ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ನೈಜ ಮತ್ತು ನಿಷ್ಠುರತೆಯಿಂದ ವರದಿ ಮಾಡುವ ಮೂಲಕ ಸಮಾಜ ಸುಧಾರಣೆಯಲ್ಲಿ ಪತ್ರಕರ್ತರು ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಎಸ್.ಎ. ನಿಂಗೋಜಿ ಬಿಇಡಿ ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಐಡಿ ಕಾರ್ಡುಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ೪ನೇ ಅಂಗ ಪತ್ರಿಕೋದ್ಯಮವಾಗಿದ್ದು, ಸಾಮಾಜಿಕ ನ್ಯಾಯ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವಲ್ಲಿ ಪತ್ರಕರ್ತರ ಪರಿಶ್ರಮ ಅಪಾರವಾಗಿದೆ ಎಂದರು.ಪಟ್ಟಣದಲ್ಲಿ ಈಗಾಗಲೇ ಪತ್ರಕರ್ತರ ಸಂಘಕ್ಕೆ ನೀಡಿದ ಹಳೇ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಹಳೇ ಪಪಂ ಕಾರ್ಯಾಲಯದಲ್ಲಿ ಇದೀಗ ತಾತ್ಕಾಲಿಕವಾಗಿ ಸಂಘಕ್ಕೆ ಕಟ್ಟಡ ನೀಡಲಾಗಿದೆ. ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿಯವರ ಗಮನಕ್ಕೆ ತಂದು ಸುಮಾರು ₹೧೦ಲಕ್ಷ ವೆಚ್ಚದಲ್ಲಿ ಅದೇ ಜಾಗದಲ್ಲಿ ಹೊಸ ಪತ್ರಿಕಾ ಭವನ ನಿರ್ಮಿಸಿಕೊಡುವಂತೆ ಚರ್ಚಿಸಿ ಸುಸಜ್ಜಿತ ಮಾದರಿ ಭವನ ನಿರ್ಮಾಣ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಮುಖಂಡ ವೀರಣ್ಣ ಹುಬ್ಬಳ್ಳಿ, ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗೂಡ್ಲಾನೂರು, ರಾಜ್ಯ ಸಮಿತಿ ಸದಸ್ಯ ಎಚ್.ಎಸ್. ಹರೀಶ, ಎಂ. ಸಾದಿಕ ಅಲಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ರಾಷ್ಟ್ರೀಯ ಸಮಿತಿ ಸದಸ್ಯ ಜಿ.ಎಸ್. ಗೋನಾಳ ಮಾತನಾಡಿದರು. ಇದೇ ವೇಳೆ ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು.