ಭಟ್ಕಳದಲ್ಲಿ ಸರಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊಂದಿದ್ದಾರೆ. ಶಿಕ್ಷಕರ ಬಗ್ಗೆ ನನಗೆ ಅಪಾರವಾದ ಪ್ರೀತಿ, ವಿಶ್ವಾಸ, ಗೌರವ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಗುರುವಿದ್ಯಾಧಿರಾಜ ಪಿಯು ಕಾಲೇಜಿನ ಸಭಾಂಗಣದಲ್ಲಿ ಸರಕಾರಿ ನೌಕರರ ಸಂಘ ಮತ್ತು ಗುರುಭವನ ಸಮಿತಿಯ ವತಿಯಿಂದ ಏರ್ಪಡಿಸಲಾದ ಗುರುಭವನ ಶಂಕುಸ್ಥಾಪನೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾನು ಈ ಹಿಂದೆ ಶಾಸಕನಿದ್ದ ಸಂದರ್ಭದಲ್ಲಿ ಗುರುಭವನಕ್ಕೆಂದು ಜಾಗ ಮಂಜೂರಿಸಿಕೊಟ್ಟಿದ್ದೆ. ಆದರೆ 12 ವರ್ಷ ಆದರೂ ಗುರುಭವನ ಕಟ್ಟಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷದ ಗುರುವಂದನೆ ಸಂದರ್ಭದಲ್ಲಿ ಮುಂದಿನ ಸಲವಾದರೂ ಸ್ವಂತ ಕಟ್ಟಡದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದ್ದೆ. ಮುಂದಿನ ಗುರುವಂದನಾ ಕಾರ್ಯಕ್ರಮಕ್ಕೆ ಕೇವಲ 6 ತಿಂಗಳು ಮಾತ್ರ ಇದ್ದು, ಅಷ್ಟರೊಳಗೆ ಕಟ್ಟಡದ ಒಂದಂತಸ್ತನ್ನಾದರೂ ನಿರ್ಮಿಸಿ ಗುರುವಂದನೆ ಕಾರ್ಯಕ್ರಮ ನಡೆಬೇಕು. ಸುಸಜ್ಜಿತ ಕಟ್ಟಡಕ್ಕೆ ಸುಮಾರು ₹5 ಕೋಟಿ ವೆಚ್ಚ ತಗುಲಲಿದ್ದು, ಇದೊಂದು ಮನೆಯ ಕಟ್ಟಡ ಎಂದು ಭಾವಿಸಿ ಕಾಳಜಿ ತೋರಿ ಶಿಕ್ಷಕರು ಸಹಾಯ ಸಹಕಾರ ಮಾಡಬೇಕು. ಸರಕಾರದಿಂದ ಗುರುಭವನಕ್ಕೆ ₹50 ಲಕ್ಷ ಅನುದಾನ ಮಾತ್ರ ಬರಲಿದ್ದು, ಉಳಿದ ಹಣವನ್ನು ಸಂಗ್ರಹಿಸಿ ಕಟ್ಟಡ ನಿರ್ಮಿಸಬೇಕು. ಸುಸಜ್ಜಿತ ಗುರುಭವನ ನಿರ್ಮಾಣವಾದರೆ ಶಿಕ್ಷಕರಿಗೆ ಎಲ್ಲಾ ರೀತಿಯ ಕಾರ್ಯಕ್ರಮ ನಡೆಸಲು ಅನುಕೂಲವಾಗುತ್ತದೆ ಎಂದರು.
ವೇದಿಕೆಯಲ್ಲಿ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪೂರ್ಣಿಮಾ ಮೊಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮುಂತಾದವರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಸ್ವಾಗತಸಿದರು. ನೌಕರರ ಸಂಘದ ಕಾರ್ಯದರ್ಶಿ ವೆಂಕಟೇಶ ನಾಯ್ಕ ವರದಿ ವಾಚಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರು. ಇದೇ ಸಂದರ್ಭ ಸಚಿವ ಮಂಕಾಳ ವೈದ್ಯರನ್ನು, ಉತ್ತಮ ಸಾಧಕರನ್ನು, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ನೌಕರರ ಮಕ್ಕಳನ್ನು ಗೌರವಿಸಲಾಯಿತು.