ಶಿರಸಿ: ಮನುವಿಕಾಸ ಸ್ವಯಂಸೇವಾ ಸಂಸ್ಥೆಯು ಸಿಎಂಎಸ್ ಫೌಂಡೇಶನ್ ಸಹಯೋಗದೊಂದಿಗೆ ಶನಿವಾರ ನಗರದ ಮಧುವನ ಹೋಟೆಲ್‌ನಲ್ಲಿ ಆಯ್ದ ರೈತ ಮಹಿಳೆಯರಿಗಾಗಿ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ಸಿಎಂಎಸ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳ ಬಗ್ಗೆ ವಿಸ್ತರವಾಗಿ ತಿಳಿಸಿದರು.ಹಿಂದಿನ ಕಾಲದಿಂದ ನಡೆದುಬಂದ ಕೃಷಿ ಸಂಪ್ರದಾಯಗಳು ಈಗ ಬದಲಾಗಿದೆ. ಈಗಿನ ಕಾಲದಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಅದರಿಂದ ಭೂಮಿಯಲ್ಲಿರುವ ಸೂಕ್ಮಣು ಜೀವಿಗಳಿಗೆ ಹಾಗೂ ಭೂಮಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಗತಿಪರ ರೈತರು ಮತ್ತು ಕೃಷಿ ಪ್ರಶಸ್ತಿ ಪುರಸ್ಕೃತ ಬಸವರಾಜ ನಡುವಿನಮನಿ ಮಾತನಾಡಿ, ತಾವು ಅಳವಡಿಸಿಕೊಂಡಿರುವ ಸುಸ್ಥಿರ ಕೃಷಿ ಮತ್ತು ಅದರ ಪ್ರಯೋಜನಗಳ ಕುರಿತು ಮಾಹಿತಿ ಹಂಚಿಕೊಂಡರು.ರೈತರು ತಮಗಿರುವ ಸೀಮಿತ ಜಮೀನಿನಲ್ಲಿ ಹೇಗೆ ವ್ಯವಸ್ಥಿತವಾಗಿ ಕೃಷಿ ಮಾಡಬಹುದು. ಹೊಸ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಬೆಳೆಗಳನ್ನು ಬೆಳೆಯುವ ಬಗೆ ಮತ್ತು ಅದಕ್ಕಿರುವ ಸವಾಲುಗಳನ್ನು ರೈತ ಮಹಿಳೆಯರಿಗೆ ತಿಳಿಸಿದರು.
ಮನುವಿಕಾಸ ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯ ಪ್ರೊ. ಕೆಂಪರಾಜು ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಕೃಷಿಯಿಂದ ಯುವ ಸಮೂಹ ಹಿಂದೆ ಸರಿದಿದೆ. ಇದು ಕಳವಳಕಾರಿ ಸಂಗತಿ. ಮನುಷ್ಯನಿಗೆ ನೀರು ಗಾಳಿ ಎಷ್ಟು ಮುಖ್ಯವೋ ಕೃಷಿಯೂ ಅಷ್ಟೇ ಮುಖ್ಯವಾಗಿದೆ ಎಂದರು.
ಮನುವಿಕಾಸ ಸಂಸ್ಥೆಯ ಯೋಜನಾ ಉಪನಿರ್ದೇಶಕರಾದ ಅಶ್ವತ್ಥ ನಾಯ್ಕ ನಿರೂಪಿಸಿದರು. ಸಂಸ್ಥೆಯ ಕ್ಷೇತ್ರ ಸಂಯೋಜಕ ನವೀನ ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ಗಣಪತಿ ಹೆಗಡೆ, ಭವಾನಿ ನಾಯ್ಕ, ಗೀತಾ ನಿಲೇಕಣಿ ಉಪಸ್ಥಿತರಿದ್ದರು.