ಕೊಪ್ಪಳ: ಸರ್ಕಾರ ಮತ್ತು ಜನರ ನಡುವೆ ಪತ್ರಿಕೆ ಮತ್ತು ಪತ್ರಕರ್ತರು ಸೇತುವೆಯಾಗಿ ಕೆಲಸ ಮಾಡುತ್ತಿವೆ, ಸಮಾಜ ಸುಧಾರಣೆಯಲ್ಲಿ ಮಾಧ್ಯಮದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಸ್ನೇಹ ಸಂಸ್ಥೆಯ ನಿರ್ದೇಶಕ ಟಿ.ರಾಮಾಂಜನೇಯ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಕರ್ತರ ಮೇಲಿನ ಅಪರಾಧಗಳಿಗೆ ನಿರ್ಭಯ ಕೊನೆಗೊಳಿಸುವ ಅಂತಾರಾಷ್ಟ್ರೀಯ ದಿನ ಹಾಗೂ ಮಕ್ಕಳ ಹಾಗೂ ದೇವದಾಸಿ ಮಹಿಳೆಯರ ಸಮಸ್ಯೆಗಳ ಕುರಿತು ಸರ್ಕಾರದಿಂದ ಹೊರಡಿಸಲಾದ ಆದೇಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಕಾರ್ಯಾಗಾರದ ಉದ್ಘಾಟನೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪತ್ರಕರ್ತರ ಮೇಲಿನ ದೌರ್ಜನ್ಯ ತಡೆಗಟ್ಟಲು ಅವರಿಗೆ ನಮ್ಮ ಸಂಸ್ಥೆಯ ಸಹಕಾರ ಕೂಡ ಇದೆ ಎಂದ ಅವರು, ದೇವದಾಸಿ ಪದ್ಧತಿ ಸಂಪೂರ್ಣ ತಡೆಗಟ್ಟಲು ಮಾಧ್ಯಮಗಳ ಸಹಕಾರ ಅತ್ಯವಶ್ಯಕವಾಗಿದೆ ಸರ್ಕಾರದ ಗಮನ ಸೆಳೆಯುವಂತ ವಿಶೇಷ ವರದಿ ಲೇಖನ ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ಜನರಲ್ಲಿ ಜಾಗೃತಿ ಮೂಡುತ್ತದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗುಂಡ್ಲಾನೂರ್ ಮಾತನಾಡಿ, ಶೋಷಿತ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಸಂಸ್ಥೆಗಳು ಮಾಡಬೇಕು. ಸರ್ಕಾರದಿಂದ ಸಿಗಬಹುದಾದ ಸೌಲಭ್ಯ ದೊರಕಿಸಿ ಕೊಡುವ ಕಾರ್ಯ ನಡೆಯಬೇಕು ಎಂದರು.ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪುರ್ ಮಾತನಾಡಿ, ದೇವದಾಸಿ ಪದ್ಧತಿ ಆಚರಣೆಯಲ್ಲಿ ಕೊಪ್ಪಳ ಜಿಲ್ಲೆ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಾವು ನಾಗರಿಕ ಸಮಾಜದಿಂದ ಇನ್ನೂ ದೂರ ಇದ್ದೇವೆ ಇಂತಹ ಆಚರಣೆ ತಡೆಗಟ್ಟಿ ಶೋಷಿತ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವಂತ ಕೆಲಸ ಮಾಡಬೇಕು ಎಂದರು.
ದೇವದಾಸಿ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸಂಸ್ಥೆಗಳು ಮತ್ತು ಮಾಧ್ಯಮದವರು ಸೇರಿ ಶ್ರಮಿಸಬೇಕು. 24*7 ಪತ್ರಕರ್ತರು ನಿರಂತರವಾಗಿ ಕೆಲಸ ಮಾಡುತ್ತಾರೆ ಅವರ ಮೇಲೆ ತೂಗುಗತ್ತಿಯಂತೆ ದೌರ್ಜನ್ಯ ನಡೆದಾಗ ಯಾರೊಬ್ಬರೂ ಅವರ ಸಹಾಯಕ್ಕೆ ಬರುವುದಿಲ್ಲ ಇದರಿಂದ ನಿಸ್ಪಕ್ಷಪಾತವಾಗಿ ಸುದ್ದಿ ಮಾಡಲು ಬಹಳಷ್ಟು ಕಷ್ಟವಾಗುತ್ತದೆ ಎಂದು ಹೇಳಿದರು.ಜಿಎಸ್ ಗೋನಾಳ, ವುಡ್ ಸಂಸ್ಥೆಯ ನಿರ್ದೇಶಕ ಎಂವಿ ಚಕ್ರಪಾಣಿ, ಸ್ನೇಹ ಸಂಸ್ಥೆಯ ಸಹಾಯಕ ನಿರ್ದೇಶಕಿ ಕೆಪಿ ಜಯಾ, ಎಂ. ಸಾಧಿಕಅಲಿ ಮಾತನಾಡಿದರು. ಶೇಕರವ್ವ ಪ್ರಾರ್ಥಿಸಿದರು. ಜಿ.ಕೆ. ಮಹಾಲಕ್ಷ್ಮಿ ಸ್ವಾಗತಿಸಿದರು , ಸಂಯೋಜಕಿ ಎಂ.ಶೋಭಾ ನಿರೂಪಿಸಿದರು. ಸಂಯೋಜಕಿ ಗಾಯತ್ರಿ ವಂದಿಸಿದರು. ಕಾರ್ಯಾಗಾರದಲ್ಲಿ ಪತ್ರಕರ್ತರು ಮಹಿಳೆಯರು ಯುವ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.