ಮಕ್ಕಳ ಪ್ರಗತಿಗೆ ಪಾಲಕರ, ಶಿಕ್ಷಕರ ಪಾತ್ರ ಅಪಾರ

KannadaprabhaNewsNetwork |  
Published : Jul 12, 2025, 12:32 AM IST
ಲೋಕಾಪುರ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸ್ವಾಗತ ಮತ್ತು ಪಾಲಕರ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಈ ವೇಳೆ ಪ್ರಾಚಾರ್ಯರಾದ ಎಂ.ಎಚ್. ಹಡಪದ, ವಿಜಯಕುಮಾರ ಬಿರಾದಾರ, ವಿದ್ಯಾವತಿ ಬಿರಾದಾರ, ಹಸನ್‌ಡೋಂಗ್ರಿ ಮಹಾಲಿಂಗಪೂರ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಮಗುವಿನ ಶಿಕ್ಷಣ ಹೆಚ್ಚಿಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆಗಳು ಮತ್ತು ದೃಷ್ಟಿಕೋನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಿಕ್ಷಕರ ಮತ್ತು ಪಾಲಕರ ಕೊಡುಗೆ ಅತೀ ಮಹತ್ವವಾಗಿದೆ ಎಂದು ಸೂಳಿಭಾವಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಎಂ.ಎಚ್.ಹಡಪದ ಹೇಳಿದರು.ಸಮೀಪದ ಹೆಬ್ಬಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ವಾಗತ ಕಾರ್ಯಕ್ರಮ ಮತ್ತು ಪಾಲಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಮಗುವಿನ ಶಿಕ್ಷಣ ಹೆಚ್ಚಿಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆಗಳು ಮತ್ತು ದೃಷ್ಟಿಕೋನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಪೋಷಕರು ತಮ್ಮ ಮಗುವಿನ ಶಿಕ್ಷಣದಲ್ಲಿ ಸಕ್ರಿಯ ಪಾತ್ರ ವಹಿಸಬಹುದು. ತಮ್ಮ ಮಗು ಶಾಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತಷ್ಟು ಪ್ರೋತ್ಸಾಹಿಸಬಹುದು ಮತ್ತು ಪ್ರಭಾವ ಬೀರಬಹುದು ಎಂದು ಹೇಳಿದರು.

ಪ್ರಾಚಾರ್ಯ ವಿಜಯಕುಮಾರ ಮಾತನಾಡಿ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಪರಸ್ಪರ ಸಹಕಾರ ಮೂಲಕ ಮಗು ತನ್ನ ಅಧ್ಯಯನದಿಂದ ಹೆಚ್ಚಿನದನ್ನು ಪಡೆಯಲು ಸಾಧ್ಯವಾಗುತ್ತದೆ. ಶಾಲೆಗಳು ಕೆಲ ವಿಷಯ ಕಲಿಸಲು ಮಾತ್ರ ಉದ್ದೇಶಿಸಿಲ್ಲ. ಮಗುವಿನ ಸರ್ವಾಂಗೀಣ ಪ್ರಗತಿಗೆ ವಿವಿಧ ಕೌಶಲ್ಯಗಳು ಮತ್ತು ಸಾಮಾಜಿಕ, ಭಾವನಾತ್ಮಕ ಅಂಶಗಳನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದುಕೊಂಡ ಹೆಗ್ಗಳಿಕೆಗೆ ನಮ್ಮ ಶಾಲೆ ಪಾತ್ರವಾಗಿದೆ ಎಂದು ಹೇಳಿದರು.

ಪಾಲಕರ ಪ್ರತಿನಿಧಿ ಮತ್ತು ಪತ್ರಕರ್ತ ಹಸನ್‌ಡೋಂಗ್ರಿ ಮಹಾಲಿಂಗಪೂರ ಮಾತನಾಡಿ, ಹೆಬ್ಬಾಳ ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ವಸತಿ ಶಾಲೆ ಫಲಿತಾಂಶದಲ್ಲಿ ದಾಖಲೆ ಬರೆದಿದೆ. ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಸತತವಾಗಿ ೧೦೦ ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡು ಜಿಲ್ಲೆಗೆ ಮಾದರಿ ವಸತಿ ಶಾಲೆಯಾಗಿದೆ, ಪ್ರಸ್ತುತ ವರ್ಷದಲ್ಲಿ ಶಾಹಿನ್ ನದಾಫ್‌ ೬೨೫ ಕ್ಕೆ ೬೨೧ ಅಂಕ ಪಡೆದುಕೊಂಡು ರಾಜ್ಯಕ್ಕೆ ೫ ನೇ ರ‍್ಯಾಂಕ್‌ ಪಡೆದು ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾಳೆ, ಮುಂದಿನ ದಿನಗಳಲ್ಲಿ ಪ್ರತಿವರ್ಷ ಈ ಶಾಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಳ್ಳಲಿ ಎಂದು ಹಾರೈಸಿದರು.

ಹಾಸ್ಟೇಲ್ ವಾರ್ಡನ್ ವಿದ್ಯಾವತಿ ಬಿರಾದಾರ ಮಾತನಾಡಿ, ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇವೆ. ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಮುತುವರ್ಜಿ ತೆಗೆದುಕೊಂಡು, ಓದಲು ಒಳ್ಳೆಯ ವಾತಾವರಣದಲ್ಲಿ ನಿರ್ಮಿಸಲಾಗಿದೆ. ಎಲ್ಲ ಸಿಬ್ಬಂದಿ ವರ್ಗದ ಸಹಕಾರ ಅಗತ್ಯ ನೀಡಿದ್ದಾರೆ ಎಂದರು.

ವಕೀಲರಾದ ಶಿವು ಬಾಸುತಕರ ಮಾತನಾಡಿ, ಶಾಲೆಗೆ ಸಂಬಂಧಪಟ್ಟಂತೆ ಸಹಾಯ, ಸಹಕಾರ ನೀಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಉಪಪ್ರಾಚಾರ್ಯ ಶಶಿಧರ ಮಾಗಿ, ಶಿಕ್ಷಕರಾದ ರಮೇಶ ಲಮಾಣಿ, ಎಂ.ಐ. ಕೊಟೆಪ್ಪಗೋಳ, ಗೀತಾ ಹುಲಗಜ್ಜೆ, ದೈಹಿಕ ಶಿಕ್ಷಕರಾದ ಲಕ್ಷ್ಮಣ ಗುರಡ್ಡಿ, ಎಫ್‌ಡಿಎ ಗೋವಿಂದಪ್ಪ ಮಲಘಾಣ, ವಿದ್ಯಾರ್ಥಿಗಳು, ಪಾಲಕರು, ಶಾಲಾ ವಿದ್ಯಾರ್ಥಿಗಳು ಇದ್ದರು.

PREV