ಸ್ವಾಸ್ಥ್ಯ ಸಮಾಜದಲ್ಲಿ ವಕೀಲರ ಪಾತ್ರ ಹಿರಿದು: ನ್ಯಾ.ದಿನೇಶಕುಮಾರ್

KannadaprabhaNewsNetwork |  
Published : Feb 12, 2024, 01:33 AM IST
ಸಾಗರದ ವಕೀಲರ ಭವನ ಉದ್ಘಾಟನಾ ಸಮಾರಂಭದಲ್ಲಿ ೫ ದಶಕ ವಕೀಲವೃತ್ತಿ ಮಾಡಿದವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಮಾಜವನ್ನು ಶಿಸ್ತುಬದ್ಧವಾಗಿ ಮತ್ತು ಆರೋಗ್ಯಕರವಾಗಿ ತೆಗೆದುಕೊಂಡು ಹೋಗುವಲ್ಲಿ ನ್ಯಾಯವಾದಿಗಳ ಪಾತ್ರ ಪ್ರಮುಖವಾಗಿದೆ ಎಂದು ನ್ಯಾ.ಪಿ.ಎಸ್.ದಿನೇಶಕುಮಾರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆ ಸಾಗರ ಕಾನೂನು ಪ್ರಕಾರ ಸಮಾಜ ನಡೆಯಬೇಕು ಎನ್ನುವುದು ಜನರ ಅಭಿಲಾಷೆ. ಇದು ಸರಿಯಾಗಿರಬೇಕಾದರೆ ವಕೀಲರು, ಅವರ ಕೆಲಸಕ್ಕೆ ಪೂರಕವಾದ ವಾತಾವರಣ ಇರಬೇಕು. ಅದನ್ನು ಒದಗಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ್ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲಾ ನ್ಯಾಯಾಲಯ, ಲೋಕೋಪಯೋಗಿ ಇಲಾಖೆ ಮತ್ತು ಸಾಗರದ ವಕೀಲರ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಕೀಲರ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸದರಿ ಭವನವು ಸುಪ್ರೀಂಕೋರ್ಟ್‌ನಲ್ಲಿರುವ ವಕೀಲರ ಭವನದ ಮಾದರಿಯಲ್ಲಿದ್ದು, ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ನ್ಯಾಯವಾದಿಗಳಲ್ಲದೆ ಕಕ್ಷಿದಾರರಿಗೂ ಭವನದ ಉಪಯೋಗ ಸಿಗುವಂತಾಗಲಿ ಎಂದು ಆಶಿಸಿದರು.

ಸಮಾಜವನ್ನು ಶಿಸ್ತುಬದ್ಧವಾಗಿ ಮತ್ತು ಆರೋಗ್ಯಕರವಾಗಿ ತೆಗೆದುಕೊಂಡು ಹೋಗುವಲ್ಲಿ ನ್ಯಾಯವಾದಿಗಳ ಪಾತ್ರ ಪ್ರಮುಖವಾಗಿದೆ. ಕಕ್ಷಿದಾರರಿಗೆ ನ್ಯಾಯದಾನ ಮಾಡುವ ವಕೀಲರ ದೈನಂದಿನ ಕಾರ್ಯಚಟುವಟಿಕೆಗಳನ್ನು ನಡೆಸಲು ಅಗತ್ಯವಾಗಿರುವ ಸುಸಜ್ಜಿತ ಭವನ ಇಲ್ಲಿ ನಿರ್ಮಾಣವಾಗಿದೆ. ಸುಸಜ್ಜಿತ ಗ್ರಂಥಾಲಯ, ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಎಲ್ಲವೂ ಆಧುನಿಕವಾಗಿ ರೂಪುಗೊಂಡಿದೆ. ಇವತ್ತಿನ ಸಂದರ್ಭದಲ್ಲಿ ಸುಸಜ್ಜಿತವಾದ ವಕೀಲರ ಭವನ ನಿರ್ಮಿಸಲು ಸರ್ಕಾರಗಳು ಅಗತ್ಯ ಅನುದಾನ ಹಾಗೂ ಸಹಕಾರ ನೀಡುತ್ತಿದೆ ಎಂದು ಹೇಳಿದರು.

ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ.ಹೆಗ್ಡೆ ಮಾತನಾಡಿ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಾಗರದ ವಕೀಲರ ಸಂಘದ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ, ವಕೀಲರ ಭವನಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಇಡೀ ರಾಜ್ಯದಲ್ಲಿ ಇಂತಹ ಭವ್ಯವಾದ ಸುಂದರವಾದ ಕಟ್ಟಡ ಬೇರೆ ಕಡೆ ಇಲ್ಲ. ಕಟ್ಟಡದ ಸ್ವಚ್ಛತೆ ಹಾಗೂ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಇಲ್ಲಿನ ವಕೀಲರ ಮೇಲಿದೆ ಎಂದು ಹೇಳಿದರು.

ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರದ ನ್ಯಾಯಾಲಯ ಹಾಗೂ ವಕೀಲರ ಸಂಘಕ್ಕೆ ತನ್ನದೆ ಆದ ಭವ್ಯ ಇತಿಹಾಸವಿದೆ. ಹಿರಿಯರಾದ ಕಾಗೋಡು ತಿಮ್ಮಪ್ಪನವರು ಇಲ್ಲಿಯೇ ವಕೀಲರಾಗಿ ಸೇವೆ ಸಲ್ಲಿಸಿ ರಾಜಕೀಯದಲ್ಲಿ ಮುಂಚೂಣಿಗೆ ಬಂದಿದ್ದಾರೆ. ಸುಸಜ್ಜಿತವಾದ ಭವನ ಬೇಕು ಎನ್ನುವ ಇಲ್ಲಿನ ವಕೀಲರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಭವನದ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ನೆರವನ್ನು ಸರ್ಕಾರದ ವತಿಯಿಂದ ನೀಡುವ ಭರವಸೆ ನೀಡಿದರಲ್ಲದೆ ಜನರಿಗೆ ಒಳಿತಾಗುವ ಉದ್ದೇಶದಿಂದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಒಟ್ಟಾಗಿ ಕೆಲಸ ಮಾಡುತ್ತಿದೆ. ನ್ಯಾಯಾಲಯದ ಗೌರವ ಕಾಪಾಡಿ, ವ್ಯವಸ್ಥೆಯ ಮೌಲ್ಯ ಹೆಚ್ಚಿಸಬೇಕು ಎಂದು ಹೇಳಿದರು.

ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆರ್.ದೇವದಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಉಚ್ಚ ನ್ಯಾಯಾಲಯದ ಮುಖ್ಯ ವಿಲೇಖನಾಧಿಕಾರಿ ಕೆ.ಎಸ್.ಭರತ್ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಎಚ್.ಬಿ. ರಮೇಶ್, ಲೋಕೋಪಯೋಗಿ ಇಲಾಖೆಯ ಜಗದೀಶ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ೫೦ ವರ್ಷ ವಕೀಲರಾಗಿ ಸೇವೆ ಸಲ್ಲಿಸಿರುವ ಎಂ.ಬಿ. ಪುಟ್ಟಸ್ವಾಮಿ, ಸಿ.ಎಲ್.ವೆಂಕಟಗಿರಿ, ಟಿ.ಬಿ.ಮಂಜುನಾಥ್ ಶೆಟ್ಟಿ, ಜಯಶೀಲ ಶೆಟ್ಟಿ, ಕೆ.ಎನ್.ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಈ. ನಾಯ್ಕ ವಂದಿಸಿದರು. ನ್ಯಾಯಾಧೀಶರಾದ ದೀಪಾ ಹಾಗೂ ಸಂತೋಷ್ ನಿರೂಪಿಸಿದರು.

PREV

Recommended Stories

ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು
ತೊಗರಿ ರೈತನಿಗೆ ಗದರಿದ ಖರ್ಗೆ ವಿರುದ್ಧ ವಿಪಕ್ಷ ಗರಂ