ಕನ್ನಡಪ್ರಭ ವಾರ್ತೆ ಬೆಳಗಾವಿಹಬ್ಬಗಳ ಸಂಭ್ರಮ, ರೈತರ ಹೋರಾಟ ಹಾಗೂ ಸೂಕ್ಷ್ಮ ಸಂದರ್ಭಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಶ್ರಮದ ಜತೆಗೆ ಪತ್ರಕರ್ತರ ವಸ್ತುನಿಷ್ಠ ವರದಿಗಾರಿಕೆಯೂ ಮಹತ್ವದ ಪಾತ್ರ ವಹಿಸಿದೆ. ಘಟನೆಗಳನ್ನು ಅತಿರಂಜಿತಗೊಳಿಸದೆ, ವಾಸ್ತವಾಂಶಗಳ ಆಧಾರದಲ್ಲಿ ಸಮತೋಲಿತವಾಗಿ ವರದಿ ಮಾಡುವ ಮೂಲಕ ಬೆಳಗಾವಿಯ ಪತ್ರಕರ್ತರು ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ನಾಗನೂರಿನ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಬ್ಬಗಳ ಸಂಭ್ರಮ, ರೈತರ ಹೋರಾಟ ಹಾಗೂ ಸೂಕ್ಷ್ಮ ಸಂದರ್ಭಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಶ್ರಮದ ಜತೆಗೆ ಪತ್ರಕರ್ತರ ವಸ್ತುನಿಷ್ಠ ವರದಿಗಾರಿಕೆಯೂ ಮಹತ್ವದ ಪಾತ್ರ ವಹಿಸಿದೆ. ಘಟನೆಗಳನ್ನು ಅತಿರಂಜಿತಗೊಳಿಸದೆ, ವಾಸ್ತವಾಂಶಗಳ ಆಧಾರದಲ್ಲಿ ಸಮತೋಲಿತವಾಗಿ ವರದಿ ಮಾಡುವ ಮೂಲಕ ಬೆಳಗಾವಿಯ ಪತ್ರಕರ್ತರು ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ನಾಗನೂರಿನ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಬೆಳಗಾವಿ ಪತ್ರಕರ್ತರ ಸಂಘವು ನಾಗನೂರಿನ ರುದ್ರಾಕ್ಷಿಮಠದ ಸಹಯೋಗದಲ್ಲಿ ಶಿವಬಸವನಗರದ ಎಸ್ಜಿಬಿಐಟಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಗಾನ ಸಮ್ಮಾನ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸೂಕ್ಷ್ಮ ಜಿಲ್ಲೆಯೆಂಬ ಹಣೆಪಟ್ಟಿ ಹೊಂದಿರುವ ಬೆಳಗಾವಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ರೈತರ ಹೋರಾಟಗಳು, ಹಬ್ಬ-ಹರಿದಿನಗಳು ಸೇರಿದಂತೆ ಹಲವು ಮಹತ್ವದ ಸಂದರ್ಭಗಳಲ್ಲಿ ಪೊಲೀಸರು ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ಶಾಂತಿ ಕಾಪಾಡಲು ಶ್ರಮಿಸಿದ ಅಧಿಕಾರಿಗಳನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ. ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚಿಸುವುದರ ಜತೆಗೆ ಅದರ ಹಿಂದೆ ಶ್ರಮಿಸುವ ಅಧಿಕಾರಿಗಳ ಕಾರ್ಯವನ್ನೂ ಗುರುತಿಸಬೇಕು ಎಂದರು.
ಸರ್ಕಾರಿ ಅಧಿಕಾರಿಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ. ಕರ್ತವ್ಯ ನಿರ್ವಹಣೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದರೆ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಬೆಳಗಾವಿಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಕಾರ್ಯಸ್ವಾತಂತ್ರ್ಯ ನೀಡುತ್ತಿರುವುದು ಹಾಗೂ ಸಾರ್ವಜನಿಕರು, ಸಂಘಟನೆಗಳು ಸಹಕಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಪತ್ರಕರ್ತರು ಸಮಾಜದ ಜವಾಬ್ದಾರಿಯುತ ಭಾಗವಾಗಿದ್ದಾರೆ. ಸಣ್ಣ ಲೋಪವನ್ನು ದೊಡ್ಡದಾಗಿ ಬಿಂಬಿಸುವುದರಿಂದ ಅನಗತ್ಯ ವಿವಾದಗಳು ಸೃಷ್ಟಿಯಾಗಬಹುದು. ಹೀಗಾಗಿ ಸುದ್ದಿಗಳಲ್ಲಿ ವಸ್ತುನಿಷ್ಠತೆ ಮತ್ತು ಸಮತೋಲನ ಅತ್ಯಗತ್ಯ. ಬೆಳಗಾವಿಯ ಪತ್ರಕರ್ತರು ಜನರ ಭಾವನೆಗಳನ್ನು ಅರ್ಥಮಾಡಿಕೊಂಡು, ಅನಗತ್ಯ ಅತಿಶಯೋಕ್ತಿಗೆ ಅವಕಾಶ ನೀಡದೆ ವರದಿ ಮಾಡುತ್ತಿರುವುದು ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆಗೆ ಪೂರಕವಾಗಿದೆ ಎಂದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ತಂದೆ-ತಾಯಿಗಳ ಪಾತ್ರ ಮಹತ್ವದ್ದಾಗಿದೆ. ಪೋಷಕರು ತಮ್ಮ ನಡೆ-ನುಡಿಯ ಮೂಲಕ ಮಕ್ಕಳಿಗೆ ಆದರ್ಶವಾಗಬೇಕು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಬದುಕಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಕಬ್ಬು ಬೆಳೆಗಾರರ ಹೋರಾಟದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಹಲವು ದಿನಗಳ ಕಾಲ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ್ದರು. ಹಬ್ಬದ ದಿನಗಳಲ್ಲಿಯೂ ಮನೆಗೆ ತೆರಳದೆ ಕೆಲಸ ಮಾಡಿದ್ದ ಸಿಬ್ಬಂದಿಯ ಶ್ರಮವನ್ನು ಮಾಧ್ಯಮಗಳ ಮೂಲಕ ಜನರು ಗಮನಿಸುವಂತಾಯಿತು. ತಮ್ಮ ಕಾರ್ಯದ ಬಗ್ಗೆಯೂ ಜನರು ಮಾತನಾಡುತ್ತಿದ್ದಾರೆ ಎಂಬ ಅರಿವು ಸಿಬ್ಬಂದಿಗೆ ಮೂಡಿತು ಎಂದರು.
ಹೋರಾಟದ ಸ್ಥಳದ ವಿದ್ಯಮಾನಗಳನ್ನು ಜನರಿಗೆ ತಲುಪಿಸುವುದರ ಜತೆಗೆ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಶ್ರಮಕ್ಕೂ ಪತ್ರಕರ್ತರು ತಮ್ಮ ವರದಿಗಳಲ್ಲಿ ಆದ್ಯತೆ ನೀಡಿದ್ದರು. ಇದು ಪತ್ರಕರ್ತರ ವೃತ್ತಿಪರತೆಗೆ ಸಾಕ್ಷಿ ಎಂದರು.
ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ ಮಾತನಾಡಿ, ಬೆಳಗಾವಿಯ ಮಾಧ್ಯಮದವರ ಸಹಕಾರವನ್ನು ಮೆಚ್ಚಿದರು. ಸಾಮಾನ್ಯವಾಗಿ ಸುದ್ದಿಗೋಷ್ಠಿ ಹಾಗೂ ಕರ್ತವ್ಯದ ಸಂದರ್ಭದಲ್ಲಿ ಪತ್ರಕರ್ತರನ್ನು ಭೇಟಿಯಾಗುತ್ತಿದ್ದೆವು. ಆದರೆ ಈ ಕಾರ್ಯಕ್ರಮದಲ್ಲಿ ಅವರ ಕುಟುಂಬದವರನ್ನೂ ಒಂದೇ ವೇದಿಕೆಯಲ್ಲಿ ಭೇಟಿಯಾಗುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ಮಾತನಾಡಿ, ಬಾಲ್ಯದಲ್ಲಿ ಪತ್ರಿಕೆಗಳಿಗಾಗಿ ಕಾಯುತ್ತಿದ್ದ ದಿನಗಳನ್ನು ಸ್ಮರಿಸಿದರು. ತಮ್ಮ ಹಳ್ಳಿಗೆ ಒಂದೆರಡು ಪತ್ರಿಕೆಗಳು ಬರುತ್ತಿದ್ದವು. ಪತ್ರಿಕೆ ಕೈಗೆ ಸಿಕ್ಕ ತಕ್ಷಣ ಜಿಲ್ಲೆ ಹಾಗೂ ರಾಜ್ಯದ ವಿದ್ಯಮಾನಗಳನ್ನು ಕುತೂಹಲದಿಂದ ಓದುತ್ತಿದ್ದೆವು. ಆಗ ಸುತ್ತಲಿನ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಪತ್ರಿಕೆಗಳೇ ಪ್ರಮುಖ ಮಾಧ್ಯಮವಾಗಿದ್ದವು. ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಸುದ್ದಿ ತಲುಪುವ ವಿಧಾನ ಹಾಗೂ ಓದುವ ಅಭ್ಯಾಸದಲ್ಲೂ ಬದಲಾವಣೆಯಾಗಿದೆ ಎಂದರು.
ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ವೃತ್ತಿಜೀವನದ ಒತ್ತಡ ಮತ್ತು ಸಮಯದ ಅನಿಶ್ಚಿತತೆಯ ನಡುವೆಯೂ ಕುಟುಂಬಗಳು ನೀಡುವ ಬೆಂಬಲವನ್ನು ಗೌರವಿಸುವುದು ಕಾರ್ಯಕ್ರಮದ ಮುಖ್ಯ ಆಶಯವಾಗಿತ್ತು. ಪತ್ರಕರ್ತರ ಕುಟುಂಬಗಳಲ್ಲಿರುವ ಗಾಯನ ಸೇರಿದಂತೆ ವಿವಿಧ ಕಲಾಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯ ಕೋರಿ ಸನ್ಮಾನಿತರನ್ನು ಅಭಿನಂದಿಸಲಾಯಿತು. ಸಹಯೋಗ ನೀಡಿದ ನಾಗನೂರಿನ ರುದ್ರಾಕ್ಷಿಮಠಕ್ಕೆ ಕೃತಜ್ಞತೆ ಸಲ್ಲಿಸಲಾಯಿತು. ಜಿಪಂ ಸಿಇಒ ರಾಹುಲ ಶಿಂಧೆ, ಡಿಸಿಪಿ ಎನ್.ವಿ. ಬರಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೇಂದ್ರ ಗೃಹ ಸಚಿವರ ಪದಕ ಪುರಸ್ಕೃತ ಮಾಳಮಾರುತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ಅವರನ್ನು ಸನ್ಮಾನಿಸಲಾಯಿತು.
ಗಾನಸುಧೆಯಲ್ಲಿ ಮಿಂದೆದ್ದ ಪತ್ರಕರ್ತರ ಕುಟುಂಬಗಳು: ಬೆಳಗಾವಿ ಪತ್ರಕರ್ತರ ಸಂಘ ಆಯೋಜಿಸಿದ್ದ ಗಾನ ಸಮ್ಮಾನ ಕಾರ್ಯಕ್ರಮದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರು ಸುಮಧುರ ಗಾಯನದ ಮೂಲಕ ಸಂಗೀತಾಸಕ್ತರ ಮನಸೂರೆಗೊಂಡರು. ವಚನಗಾಯನ, ಭಾವಗೀತೆ ಹಾಗೂ ಜನಪ್ರಿಯ ಚಲನಚಿತ್ರ ಗೀತೆಗಳನ್ನು ಶ್ರುತಿಬದ್ಧವಾಗಿ ಪ್ರಸ್ತುತಪಡಿಸಿ ಪ್ರೇಕ್ಷಕರ ಗಮನ ಸೆಳೆದರು.
ಪತ್ರಿಕೋದ್ಯಮದ ವೃತ್ತಿಬದುಕಿನ ಒತ್ತಡದ ನಡುವೆಯೂ ತಮ್ಮಲ್ಲಿರುವ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಿದ ಪತ್ರಕರ್ತರ ಕುಟುಂಬದ ಸದಸ್ಯರು ವೇದಿಕೆಗೆ ಹೊಸ ಮೆರುಗು ನೀಡಿದರು. ಒಂದರ ನಂತರ ಮತ್ತೊಂದು ಸುಮಧುರ ಗೀತೆಗಳು ಸಭಾಂಗಣದಲ್ಲಿ ಸಂಗೀತದ ರಸದೌತಣ ಉಣಬಡಿಸಿದವು. ಗಾಯಕರ ಗಾಯನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿದರು. ಪತ್ರಕರ್ತರ ಕುಟುಂಬದ ಸದಸ್ಯರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜತೆಗೆ, ಪರಸ್ಪರ ಆತ್ಮೀಯತೆ ಮತ್ತು ಕೌಟುಂಬಿಕ ಬಾಂಧವ್ಯ ಬೆಸೆಯುವ ವೇದಿಕೆಯಾಗಿ ಗಾನ ಸಮ್ಮಾನ ಕಾರ್ಯಕ್ರಮ ಗಮನ ಸೆಳೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.