ಗದಗ: ದೇಶದ ಅಭಿವೃದ್ಧಿಯಲ್ಲಿ ಪಂಚಾಯಿತಿಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು ಕ್ರಿಯಾತ್ಮಕವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಜರುಗಿದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶುದ್ಧ ಕುಡಿಯುವ ನೀರು ಮಾನವ ಹಕ್ಕಾಗಬೇಕು. ಇದಕ್ಕಾಗಿ ಪ್ರಯತ್ನ ನಡೆದಿದೆ. ಬಡಜನರ ಬದುಕಿನ ಗುಣಮಟ್ಟ ಉನ್ನತೀಕರಿಸಬೇಕು. ಅಭಿವೃದ್ಧಿಯಲ್ಲಿ ಜಿಲ್ಲೆಯ ಹಲವಾರು ಪಂಚಾಯಿತಿಗಳು ರಾಷ್ಟ್ರಮಟ್ಟದ ಮನ್ನಣೆಗೆ ಪಾತ್ರವಾಗಿರುವುದು ಸಂತಸದ ವಿಷಯ ಎಂದರು.
ಪ್ರಭುವಿನೆಡೆಗೆ ಪ್ರಭುತ್ವ ಎಂಬ ಕಾರ್ಯಕ್ರಮವನ್ನು ಆ. 15ರಂದು ಗದುಗಿನಲ್ಲಿ ಆರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ದೂರು ಅಹವಾಲುಗಳನ್ನು ಪ್ರ.ಪ್ರ. ಯಂತ್ರದಲ್ಲಿ ದಾಖಲಿಸುವ ಮೂಲಕ ಶೀಘ್ರ ಪರಿಹಾರ ಕಂಡುಕೊಳ್ಳಲು ಉತ್ತಮ ಮಾರ್ಗವಾಗಿದೆ. ಸಾರ್ವಜನಿಕರು ಹೆಚ್ಚು ಹೆಚ್ಚು ಸದ್ಬಳಕೆಯನ್ನು ಪ್ರ.ಪ್ರ. ಯಂತ್ರದ ನೆರವನ್ನು ಪಡೆಯಬೇಕು. ಸಾರ್ವಜನಿಕರ ಅಹವಾಲುಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಮುಂದಿನ ದಿನಮಾನಗಳಲ್ಲಿ ಇನ್ನಷ್ಟು ವಿಸ್ತರಿಸುವ ಯೋಜನೆಯಿದೆ ಎಂದರು.ಯೋಜನೆ ಪ್ರಶಂಸೆ: ರಾಜ್ಯ ಸರ್ಕಾರದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ಅನುಷ್ಠಾನದಿಂದ ಬಡತನ ನಿರ್ಮೂಲನೆಯಾಗಿದೆ. ಬಡಜನರ ಬದುಕನ್ನು ಹಸನಾಗಿಸಲು ಪಂಚ ಗ್ಯಾರಂಟಿ ಯೋಜನೆಗಳು ಮುಖ್ಯ ಪಾತ್ರ ವಹಿಸಿವೆ. ಗದಗ ಮತಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಯ ಗುರಿ ಶೇ. 99.2ರಷ್ಟು ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಶೇ. 99.4ರಷ್ಟು ಸಾಧನೆಯಾಗಿದೆ. ಪಂಚ ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ₹60,000 ಆರ್ಥಿಕ ಸೌಲಭ್ಯ ದೊರೆಯುತ್ತಿದ್ದು, ಬಡತನ ಮುಕ್ತ ಹಾಗೂ ಆರ್ಥಿಕ ಸಬಲೀಕರಣದತ್ತ ದಿಟ್ಟ ಹೆಜ್ಜೆ ಸರ್ಕಾರ ಇಟ್ಟಿದೆ ಎಂದರು.
ಈ ವೇಳೆ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಬಿ.ಬಿ. ಅಸೂಟಿ, ರಾಜೂರ, ಸಿದ್ಧು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಶಕುಂತಲಾ ಅಕ್ಕಿ, ಜೆ.ಕೆ. ಜಮಾದಾರ, ಸಿ.ಆರ್. ಮುಂಡರಗಿ ಇತರರು ಇಧ್ದರು.