ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಸದ ಬಿ.ವೈ. ರಾಘವೇಂದ್ರ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರುಕೇಂದ್ರ ಸರ್ಕಾರದ ಜನಪರ ಯೋಜನೆಗಳ ಲಾಭಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಗ್ರಾಪಂಗಳು, ಸ್ಥಳೀಯ ಸಂಸ್ಥೆಗಳ ಪಾತ್ರ ಹಿರಿದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸಮೀಪದ ಅರಹತೊಳಲಿನಲ್ಲಿ ಶನಿವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ 72 ಕಾರ್ಯಕ್ರಮಗಳು ಜನಸ್ನೇಹಿಯಾಗಿವೆ. ಅದರಲ್ಲಿ ಪ್ರಮುಖವಾಗಿ ಕಿಸಾನ್ ಸಮ್ಮಾನ್, ಉಜ್ವಲ, ಜನ್‌ಧನ್, ವಿಶ್ವಕರ್ಮ, ಮುದ್ರಾ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜನರಿಗೆ ಸುಲಭ ರೀತಿಯಲ್ಲಿ ದೊರೆಯುತ್ತವೆ. ಹಾಗೆಯೇ ಬ್ಯಾಂಕ್ ಗಳು ಸಹ ಜನರನ್ನು ಅಲೆದಾಡಿಸದೇ ಸರಿಯಾದ ಮಾಹಿತಿ ನೀಡಿ ಸ್ಪಂದಿಸಬೇಕು ಎಂದರು.2024ನೇ ಇಸ್ವಿ ದೇಶದ ಪಾಲಿಗೆ ಅಮೃತ ಕಾಲ. ಭಾರತ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಗ್ರಾಮಗಳು ಅಭಿವೃದ್ಧಿಯಾದರೆ ರಾಮ ರಾಜ್ಯ ನಿರ್ಮಾಣ ಕನಸು ನನಸಾಗುತ್ತದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬೆಲೆ ಏರಿಕೆಗಳು ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿವೆ. ರಾಜ್ಯದ ಪಡಿತರದಾರರಿಗೆ ಕೇಂದ್ರ ನೀಡುತ್ತಿರುವ 5 ಕೆಜಿ ಅಕ್ಕಿ ಮಾತ್ರ ಸಿಗುತ್ತಿದೆ. ಕೇಂದ್ರದ ಯೋಜನೆಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರ ಹೆಸರು ಮಾಡಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಉಚಿತ ಭಾಗ್ಯಗಳನ್ನು ನೀಡಿ ಇತರೆ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯದ ಅರ್ಥಿಕತೆಗೆ ಹೊಡೆತ ನೀಡಿದೆ ಎಂದರು.
₹523 ಕೋಟಿ ವೆಚ್ಚದಲ್ಲಿ ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಪೂರ್ಣವಾಗಿದೆ. ಭದ್ರಾನದಿಗೆ ನೂತನ ಸೇತುವೆ ನಿರ್ಮಾಣ ಕಾಮಾಗಾರಿ ಪ್ರಗತಿಯಲ್ಲಿದೆ. ಜಿಲ್ಲೆಯ ವಿಮಾನಯಾನ ಸೇವೆ ಆರಂಭ ಗರಿಮೆ ನೀಡಿದೆ. ದೇಶದ ಆರ್ಥಿಕವಾಗಿ ಶಕ್ತಿಯುಕ್ತವಾಗುತ್ತಿದೆ. ದೇಶದ ಪ್ರಗತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿಶ್ವದ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಭಾರತ ದೇಶ ಪ್ರಸ್ತುತ ವಿಶ್ವದ 5ನೇ ಆರ್ಥಿಕ ಶಕ್ತಿಯಾಗಿ ಮುನ್ನುಗ್ಗುತ್ತಿದೆ. 2047ರ 100ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಕ್ಕೆ ವಿಶ್ವದ ಒಂದನೇ ಆರ್ಥಿಕ ಶಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ 3.70 ಲಕ್ಷ ಮನೆಗಳನ್ನು ನೀಡಲಾಗಿದೆ. 2.50 ಲಕ್ಷ ಮನೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಕುಡಿವ ನೀರಿನ ಸಂಪರ್ಕ ನೀಡಲಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ನಡೆಯುತ್ತಿದೆ ಎಂದರು.
ಮಾಜಿ ಶಾಸಕ ಕೆ.ಬಿ. ಅಶೋಕ್‍ನಾಯ್ಕ್, ಪರಿಷತ್ ಸದಸ್ಯ ಡಿ.ಎಸ್. ಅರುಣ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮಿಬಾಯಿ, ಉಪಾಧ್ಯಕ್ಷ ಸಂಗನಾಥ್, ಕೆನರಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಮರನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ. ಮೇಘರಾಜ್, ಮಂಡಲ ಅಧ್ಯಕ್ಷ ಡಿ.ಮಂಜುನಾಥ್, ಸುಬ್ರಮಣ್ಣಿ, ಎಸ್.ಶ್ರೀನಿವಾಸ್, ರಾಜೇಶ್‍ಪಾಟೀಲ್, ಪಿಡಿಒ ಅನಿತಾ, ಎ.ಬಿ. ಮಲ್ಲೇಶಪ್ಪ, ಎ.ಎಂ. ಹಾಲೇಶಪ್ಪ, ಎ.ಆರ್. ಬಸವರಾಜ್, ಕೆ. ರಂಗನಾಥ್, ರಾಜಪ್ಪ, ಶಶಿಕಲಾ, ಪ್ರಭಾಕರ್, ವಿರೇಶಪ್ಪ, ಆಂಜನೇಯ, ಮಲ್ಲಿಕಾರ್ಜುನ್, ಪಾಲಾಕ್ಷಪ್ಪ, ರಾಧಕೃಷ್ಣ, ಸಿದ್ದಪ್ಪ, ಎ.ಕೆ ಮಹಾದೇವಪ್ಪ, ಸತೀಶ್‍ಗೌಡ, ಬಿ.ಹಾಲೋಜಿರಾವ್ ಇತರರಿದ್ದರು.- - -
09 ಎಚ್‍ಎಚ್‍ಆರ್ ಪಿ 01ಅರಹತೊಳಲಿನಲ್ಲಿ ಉಜ್ವಲ ಯೋಜನೆಯ ಪಲಾನುಭಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಉಚಿತ ಗ್ಯಾಸ್ ಸಿಲಿಂಡರ್ಗಳನ್ನು ವಿತರಣೆ ಮಾಡಿದರು. ಮಾಜಿ ಶಾಸಕ ಅಶೋಕ್ ನಾಯ್ಕ್, ಎಂಎಲ್‍ಸಿ ಡಿ.ಎಸ್ ಅರುಣ್ ಇತರರಿದ್ದರು.