 82 ಲಕ್ಷ ರು. ಹಣ ಇದೆ ಎಂಬ ಶಂಕೆ ಕೂಡ ಇತ್ತು. ಆದ್ದರಿಂದ ಇಬ್ಬರ ಪತ್ತೆಗೆ ಪೊಲೀಸರು ವೇಲೂರು, ಚಿತ್ತೂರು ವ್ಯಾಪ್ತಿಯಲ್ಲಿ ತೀವ್ರ ಶೋಧ ನಡೆಸಿದ್ದರು. ಆದರೆ, ಭಾನುವಾರ ಸಂಜೆ ಜಿನೇಶ್‌ ಬೆಂಗಳೂರಿಗೆ ಬಂದಾಗ ಬಂಧಿಸಲಾಗಿದೆ. ಇನ್ನು ದಿನೇಶ್‌ನನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಆರೋಪಿಗಳ ಬಳಿ ಯಾವುದೇ ಹಣ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಈವರೆಗೂ ಒಟ್ಟು ಒಂಬತ್ತು ಮಂದಿ ಬಂಧನಕ್ಕೊಳಗಾಗಿದ್ದಾರೆ. ಒಂಬತ್ತು ಮಂದಿ ಮುಖ್ಯ ಪಾತ್ರ ಇತ್ತು. ಇನ್ನೂ ಕೆಲವರದು ಸೈಡ್ ರೋಲ್ ಇತ್ತು. ತನಿಖೆ‌ ನಡೆಯುತ್ತಿದೆ. ಹಲವರು ಈ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ. ಅವರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ

-ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್‌ ಆಯುಕ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕುವೆಂಪು ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಶ್ರೀ ಶ್ಯಾಮ್ ಸುಂದರ್ ಹೆಗ್ಡೆ
ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!