ಸಾರ್ವಜನಿಕರ ಆಸ್ತಿ ಪಾಸ್ತಿ ಸೇರಿದಂತೆ ಜನರ ಪ್ರಾಣ ರಕ್ಷಣೆಗೆ ತಮ್ಮ ಪ್ರಾಣ ತ್ಯಾಗ ಮಾಡುವ ಪೊಲೀಸರ, ಸಾಹಸ, ಶೌರ್ಯ ಸ್ಮರಿಸುವ ಜತೆಗೆ ಹುತಾತ್ಮರಾದ ಪೊಲೀಸರನ್ನು ಸ್ಮರಿಸಬೇಕು ಹಾಗೂ ಅವರ ಕುಟುಂಬದ ಸದಸ್ಯರ ಬೆಂಬಲಕ್ಕೆ ಇಲಾಖೆ ಹಾಗೂ ಪ್ರತಿಯೊಬ್ಬ ನಾಗರೀಕರು ನಿಲ್ಲಬೇಕಾಗಿದೆ
ಹೊಸಪೇಟೆ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಸಮಾಜವನ್ನು ಸದೃಢವಾಗಿಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ಡಿ.ಎ.ಆರ್.ಪರೇಡ್ ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಜನರ ಮಾನ, ಪ್ರಾಣ ರಕ್ಷಣೆ ಮಾಡುವ ಅದಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡುವ ಪೊಲೀಸರನ್ನು ಪ್ರತಿಯೊಬ್ಬರು ಬೆಂಬಲಿಸುವ ಮತ್ತು ಗೌರವಿಸುವ ಪ್ರತಿಜ್ಞೆ ಮಾಡಬೇಕು ಎಂದರು.
ಸಾರ್ವಜನಿಕರ ಆಸ್ತಿ ಪಾಸ್ತಿ ಸೇರಿದಂತೆ ಜನರ ಪ್ರಾಣ ರಕ್ಷಣೆಗೆ ತಮ್ಮ ಪ್ರಾಣ ತ್ಯಾಗ ಮಾಡುವ ಪೊಲೀಸರ, ಸಾಹಸ, ಶೌರ್ಯ ಸ್ಮರಿಸುವ ಜತೆಗೆ ಹುತಾತ್ಮರಾದ ಪೊಲೀಸರನ್ನು ಸ್ಮರಿಸಬೇಕು ಹಾಗೂ ಅವರ ಕುಟುಂಬದ ಸದಸ್ಯರ ಬೆಂಬಲಕ್ಕೆ ಇಲಾಖೆ ಹಾಗೂ ಪ್ರತಿಯೊಬ್ಬ ನಾಗರೀಕರು ನಿಲ್ಲಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್.ಹರ್ಷ ಮಾತನಾಡಿ, ಪೊಲೀಸ್ ಇಲಾಖೆ ಇಂದು ಹೆಚ್ಚಿನ ಸಂಧಿಗ್ಧ ಪರಿಸ್ಥಿಯಲ್ಲಿದ್ದು. ಪೊಲೀಸರು ಸಂಕೀರ್ಣ ಸವಾಲು ಎದುರಿಸುತ್ತಿದ್ದಾರೆ. ಇಂದು ಸಮಾಜದಲ್ಲಿ ಶಾಂತಿ ಸುವ್ಯಸ್ಥೆ ಇದ್ದರೆ ಅದಕ್ಕೆ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರಣ. ಹುತಾತ್ಮರಿಗೆ ನಿಜವಾದ ಗೌರವ ಸಿಗಬೇಕಾದರೆ ಪ್ರತಿಯೊಬ್ಬ ನಾಗರಿಕರು ಸಾಮಾಜಿಕ ಪ್ರಜ್ಞೆ ಕಾಪಾಡಬೇಕು. ಆಗ ಮಾತ್ರ ಪೊಲೀಸರ ಕಾರ್ಯ ಸುಲಭವಾಗಲಿದೆ ಎಂದರು.
ಪೊಲೀಸರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸವಾಲು ಎದುರಾಗಲಿವೆ. ಲಾಠಿ ಹಿಡಿದು ಕೆಲಸ ಮಾಡುವ ಕಾಲ ಬದಲಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ಪೊಲೀಸ್ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮಡಿದ ಪೊಲೀಸರು ನಮಗೆ ಸ್ಥೂರ್ತಿ ಆಗಬೇಕು. ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಯಾವುದೇ ಬಲಿದಾನಕ್ಕೆ ಸಿದ್ದವಿದೆ ಎಂದರು.
ಎಸ್ಪಿ ಎಸ್. ಜಾಹ್ನವಿ ಮಾತನಾಡಿ, 1959 ಅ.21 ರಂದು ಜಮ್ಮು ಕಾಶ್ಮೀರದ ಲಡಾಕ್ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಸಿಆರ್ಪಿಎಫ್ ಡಿವೈಎಸ್ಪಿ ಕರಣ್ ಸಿಂಗ್ ನೇತೃತ್ವದ ತುಕಡಿ ಮೇಲೆ ಚೀನಾ ದೇಶದ ಸೈನಿಕರು ದಾಳಿ ನಡೆಸಿದ್ದರು. ಸಾಮಾನ್ಯ ಬಂದೂಕು ಹೊಂದಿದ್ದ ಪೊಲೀಸರು, ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದ್ದ ಶತ್ರು ಸೈನಿಕರ ವಿರುದ್ಧ ಹೋರಾಟ ನಡೆಸಿ ಅದರಲ್ಲಿ 10 ಜನ ಸಿಆರ್ಪಿಎಫ್ ಸಿಬ್ಬಂದಿ ವೀರ ಮರಣ ಹೊಂದುತ್ತಾರೆ. ಅವರ ಸವಿನೆನಪಿಗಾಗಿ ಸ್ಮಾರಕ ನಿರ್ಮಿಸಿ ಅಂದಿನಿಂದ ಇಂದಿನವರೆಗೆ ಅ.21 ರಂದು ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
2025-26ನೇ ಸಾಲಿನಲ್ಲಿ ದೇಶದಲ್ಲಿ 154 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವೀರ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ 5 ಜನ ಪೊಲೀಸ್ ಅಧಿಕಾರಿ ಸಿಬ್ಬಂದಿ ತಮ್ಮ ಕರ್ತವ್ಯ ಪಾಲನೆಯಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
ಸ್ಮಾರಕಕ್ಕೆ ಹೂ ಗುಚ್ಛ ಸಮರ್ಪಣೆ: ಕಾರ್ಯಕ್ರಮದ ಅಂಗವಾಗಿ ಡಿಎಆರ್ ಮೈದಾನದಲ್ಲಿನ ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಪಿ.ಹರ್ಷ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಹೊಸಪೇಟೆ ಡಿವೈಎಸ್ಪಿ ಪಿ.ಮುರಳೀಧರ್, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಹರಪನಹಳ್ಳಿ ಡಿವೈಎಸ್ಪಿ ಸಂತೋಷ್ ಚವ್ಹಾಣ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹೂ ಗುಚ್ಛ ಸಮರ್ಪಿಸುವ ಮೂಲಕ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ಸೂಚಿಸಿದರು.
ಗೌರವ ವಂದನೆ: ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಪರೇಡ್ ಕಮಾಂಡರ್ ಡಿಎಆರ್ ಪಿಐ ಎ.ಗೋವಿಂದ ನೇತೃತ್ವದಲ್ಲಿ ಪೊಲೀಸ ತುಕಡಿಗಳ ಸಮಾವೇಶ, ಫೈರಿಂಗ್ ಪಾರ್ಟಿಯಿಂದ ಮೂರು ಸುತ್ತು ವಾಲಿ ಫೈರಿಂಗ್ ಮಾಡುವ ಮೂಲಕ ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ ಎರಡು ನಿಮಿಷ ಮೌನಾಚರಣೆ ಮೂಲಕ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹೊಸಪೇಟೆ ಪಟ್ಟಣ ಠಾಣೆ ಪಿಐ ಫೈಜುಲ್ಲಾ, ಗ್ರಾಮೀಣ ಠಾಣೆ ಪಿಐ ಗುರುರಾಜ ಕಟ್ಟಿಮನಿ, ಚಿತ್ತವಾಡ್ಗಿ ಪಿಐ ಸೋಮ್ಲಾ ನಾಯ್ಕ್, ಟಿ.ಬಿ. ಡ್ಯಾಂ ಅಮರೇಶ್ ಹುಬ್ಬಳ್ಳಿ, ಹಂಪಿ ಸಿಪಿಐ ರಾಜೇಶ್ ಬಟಗುರ್ಕಿ ಸೇರಿದಂತೆ ವಿಜಯನಗರ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿ ಉಪವಿಭಾಗದ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.