ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಅಮೋಘ

KannadaprabhaNewsNetwork | Published : Jul 3, 2024 12:18 AM

ಸಾರಾಂಶ

ಪ್ರತಿಯೊಂದು ಮಗುವಿಗೆ ಗುಣಮಟ್ಟದ ಶಿಕ್ಷಣ ಹಾಗೂ ಮಾನವೀಯ ಗುಣವುಳ್ಳ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿ

ಲಕ್ಷ್ಮೇಶ್ವರ: ಮಕ್ಕಳು ಮಾನವೀಯ ಗುಣ ಅಳವಡಿಸಿಕೊಂಡು ಬೆಳೆಯಬೇಕು. ಶಿಕ್ಷಣದ ಜತೆಯಲ್ಲಿ ಸಂಸ್ಕಾರ ಮತ್ತು ಮಾನವೀಯ ಮೌಲ್ಯ ಕಲಿಸುವ ಕಾರ್ಯವಾಗಬೇಕು ಎಂದು ಮುಂಡರಗಿಯ ಅನ್ನದಾನೀಶ್ವರ ಸ್ವಾಮಿಗಳು ಹೇಳಿದರು.

ಪಟ್ಟಣದ ಚೆನ್ನಮ್ಮನ ವನದಲ್ಲಿ ರಾಮಗೇರಿಯ ಬಸಣ್ಣ ಬೆಟಗೇರಿ ಅಭಿಮಾನಿ ಬಳಗವು ಹಮ್ಮಿಕೊಂಡ ಸದ್ಭೋದ, ಸಮ್ಮಾನ ಹಾಗೂ ಸಮ್ಮೀಲನ ಕಾರ್ಯಕ್ರಮದಡಿಯಲ್ಲಿ ಶನಿವಾರ ಸಂಜೆ ನಡೆದ ಪ್ರತಿಭಾ ಪುರಸ್ಕಾರ, ಉಪನ್ಯಾಸ, ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಂದು ಮಗುವಿಗೆ ಗುಣಮಟ್ಟದ ಶಿಕ್ಷಣ ಹಾಗೂ ಮಾನವೀಯ ಗುಣವುಳ್ಳ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಶಿಕ್ಷಣವು ಮನುಕುಲದ ಒಳಿತಿಗಾಗಿ ವಿನಿಯೋಗಿಸಬೇಕು, ಶಿಕ್ಷಣವು ಮಾನವನನ್ನು ಅನಾಗರಿಕತೆಯಿಂದ ಮಾನವೀಯತೆಗೆ ಕರೆದುಕೊಂಡು ಹೋಗುವ ಸಾಧನವಾಗಬೇಕು. ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ನೀಡುವುದನ್ನು ಕಲಿಸುವ ಜತೆಯಲ್ಲಿ ಮಾನವೀಯ ಮೌಲ್ಯ ಕಲಿಸುವುದು ಶಿಕ್ಷಣದ ಉದ್ದೇಶವಾಗಿದೆ ಎಂದು ಹೇಳಿದರು.

ಈ ವೇಳೆ ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಮಾತನಾಡಿ, ಸುಸ್ಥಿರ ಶಿಕ್ಷಣವು ಮನುಷ್ಯನ ಅಭಿವೃದ್ಧಿಗೆ ಪೂರಕವಾಗಿದೆ. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸುಸ್ಥಿರ ಶಿಕ್ಷಣವು ಕುಟುಂಬದ ಅಭಿವೃದ್ಧಿಗೆ ಪೂರಕವಾಗಿದೆ. ಗುಣಮಟ್ಟದ ಶಿಕ್ಷಣವು ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಮಹಿಳೆಯರು ತಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಹಾಗೂ ಸಾಂಸ್ಕೃತಿಕ ಮೌಲ್ಯ ತಿಳಿಸಿಕೊಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಈ ವೇಳೆ ಗದಗ ಜಿಲ್ಲಾ ಡಿಡಿಪಿಐ ಎಂ.ಎ. ರಡ್ಡೇರ ಹಾಗೂ ಬಸಣ್ಣ ಬೆಟಗೇರಿ, ಹಾನಗಲ್ಲ ತಾಲೂಕಿನ ಬಿಇಒ ವಿ.ವಿ. ಸಾಲಿಮಠ, ಮುಂಡರಗಿ ಬಿಇಒ ಎಚ್.ಎಂ. ಪಡ್ನೇಶಿ ಮಾತನಾಡಿದರು.

ಸಮಾರಂಭದಲ್ಲಿ ಲಕ್ಷ್ಮೇಶ್ವರ ಪಟ್ಟಣದ ಕರೇವಾಡಿ ಮಠದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಪದವಿ ಪೂರ್ವ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಕೊಕ್ಕರಗುಂದಿ ಹಾಗೂ ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಇದ್ದರು. ಶಿಕ್ಷಕ ಚಂದ್ರು ನೇಕಾರ ಸ್ವಾಗತಿಸಿದರು. ಎನ್.ಎನ್. ಶಿಗ್ಲಿ ನಿರ್ವಹಿಸಿದರು.

Share this article