ಭದ್ರಾಗೆ ಕೇಂದ್ರ ಅನುದಾನದ ಬಗ್ಗೆ ಅನುಮಾನ ಬೇಡ: ಸಚಿವ ಎ.ನಾರಾಯಣಸ್ವಾಮಿ

KannadaprabhaNewsNetwork |  
Published : Feb 12, 2024, 01:33 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಪ ಸದಸ್ಯ ಕೆ.ಎಸ್.ನವೀನ್ ಧರಣಿ ನಿರತ ರೈತರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನದ ಬಗ್ಗೆ ಅನುಮಾನ ಬೇಡ. ಈ ಬಗ್ಗೆ ನಾನೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆ. ಯೋಜನೆಗೆ ಎದುರಾಗಿರುವ ಅಡೆತಡೆಗಳ ರಾಜ್ಯ ಸರ್ಕಾರ ಮೊದಲು ನಿವಾರಣೆ ಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಭದ್ರಾ ಮೇಲ್ದಂಡೆಗೆ ಕೇಂದ್ರ ಅನುದಾನ ಬಿಡುಗಡೆಗೆ ಆಗ್ರಹಿಸಿ, ರೈತ ಸಂಘ ಜಿಲ್ಲಾ ಪಂಚಾಯಿತಿ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ ಮಾತನಾಡಿದ ಅವರು ಕೇಂದ್ರದ ಅನುದಾನ ಪಡೆಯಲು ಕೆಲವು ಆರ್ಥಿಕ ಇಲಾಖೆ ಕೆಲವು ನಿಯಮಗಳ ರೂಪಿಸಿದೆ. ಅದನ್ನು ಪೂರೈಸುವ ಕೆಲಸ ರಾಜ್ಯ ಸರ್ಕಾರ ಮಾಡಲಿ ಎಂದು ಸಲಹೆ ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಅಜ್ಜಂಪುರ ರೇಲ್ವೆ ಅಂಡರ್ ಪಾಸ್‌ನಲ್ಲಿ ಕಾಲುವೆ ನಿರ್ಮಾಣಕ್ಕೆ ತೊಡಕು ಉಂಟಾಗಿತ್ತು. ಅಂದಿನ ರೇಲ್ವೆ ಸಚಿವ ಅಂಗಡಿ ಅವರ ಭೇಟಿ ಮಾಡಿ, 24 ಗಂಟೆಯೊಳಗೆ ಸ್ಥಳದಲ್ಲಿ ನಿಂತಿದ್ದು ಕಾಮಗಾರಿ ಪೂರ್ಣಗೊಳಿಸಿದ್ದೇನೆ. ಹಾಗಾಗಿಯೇ ಕಳೆದ ವರ್ಷ ವಾಣಿ ವಿಲಾಸ ಸಾಗರಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರಲು ಸಾಧ್ಯವಾಯಿತು. ಭದ್ರಾ ರಾಷ್ಟ್ರೀಯ ಯೋಜನೆ ಮಾಡಲು ಭದ್ರಾ ಕಚೇರಿಯಿಂದ ಕಡತಗಳ ತೆಗೆದುಕೊಂಡು ಹೋಗಿ ಶ್ರಮಿಸಿದ್ದೇನೆ. ಇಂಜಿನಿಯರ್ ಕರೆದೊಯ್ದು ಶ್ರಮಿಸಿದ್ದೇನೆ. ಕಾರಣಾಂತರದಿಂದ ರಾಷ್ಟ್ರೀಯ ಯೋಜನೆ ಘೋಷಣೆ ಸಾಧ್ಯವಾಗಲಿಲ್ಲ. ಬದಲಿ ಯೋಜನೆಯಡಿ ಅನುದಾನ ನೀಡಲು ಕೇಂದ್ರ ಸಿದ್ದವಿದ್ದು ಈ ಬಗ್ಗೆ ರಾಜ್ಯ ಸರ್ಕಾರ ತನ್ನ ಖಚಿತತೆ ಪೂರ್ಣಗೊಳಿಸಬೇಕಿದೆ ಎಂದರು.

ಅಬ್ಬಿನಹೊಳಲು ಬಳಿ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಸಮಸ್ಯೆ ನಾನೇ ಬಗೆಹರಿಸುವೆ ಎಂದಾಗ ಅಡ್ಡ ಬರಲಾಯಿತು. ಹಿಂದಿನ ಶಾಸಕ ಹಾಗೂ ಹಾಲಿ ಶಾಸಕರು ಇದಕ್ಕೆ ಅಡ್ಡಿಯಾಗಿದ್ದಾರೆ. ಸರ್ಕಾರ ಮನಸ್ಸು ಮಾಡಿದರೆ ಅರ್ಧ ಗಂಟೆಯಲ್ಲಿ ಸಮಸ್ಯೆ ನಿವಾರಣೆ ಮಾಡಬಹುದು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಅಧಿಕಾರಿಗಳು ಹೇಳಿದರು. ಕಳೆದ ಎರಡು ತಿಂಗಳಿನಿಂದ ಸಾಧ್ಯವಾಗಿಲ್ಲ. ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರ ತನ್ನ ಬದ್ಧತೆ ವ್ಯಕ್ತಪಡಿಸಲಿ ಎಂದರು.

ತಾವು ಸಂಸದರಾದ ನಂತರ ಸರ್ಕಾರಿ ಮೆಡಿಕಲ್ ಕಾಲೇಜು, ನೇರ ರೈಲು ಮಾರ್ಗ, ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಶ್ರಮಿಸಿದ್ದೇನೆ. ನಾನು ನಡೆಸಿರುವ ಸಭೆಗಳ ನಡಾವಳಿ ಗಮನಿಸಿದರೆ ಎಲ್ಲ ಅರ್ಥವಾಗುತ್ತದೆ. ಭದ್ರಾ ಮೇಲ್ಡಂಡೆಗಾಗಿ ಸಚಿವ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸಂಗಡ ದೆಹಲಿಗೆ ಹೋಗಿ ಮಾತುಕತೆ ನಡೆಸಿದ್ದೇನೆ. ರೈತರು ನೀರು ಕೊಡಿ ಕೇಳುವುದರಲ್ಲಿ ಅರ್ಥವಿದೆ. ಪ್ರಧಾನಿಯವರ ಭೇಟಿಗಾಗಿ ಸಮಯ ಪಡೆಯುವೆ. ರೈತರು ಅಂದು ನನ್ನೊಂದಿಗೆ ಬರಬಹುದು ಎಂದು ನಾರಾಯಣಸ್ವಾಮಿ ವಿನಂತಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್ ನವೀನ್ ಮಾತನಾಡಿ, ಕಳೆದ ವಿಧಾನಸಭೆ ಅಧಿವೇಶನದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಯಾವಾಗ ಮುಗಿಯುತ್ತೆ, ಯಾವ ಹಂತದಲ್ಲಿದೆ ಎಂಬ ಪ್ರಶ್ನೆ ಕೇಳಲಾಗಿತ್ತು. ₹22 ಸಾವಿರ ಕೋಟಿ ರುಪಾಯಿ ಯೋಜನೆ ಖರ್ಚಾಗಲಿದ್ದು, ವಿವಿದ ಹಂತದ ಪ್ರಗತಿಯಲ್ಲಿದೆ. ಕಳೆದ ಬಜೆಟ್ ನಲ್ಲಿ ₹2713 ಕೋಟಿ ಅನುದಾನ ಮೀಸಲು ಇಟ್ಟಿದ್ದೇವೆ, ಕೇಂದ್ರದ ಹಣ ಬರಲಿ ಮುಗಿಸುತ್ತೇವೆ ಎಂದಿದ್ದರು.

ಕಾಮಗಾರಿ ಮುಗಿಸಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಕೈ ಜೋಡಿಸಬೇಕಿದೆ. ರಾಜ್ಯ, ಕೇಂದ್ರದ ಹಣದ ಬಗ್ಗೆ ನಾವು ಜಿಲ್ಲೆಯ ರೈತರ ಜೊತೆ ಇದ್ದು ಹೋರಾಟ ಮಾಡುತ್ತೇವೆ. ಬಜೆಟ್ ಅಧಿವೇಶನದಲ್ಲಿ ಪಕ್ಷಾತೀತ ಹೋರಾಟ ಮಾಡುತ್ತೇವೆ. ರಾಜ್ಯದ ಪಾಲು ಬಿಡುಗಡೆ ಮಾಡಬೇಕು. ಬಿಜೆಪಿ, ಕಾಂಗ್ರೆಸ್ ಇಬ್ಬರೂ ಹಣ ಕೊಡಬೇಕು ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ದವೀರಪ್ಪ ಮಾತನಾಡಿ, ನಾವು ಯಾವ ಪಕ್ಷದ ಪರವಾಗಿಯೂ ಇಲ್ಲ. ಯೋಜನೆ ಬೇಗ ಮುಗಿದು ಜಿಲ್ಲೆಗೆ ನೀರು ಹರಿಯಬೇಕು ಎಂಬುದೇ ನಮ್ಮ ಬೇಡಿಕೆ. ಅಲ್ಲಿಯ ತನಕ ಧರಣಿ ಮುಂದುವರಿಸುವುದಾಗಿ ಹೇಳಿದರು. ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಈಗಾಗಲೇ ಚಿತ್ರದುರ್ಗ, ಚಳ್ಳಕೆರೆ ಬಂದ್ ಮಾಡಲಾಗಿದೆ. ನಾಡಿದ್ದು ನಾಯಕನಹಟ್ಟಿ ಬಂದ್ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕೆಂದರು.

ರೈತ ಸಂಘದ ಮುಖಂಡರಾದ ಆರ್.ಬಿ.ನಿಜಲಿಂಗಪ್ಪ, ಕೆ.ಟಿ.ತಿಪ್ಪೇಸ್ವಾಮಿ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಹಿರೇಕಬ್ಬಿಗೆರೆ ನಾಗರಾಜ್, ಬಾಗೇನಹಾಳು ಕೊಟ್ರಬಸಪ್ಪ, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ