ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅಪಾರ: ಶಾಸಕ ಜಿಟಿಡಿ ಪ್ರಶಂಸೆ

KannadaprabhaNewsNetwork |  
Published : Jun 18, 2025, 11:48 PM IST
30 | Kannada Prabha

ಸಾರಾಂಶ

ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ಕಾಯಕವೇ ಕೈಲಾಸ ಎಂಬ ತತ್ವ ನೀಡಿದ್ದಾರೆ. ಸೇವೆ ಮಾಡುವ ಎಲ್ಲರೂ ಇದನ್ನು ಅರಿತುಕೊಳ್ಳಬೇಕು. ಅದೇ ರೀತಿ ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಇಡೀ ದೇಶಕ್ಕೆ ಮಾದರಿಯಾದ ಆಡಳಿತ ನೀಡಿದವರು. ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದವರು.

ಕನ್ನಡಪ್ರಭ ವಾರ್ತೆ ಮೈಸೂರು

ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅಪಾರವಾದುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ. ದೇವೇಗೌಡ ಶ್ಲಾಘಿಸಿದರು.

ಕನ್ನಡಾಂಬೆ ರಕ್ಷಣಾ ವೇದಿಕೆಯು ಹೂಟಗಳ್ಳಿಯ ಸರಸ್ವತಿ ಸಮುದಾಯ ಭವನದಲ್ಲಿ ಬುಧವಾರ ಬಸವ ಜಯಂತಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ ಹಾಗೂ ಅವರೊಂದಿಗೆ ಸಹಪಂಕ್ತಿ ಭೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸುತ್ತಮುತ್ತ ಸ್ವಚ್ಛತೆ ಇದ್ದರೆ ಪರಿಸರವೂ ಸ್ವಚ್ಛವಾಗಿರುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಪೌರ ಕಾರ್ಮಿಕರ ಶ್ರಮದಿಂದಲೇ ಮೈಸೂರು ನಗರಕ್ಕೆ ಹಲವು ಬಾರಿ ಸ್ವಚ್ಥತಾ ನಗರಿ ಪ್ರಶಸ್ತಿ ಲಭ್ಯವಾಗಿದೆ ಎಂದರು.

ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ಕಾಯಕವೇ ಕೈಲಾಸ ಎಂಬ ತತ್ವ ನೀಡಿದ್ದಾರೆ. ಸೇವೆ ಮಾಡುವ ಎಲ್ಲರೂ ಇದನ್ನು ಅರಿತುಕೊಳ್ಳಬೇಕು. ಅದೇ ರೀತಿ ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಇಡೀ ದೇಶಕ್ಕೆ ಮಾದರಿಯಾದ ಆಡಳಿತ ನೀಡಿದವರು. ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದವರು ಎಂದರು.

ಬಸವ ಹಾಗೂ ನಾಲ್ವಡಿ ಅವರ ಜಯಂತಿ ಅಂಗವಾಗಿ ಪೌರ ಕಾರ್ಮಿಕರಿಗೆ ಉಚಿತವಾಗಿ ಬಟ್ಟೆ ವಿತರಿಸಿ, ಅವರೊಂದಿಗೆ ಸಹಪಂಕ್ತಿ ಭೋಜನೆ ಮಾಡುತ್ತಿರುವು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದರು.

ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಯುವ ಮುಖಂಡ ವಿ. ಕವೀಶ್‌ ಗೌಡ ಮಾತನಾಡಿ, ಪೌರ ಕಾರ್ಮಿಕರ ಸೇವೆಯ ಬಗ್ಗೆ ಅಪಾರವಾದ ಗೌರವವಿದೆ. ನೀವು ನಗರ, ಪಟ್ಟಣ ಪ್ರದೇಶಗಳ ಸ್ವಚ್ಛತೆಯ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಉನ್ನತ ಹುದ್ದೆಗಳಿಗೆ ಏರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಬೇಬಿಬೆಟ್ಟದ ಶ್ರೀ ರಾಮಯೋಗೇಶ್ವರ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣ ಮೌಢ್ಯ, ಕಂದಾಚಾರ ವಿರೋಧಿಸಿ, ವಿಶ್ವಗುರು ಎನಿಸಿಕೊಂಡರು. ಅವರು ತೋರಿಸಿದ ಮಾರ್ಗ, ಮಾಡಿದ ಸಾಧನೆ ನಮಗೆ ದಾರಿದೀಪವಾಗಿದೆ ಎಂದರು.

ಅದೇ ರೀತಿ ನಾಲ್ವಡಿ ಅವರು ಮಾಡಿದ ಜನೋಪಯೋಗಿ ಕೆಲಸಗಳಿಂದಾಗಿ ಮೈಸೂರು ರಾಜಮನೆತನದ ಬಗ್ಗೆ ಅಪಾರವಾದ ಗೌರವವಿದೆ. ಪ್ರತಿಯೊಬ್ಬರೂ ಮನೆಯಲ್ಲಿ ನಾಲ್ವಡಿಯವರ ಫೋಟೋ ಇಟ್ಟು ಪೂಜಿಸಬೇಕು ಎಂದರು.

ಸರ್ಕಾರ ನಮಗೆ ಬೇಕಾದ್ದನ್ನೆಲ್ಲಾ ಕೊಡುತ್ತಿದೆ ಎಂಬ ಕಾರಣದಿಂದ ಕೆಲವರು ದುಡಿಯುವುದನ್ನೇ ಬಿಟ್ಟಿದ್ದಾರೆ. ಈ ರೀತಿಯಾಗಬಾರದು. ದುಡಿದು ತಿನ್ನಬೇಕು. ರೈತಾಪಿ ವರ್ಗ ಬೆಳೆಯದಿದ್ದಲ್ಲಿ ಯಾರಿಗೂ ಅನ್ನ ಸಿಗುವುದಿಲ್ಲ. ಅದೇ ರೀತಿ ಪೌರ ಕಾರ್ಮಿಕರು ಸ್ವಚ್ಛ ಮಾಡದಿದ್ದಲ್ಲಿ ನಮ್ಮ ಪರಿಸರ ಏನಾಗುತ್ತದೆ ಯೋಜಿಸಿ ಎಂದರು.

ಎಲ್ಲಕ್ಕೂ ಸ್ಥಳೀಯ ಸಂಸ್ಥೆಗಳನ್ನು ಕಾಯದೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಸಲಹೆ ಮಾಡಿದರು.

ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎನ್‌. ಶ್ರೀನಿವಾಸನ್‌ ಮಾತನಾಡಿ, ಪೌರ ಕಾರ್ಮಿಕರು ದೇವರ ಸಮಾನ ಎಂದರು.

ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್‌ ಮಾತನಾಡಿ, ತಮ್ಮ ಮಟ್ಟದಲ್ಲಿ ಪೌರ ಕಾರ್ಮಿಕರಿಗೆ ಸಾಧ್ಯವಾದಷ್ಟು ಸೇವೆ ಮಾಡಲಾಗಿದೆ ಎಂದರು.

ಹೂಟಗಳ್ಳಿ ನಗರಸಭೆ ಆಯುಕ್ತ ಚಂದ್ರಶೇಖರ್‌ ಮಾತನಾಡಿ, ಪೌರಕಾರ್ಮಿಕರಿಂದಾಗಿಯೇ ನಾವು ಸ್ವಚ್ಥತಾ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಸೈನಿಕ ಅಕಾಡೆಮಿ ಮುಖ್ಯಸ್ಥ ಶ್ರೀಧರ್‌, ಸೆಸ್ಕ್‌ ಎಇಇ ಕೆ.ಕೆ. ಲಕ್ಷ್ಮೀಶ್‌, ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಎಸ್‌. ರವಿ ಮುಖ್ಯಅತಿಥಿಗಳಾಗಿದ್ದರು. ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಬಿ. ರಾಜಶೇಖರ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಮಾತನಾಡುವ ಗೊಂಬೆ ಖ್ಯಾತಿ ಸುಮಾ ರಾಜಕುಮಾರ್‌ ನಿರೂಪಿಸಿದರು.--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ