ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತರು ಹಾಗೂ ಹಳ್ಳಿಗಳ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾಗಿದ್ದು, ಸಹಕಾರ ಸಂಘಗಳ ಬೆಳವಣಿಗೆಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಶ್ರಮಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ತಿಳಿಸಿದರು.ತಾಲೂಕಿನ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಶಿವಸ್ವಾಮಿ, ನೀಲಮ್ಮ ಅವಿರೋಧ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ರಾಜ್ಯ ಸರ್ಕಾರ ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಜೊತೆಗೆ ಪಡಿತರ ವಿತರಣೆ ಸೇರಿದಂತೆ ಅನೇಕ ರೈತರ ಪರ ಕಾರ್ಯಕ್ರಮಗಳನ್ನು ಸಹಕಾರ ಸಂಘದ ಮೂಲಕ ಅನುಷ್ಠಾನಗೊಳಿಸುತ್ತಿದೆ. ಮಾಜಿ ಶಾಸಕ ಪುಟ್ಟಸ್ವಾಮಿ ಸಂಸ್ಥಾಪಕ ಅಧ್ಯಕ್ಷರಾಗಿ ರಚನೆಗೊಂಡ ಸಂಘದಲ್ಲಿ ಅನೇಕ ಮುಖಂಡರು ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಹಾದಿಯಲ್ಲಿ ನೂತನ ಅಧ್ಯಕ್ಷ, ಉಪಾದ್ಯಕ್ಷರು ಸಾಗಬೇಕು ಎಂದು ಕಿವಿಮಾತು ಹೇಳಿದರು. ಶಿವಸ್ವಾಮಿ, ನೀಲಮ್ಮ ಅವಿರೋಧ ಆಯ್ಕೆ:
ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಿವಸ್ವಾಮಿ, ಉಪಾಧ್ಯಕ್ಷರಾಗಿ ನೀಲಮ್ಮ ಅವಿರೋಧ ಆಯ್ಕೆಯಾಗಿದ್ದು, ಅಧ್ಯಕ್ಷ–ಉಪಾದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧೀಕ್ಷಕ ನಾಗೇಶ್ ಅಧಿಕೃತವಾಗಿ ಘೋಷಣೆ ಮಾಡಿದರು. ನೂತನ ಅಧ್ಯಕ್ಷ ಶಿವಸ್ವಾಮಿ ಮಾತನಾಡಿ, ಸಂಘದ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಮುಖಂಡರು, ಹಿರಿಯರು ಹಾಗು ನಿರ್ದೇಶಕರು ಒಮ್ಮತದಿಂದ ಅವಿರೋಧ ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಂಘ, ಹಾಗೂ ಸರ್ಕಾರದಿಂದ ರೈತರಿಗೆ ದೊರೆಯುವ ಎಲ್ಲ ಸಾಲ ಸೌಲಭ್ಯಗಳನ್ನು ಕಲ್ಪಿಸಲು ಬದ್ಧನಾಗಿದ್ದೇನೆ. ಸಂಘದ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಇನ್ನು ಹೆಚ್ಚಿನ ಪ್ರಗತಿ ಮಾಡಲು ಶ್ರಮಿಸೋಣ ಎಂದರು. ಸಭೆಯಲ್ಲಿ ಸಂಘದ ನಿರ್ದೇಶಕರಾದ ಉಮೇಶ್, ಬಸವಣ್ಣ, ನಾಗರಾಜಪ್ಪ, ಪದ್ಮಾವತಿ, ಸಿದ್ದಶೆಟ್ಟಿ, ಮಂಜುನಾಥ, ಶಿವಕುಮಾರ್, ಬಸವನಾಯಕ ಪಿ. ಕುಮಾರ್, ಬಿ. ನಂಜಪ್ಪ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಮಂಜು, ಸಿಇಓ ಆಶೋಕ್, ನೌಕರರಾದ ಪ್ರಸನ್ನ, ನಾಗರಾಜು ಇದ್ದರು.