ಜನತಾ ಸೇವೆಯಲ್ಲಿ ಸಹಕಾರಿ ಸಂಘಗಳ ಪಾತ್ರ ಅಗ್ರಗಣ್ಯ: ಡಾ. ರಾಜೇಂದ್ರ ಕುಮಾರ್‌

KannadaprabhaNewsNetwork |  
Published : May 25, 2026, 03:00 AM IST
ವಿಶ್ವ ರೆಡ್‌ ಕ್ರಾಸ್‌ ದಿನಾಚರಣೆ ಅಂಗವಾಗಿ ಕಾರ್ಯಗಾರ ನಡೆಯಿತು | Kannada Prabha

ಸಾರಾಂಶ

ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್‌ಗಳು ವಿಲೀನಗೊಂಡು ಬ್ಯಾಂಕ್ ಹೆಸರೇ ಇಲ್ಲವಾಗಿದೆ. ಪ್ರಸ್ತುತ ದೇಶದಲ್ಲಿಯೇ ಸಹಕಾರಿ ಸಂಘಗಳು ಜನರಿಗೆ ಬೇಕಾದ ಸೇವೆ ನೀಡುವಲ್ಲಿ ಅಗ್ರಗಣ್ಯ ಸ್ಥಾನ ಪಡೆದಿವೆ. ಸಹಕಾರಿ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಜನರ ಬೆಳವಣಿಗೆಯ ಒಂದು ಭಾಗವಾಗಿ ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಬೆಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಕುಂದಾಪುರ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್‌ಗಳು ವಿಲೀನಗೊಂಡು ಬ್ಯಾಂಕ್ ಹೆಸರೇ ಇಲ್ಲವಾಗಿದೆ. ಪ್ರಸ್ತುತ ದೇಶದಲ್ಲಿಯೇ ಸಹಕಾರಿ ಸಂಘಗಳು ಜನರಿಗೆ ಬೇಕಾದ ಸೇವೆ ನೀಡುವಲ್ಲಿ ಅಗ್ರಗಣ್ಯ ಸ್ಥಾನ ಪಡೆದಿವೆ. ಸಹಕಾರಿ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಜನರ ಬೆಳವಣಿಗೆಯ ಒಂದು ಭಾಗವಾಗಿ ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಬೆಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಶುಕ್ರವಾರ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ ಇದರ ಕುಂದಾಪುರದ ಸಂಪೂರ್ಣ ಹವಾನಿಯಂತ್ರಿತ ಶಾಖೆ (12ನೇ ಶಾಖೆ) ಯನ್ನು ಕುಂದಾಪುರದ ಮುಖ್ಯ ರಸ್ತೆಯ ಪಾರಿಜಾತ ಹೋಟೆಲ್ ಬಳಿಯ ಶ್ರೀ ನಂದಿಕೇಶ್ವರ ಟವರ್ಸ್ ನಲ್ಲಿ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ, ಆದರೆ ಅದನ್ನು ಲಾಭದಲ್ಲಿ‌ ಮುನ್ನಡೆಸುವುದು ಸವಾಲು. ಸಹಕಾರಿ ಸಂಸ್ಥೆ ಬೆಳೆಯಬೇಕಾದರೆ ಸಿಬ್ಬಂದಿಗಳ ಕಾರ್ಯವೈಖರಿಯೂ ಪ್ರಮುಖವಾಗಿದೆ. ಸಿಬ್ಬಂದಿಗಳು ಜನಸ್ನೇಹಿಯಾಗಿ ಉತ್ತಮ ಕೆಲಸ ಮಾಡಿದರೆ ಸಂಸ್ಥೆಗಳು ಬೆಳೆಯುತ್ತದೆ. ನೂರು ವರ್ಷಗಳ ಇತಿಹಾಸವಿರುವ ಬಡಗುಬೆಟ್ಟು ಸೊಸೈಟಿಯು ಜನರ ಹತ್ತಿರಕ್ಕೆ, ಲಾಭದಾಯಕ ಮಟ್ಟಿಗೆ ಬೆಳೆದಿರುವುದು 35 ವರ್ಷಗಳಿಂದ. ಇದರ ಹಿಂದೆ ಜಯಕರ ಶೆಟ್ಟಿ ಹಾಗೂ ಅವರ ತಂಡದ ಪರಿಶ್ರಮವಿದೆ. ಬಂದ ಲಾಭದಲ್ಲಿ ಒಂದು ಭಾಗವನ್ನು ಸಾಮಾಜಿಕ ಕೈಂಕರ್ಯಕ್ಕೆ ವಿನಿಯೋಗಿಸುತ್ತಿರುವುದು ಶ್ಲಾಘನೀಯ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನಸಾಮಾನ್ಯರ ಬದುಕಿನ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುವಂತಹ ಏಕೈಕ ವ್ಯವಸ್ಥೆಯಾಗಿ ಸಹಕಾರಿ ಸಂಸ್ಥೆಗಳು ಬೆಳೆದು ಬಂದಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಎತ್ತರದ ಸ್ಥಾನದಲ್ಲಿರುವ ಸೊಸೈಟಿಗಳಲ್ಲಿ ಬಡಗಬೆಟ್ಟು ಸೊಸೈಟಿ ಒಂದಾಗಿದೆ. ಶತಮಾನದ ಇತಿಹಾಸ ಹೊಂದಿರುವ ಸಹಕಾರಿ ಸಂಘವನ್ನು ಇತ್ತೀಚಿನ ಕೆಲಸ ವರ್ಷಗಳಿಂದ ಜಯಕರ ಶೆಟ್ಟಿಯವರು ಕಟ್ಟಿ ಬೆಳೆಸಿ, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸಹಕಾರಿ ಸಂಘ ಯಾವ ರೀತಿ ಬೆಳೆಸಬಹುದು ಅನ್ನುವುದಕ್ಕೆ ಇದು ನಿದರ್ಶನ ಎಂದರು.

ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಹಕಾರಿ ಸಂಘಗಳು ವಾಣಿಜ್ಯ ಬ್ಯಾಂಕ್‌ಗಳಿಗೆ ಸಮಾನಂತರವಾಗಿ ಬೆಳೆಯುತ್ತಿದೆ. ಗ್ರಾಮೀಣ ಭಾಗದ ಜನರ ಕಷ್ಟ-ಸುಖಕ್ಕೆ ಶೀಘ್ರ ಸ್ಪಂದನೆ ನೀಡುವಲ್ಲಿ ಸಹಕಾರಿ ಸಂಘಗಳು ಮುಂಚೂಣಿ ಪಾತ್ರವಹಿಸಿ ತ್ವರಿತ ಸಾಲ ಸೌಲಭ್ಯ, ಉತ್ತಮ ಸೇವೆಯೊಂದಿಗೆ ಜನರ ವಿಶ್ವಾಸ ಪಡೆದಿದೆ ಎಂದರು.ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಹಿಂದೆ ಸಹಕಾರಿ ಕ್ಷೇತ್ರಕ್ಕೆ ಒಂದು ವ್ಯಾಪ್ತಿಯ ಮಿತಿಯಿತ್ತು. ಈಗ ಅದು ಎಲ್ಲ ಕಡೆಗೆ ವಿಸ್ತರಣೆಗೊಂಡಿದೆ. ಸಹಕಾರಿ ಸಂಘಗಳು ಜನರಿಗೆ ಇನ್ನಷ್ಟು ಆಕರ್ಷಕ ಸೇವೆ ಒದಗಿಸಬೇಕು. ಸರಕಾರದ ಮಟ್ಟದಲ್ಲಿ ಚರ್ಚಿಸಿ, ಸಾಲದ ಬಡ್ಡಿದರ ಇಳಿಸಿದರೆ ಬಹಳಷ್ಟು ಜನರಿಗೆ ಸಹಕಾರಿಯಾಗಲಿದೆ. ಶಿಕ್ಷಣಕ್ಕೆ ಭದ್ರತೆ ರಹಿತ ಸಾಲ ಸೌಲಭ್ಯದಂತಹ ಸೇವೆ ಆರಂಭಿಸಬೇಕು. ಸಹಕಾರಿ ಸಂಘಗಳು ಕೂಡ ಜನರಿಗೆ ಸ್ವಲ್ಪ ಉದಾರತೆಯನ್ನು ತೋರಿಸಿದರೆ ರೈತರು, ಯುವ ಸಮೂಹಕ್ಕೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, 107 ವರ್ಷಗಳ ಇತಿಹಾಸದ ಈ ಸಂಘವು ಏಳು-ಬೀಳುಗಳನ್ನು ಮೂರ್ನಾಲ್ಕು ದಶಕಗಳಿಂದ ಲಾಭದಾಯಕ ರೀತಿಯಲ್ಲಿ ಮುನ್ನಡೆಯುತ್ತಾ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಪ್ರಸ್ತುತ 23 ಸಾವಿರ ಸದಸ್ಯರಿದ್ದು, 662 ಕೋ.ರೂ. ಠೇವಣಿ, 528 ಕೋ.ರೂ. ಸದಸ್ಯರ ಹೊರಬಾಕಿ ಸಾಲ ಹೊಂದಿದೆ. 113.24 ಕೋ.ರೂ. ನಿಧಿ, 284.07 ಕೋ.ರೂ. ಹೂಡಿಕೆ, 795 ಕೋ.ರೂ. ದುಡಿಯುವ ಬಂಡವಾಳ, 2025-26 ನೇ ಸಾಲಿನಲ್ಲಿ 4062.29 ಕೋ.ರೂ. ವಾರ್ಷಿಕ ವಹಿವಾಟು ನಡೆಸಿ, 18.13 ಕೋ.ರೂ. ಲಾಭಗಳಿಸಿದ್ದು ಇದಕ್ಕೆ ಆಡಳಿತ ಮಂಡಳಿ ಮಾರ್ಗದರ್ಶನ, ಸಿಬ್ಬಂದಿ ಸಹಕಾರವೇ ಕಾರಣ ಎಂದರು.ಇದೇ ಸಂದರ್ಭ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನೂತನ ಶಾಖೆಯ ಪ್ರಥಮ ಗ್ರಾಹಕರಿಗೆ ಸಂಘದ ಖಾತೆಯ ಪಾಸ್ ಬುಕ್ ಮತ್ತು ಠೇವಣಿ ಪತ್ರ ವಿತರಿಸಲಾಯಿತು. ಇಂಜಿನಿಯರ್ ಮುರಳೀಧರ ಶೆಟ್ಟಿ ಅವರನ್ನು ಗೌರವಿಸಿ, ಕಟ್ಟಡದ ಮಾಲೀಕರಾದ ಜಿ.ಸುರೇಶ ಮತ್ತು ಜಿ.ಉದಯ ಅವರನ್ನು ಗುರುತಿಸಲಾಯಿತು.

ಉಡುಪಿ ಶಾಸಕ ಯಶಪಾಲ್ ಸುವರ್ಣ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಮಹೇಶ ಹೆಗ್ಡೆ ಮೊಳಹಳ್ಳಿ, ಜಿಲ್ಲಾ ಸಹಕಾರಿ ಉಪನಿಬಂಧಕಿ ಲಾವಣ್ಯ ಕೆ.ಆರ್., ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ., ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ನಿರ್ದೇಶಕರುಗಳಾದ ಸಂಜೀವ ಕಾಂಚನ್, ಪುರುಷೋತ್ತಮ ಪಿ.ಶೆಟ್ಟಿ, ಎಲ್.ಉಮಾನಾಥ, ಸಾಧು ಸಾಲ್ಯಾನ್, ಪದ್ಮನಾಭ ಕೆ.ನಾಯಕ್, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಿನಯ ಕುಮಾರ್ ಟಿ.ಎ., ಸದಾಶಿವ ನಾಯ್ಕ್, ಜಯ ಶೆಟ್ಟಿ, ಗಾಯತ್ರಿ ಎಸ್.ಭಟ್ ಮೊದಲಾದವರು ಉಪಸ್ಥಿತರಿದ್ದರು.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ.ಎಸ್., ನವೀನ್ ಕೆ., ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಸಮರ್ಥ್ ಶೆಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛತೆ ಎನ್ನುವುದು ನಿರಂತರ ಹವ್ಯಾಸವಾಗಲಿ
ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಕ್ಕೆ ತೆರೆ