ಫಲಿತಾಂಶ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಅನನ್ಯ: ಈ.ತುಕಾರಾಂ

KannadaprabhaNewsNetwork | Published : Feb 27, 2025 12:35 AM

ಸಾರಾಂಶ

ಹಗರಿಬೊಮ್ಮನಹಳ್ಳಿ ಬಿಇಒ ಮೈಲೇಶ್ ಬೇವೂರ ಸಿದ್ಧಪಡಿಸಿದ ಕಲಿಕಾ ಕಿರಣ ಪುಸ್ತಕವನ್ನು ಜಿಲ್ಲೆಯ ಪ್ರತಿ ಶಾಲೆಗಳಿಗೆ ವೈಯಕ್ತಿಕ ಮೊತ್ತದಲ್ಲೆ ತಲುಪಿಸುವ ಮೂಲಕ ಫಲಿತಾಂಶದ ಗುಣಮಟ್ಟ ಹೆಚ್ಚಿಸುವ ಸೇವೆ ಕೈಗೊಂಡಿದ್ದೇನೆ

ಕಲಿಕೆಯಲ್ಲಿ ಹಿಂದುಳಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂಸದರಿಂದ ಕಲಿಕಾ ಕಿರಣ ಪುಸ್ತಕ ವಿತರಣೆಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿ ಬಿಇಒ ಮೈಲೇಶ್ ಬೇವೂರ ಸಿದ್ಧಪಡಿಸಿದ ಕಲಿಕಾ ಕಿರಣ ಪುಸ್ತಕವನ್ನು ಜಿಲ್ಲೆಯ ಪ್ರತಿ ಶಾಲೆಗಳಿಗೆ ವೈಯಕ್ತಿಕ ಮೊತ್ತದಲ್ಲೆ ತಲುಪಿಸುವ ಮೂಲಕ ಫಲಿತಾಂಶದ ಗುಣಮಟ್ಟ ಹೆಚ್ಚಿಸುವ ಸೇವೆ ಕೈಗೊಂಡಿದ್ದೇನೆ ಎಂದು ಸಂಸದ ಈ.ತುಕಾರಾಂ ತಿಳಿಸಿದರು.

ಪಟ್ಟಣದ ಅಂಬಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ವೈಯಕ್ತಿಕ ಮೊತ್ತದಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಲಿಕಾ ಕಿರಣ ಪರೀಕ್ಷಾ ಪೂರಕ ಪುಸ್ತಕ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಖಂಡ ಜಿಲ್ಲೆಯ ಮಕ್ಕಳು ಹಳ್ಳಿಯಿಂದ ದಿಲ್ಲಿಗೆ ಹೋಗುವಂತಹ ಶಿಕ್ಷಣವನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಶಿಕ್ಷಕರು ಗುಣಮಟ್ಟದ ಬೋಧನೆಯ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕು. ಫಲಿತಾಂಶ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಅನನ್ಯ. ಕಲಿಕಾ ಕಿರಣ ಪುಸ್ತಕ ಅಭಿಯಾನ ಗುಣಮಟ್ಟದ ಫಲಿತಾಂಶಕ್ಕೆ ಪೂರಕವಾಗಿದೆ. ನನ್ನ ಅವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ವಿಶೇಷ ಒತ್ತು ನೀಡುತ್ತೇನೆ ಎಂದರು.

ಕೆಎಂಎಫ್ ಅಧ್ಯಕ್ಷ ಎಸ್. ಭೀಮನಾಯ್ಕ ಮಾತನಾಡಿ, ಕಳೆದ ಬಾರಿ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಕಲ್ಯಾಣ ಕರ್ನಾಟಕದಲ್ಲಿಯೇ ಪ್ರಥಮ ಸ್ಥಾನ ಪಡದಿರುವುದಕ್ಕೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ ಮತ್ತು ಶಿಕ್ಷಕರು ಪರಿಶ್ರಮವೇ ಕಾರಣವಾಗಿದೆ. ಕಳೆದ ಬಾರಿ ವೈಯಕ್ತಿಕ ಮೊತ್ತದಲ್ಲಿ ಕ್ಷೇತ್ರದ ಪ್ರತಿ ಕಾಲೇಜುಗಳಿಗೆ ಪಿಯುಸಿ ಇಂಗ್ಲಿಷ್ ಪ್ರಶ್ನೋತ್ತರ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗಿತ್ತು. ಈ ಸಾಲಿನಲ್ಲಿಯೂ ಮುಂದುವರಿಸಲಾಗುವುದು. ಕಳೆದ ೧೦ ವರ್ಷಗಳ ಅವಧಿಯಲ್ಲಿ ಶಾಸಕರಾಗಿದ್ದಾಗ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಲಾಗಿತ್ತು ಎಂದರು.

ತಹಸೀಲ್ದಾರ್ ಆರ್.ಕವಿತಾ ಮಾತನಾಡಿ, ಸಾಧಕ ವಿದ್ಯಾರ್ಥಿಗಳಿಗೆ ಪ್ರಬಲ ಇಚ್ಛಾಶಕ್ತಿ ಮತ್ತು ನಿಶ್ಚಿತ ಗುರಿ ಅಗತ್ಯ. ಮೊಬೈಲ್ ಬಿಟ್ಟು, ಪುಸ್ತಕ ಹಿಡಿಯುವುದು ಕಲಿಕೆಯನ್ನು ಬಲಗೊಳಿಸುತ್ತದೆ ಎಂದರು.

ಬಿಇಒ ಮೈಲೇಶ್ ಬೇವೂರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸದರು ಅತ್ಯಂತ ಸರಳ ಸಜ್ಜನಿಕೆ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಮಕ್ಕಳ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಅತ್ಯಂತ ಮಹತ್ತರವಾದ ನಿರ್ಧಾರ ಕೈಗೊಂಡು ಗುಣಮಟ್ಟದ ಫಲಿತಾಂಶ ತರುವಲ್ಲಿ ಶ್ರಮಿಸುತ್ತಿದ್ದಾರೆ. ಸಂಸದರು ತಮ್ಮ ಸ್ವಂತ ಮಗನನ್ನು ಕಂಪನಿ ಕೆಲಸಕ್ಕೆ ಸೇರಿಸಿದ್ದಾರೆ, ಮಗಳನ್ನು ವಕೀಲೆ ವೃತ್ತಿಯಲ್ಲಿ ತೊಡಗಿಸಿರುವುದು ಅವರ ಸರಳತೆಯನ್ನು ಎತ್ತಿ ತೋರಿಸುತ್ತದೆ ಎಂದರು.

ಉತ್ತಮ ಫಲಿತಾಂಶಕ್ಕೆ ಬಹುಮಾನ:

ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿನಲ್ಲಿ ಮೊದಲ ಸ್ಥಾನಗಳಿಸುವ ವಿದ್ಯಾರ್ಥಿಗೆ ₹೧೫ ಸಾವಿರ, ೨ನೇ ಸ್ಥಾನಕ್ಕೆ ₹೧೦ ಸಾವಿರ, ಮತ್ತು ಮೂರನೇ ಸ್ಥಾನಗಳಿಸುವ ವಿದ್ಯಾರ್ಥಿಗಳಿಗೆ ₹೫ ಸಾವಿರ ಬಹುಮಾನ ನೀಡುವುದಾಗಿ ಸಂಸದ ಘೋಷಿಸಿದರು. ಕೂಡಲೆ ಕೆಎಂಎಫ್ ಅಧ್ಯಕ್ಷ ಎಸ್. ಭೀಮನಾಯ್ಕ ವಿಧಾನಸಭಾ ಕ್ಷೇತ್ರದ ಕೊಟ್ಟೂರು, ತಾಲೂಕು ಮತ್ತು ಹೊಸಪೇಟೆ ತಾಲೂಕಿನಲ್ಲಿ ಮೊದಲ, ೨ನೇ ಮತ್ತು ೩ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಒಟ್ಟು ₹ ೧ ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದರು. ಇದೇ ವೇಳೆ ಸಂಸದರು ಶಾಲಾ ಮಕ್ಕಳೊಂದಿಗೆ ಶೈಕ್ಷಣಿಕ ಸಂವಾದ ನಡೆಸಿ, ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಸ್ಪೂರ್ತಿ ತುಂಬಿದರು.

ಜಿಪಂ ಮಾಜಿ ಸದಸ್ಯ ಅಕ್ಕಿತೋಟೇಶ್, ತಾಪಂ ಮಾಜಿ ಸದಸ್ಯ ದೇವೇಂದ್ರಪ್ಪ, ಡಿಸಿಸಿ ಅಧ್ಯಕ್ಷ ಬಿ.ವಿ. ಶಿವಯೋಗಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಬಿ.ನಾಯ್ಕ, ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ, ವಿಎಸ್‌ಎಸ್‌ಎನ್ ಅಧ್ಯಕ್ಷ ದಾದಮ್ಮನವರ ಬಸವರಾಜ, ಉಪಾಧ್ಯಕ್ಷ ಗಂಗಾಧರ ಸ್ವಾಮಿ ಇದ್ದರು. ಇಸಿಒ ಗುರುಬಸವರಾಜ, ಪ್ರಾಂಶುಪಾಲರಾದ ಯಮನೂರು ಸ್ವಾಮಿ, ಕಿತ್ನೂರು ಟಿ.ರಾಮಣ್ಣ ನಿರ್ವಹಿಸಿದರು.

Share this article