ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹೈದರಾಬಾದ್‌ನ ಯುನಿಸೆಫ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ವಿಷಯಗಳ ಕುರಿತು ಕರ್ನಾಟಕ ರಾಜ್ಯದ ಪತ್ರಕರ್ತರಿಗೆ ಪರಿಚಯ ವಿಷಯದಡಿ ಕಿಶೋರರ ಆರೋಗ್ಯ ಮತ್ತು ಪೌಷ್ಟಿಕತೆ, ಸಾಂಕ್ರಾಮಿಕವಲ್ಲದ ರೋಗಗಳು, ಆರೋಗ್ಯಕರ ಆಹಾರ ಪದ್ಧತಿ ಹಾಗೂ ರಸ್ತೆ ಸುರಕ್ಷತೆ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಹಕ್ಕುಗಳು, ಆರೋಗ್ಯ ಸಮಸ್ಯೆಗಳು, ಹೆಚ್ಚುತ್ತಿರುವ ನಾನ್-ಕಮ್ಯುನಿಕೇಬಲ್ ರೋಗಗಳು, ಪೌಷ್ಟಿಕ ಆಹಾರ ಹಾಗೂ ರಸ್ತೆ ಸುರಕ್ಷತೆ ಕುರಿತಂತೆ ಈ ಕಾರ್ಯಾಗಾರದಲ್ಲಿ ಚರ್ಚೆ ನಡೆಯುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳು ಮಕ್ಕಳ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದ್ದು, ಪತ್ರಕರ್ತರು ಹಾಗೂ ಮಾಧ್ಯಮಗಳು ಸುದ್ದಿಗಳನ್ನು ಅತ್ಯಂತ ಸಂವೇದನಾಶೀಲವಾಗಿ ಜನರಿಗೆ ತಲುಪಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುನಿಸೆಫ್, ಹೈದರಾಬಾದ್‌ನ ಪ್ರೊಸೂನ್ ಸೇನ್ ಮಾತನಾಡಿ, ಕಿಶೋರ ವಯಸ್ಸಿನ ಮಕ್ಕಳಲ್ಲಿ ಅಸಂಕ್ರಾಮಿಕ ರೋಗಗಳ ಪ್ರಮಾಣ ಹೆಚ್ಚುತ್ತಿವೆ. 11 ರಿಂದ 19 ವರ್ಷ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯ ಸಮಸ್ಯೆ, ಮಧುಮೇಹ, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿವೆ. ಜಂಕ್ ಫುಡ್ ಸೇವನೆ ಹಾಗೂ ದೈಹಿಕ ಚಟುವಟಿಕೆಗಳ ಕೊರತೆ ಪ್ರಮುಖ ಕಾರಣಗಳಾಗಿವೆ ಎಂದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ಮಕ್ಕಳ ಸಮಸ್ಯೆಗಳು, ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ವಿಷಯಗಳಿಗೆ ಪತ್ರಕರ್ತರು ಹೆಚ್ಚಿನ ಆದ್ಯತೆ ನೀಡಬೇಕು. ಪರಿಣಾಮಕಾರಿ ಮತ್ತು ತುರ್ತುಭಾವ ಮೂಡಿಸುವ ಬರವಣಿಗೆಯಿಂದ ಸಮಾಜದ ಸಮಸ್ಯೆಗಳನ್ನು ಜನರ ಗಮನಕ್ಕೆ ತರಬೇಕು. ಅಷ್ಟೇ ಅಲ್ಲದೇ ಈ ಕಾರ್ಯಾಗಾರ ಪತ್ರಕರ್ತರ ನಡುವೆ ಅನುಭವ ವಿನಿಮಯ ಹಾಗೂ ಹೊಸ ಚಿಂತನೆಗಳಿಗೆ ಉತ್ತಮ ವೇದಿಕೆಯಾಯಿತು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ.ರಾಕೇಶ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರು ಮತ್ತಿತರು ಭಾಗವಹಿಸಿದ್ದರು. ಮಂಜುನಾಥ ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ.ಸ್ವಪ್ನಾ.ಎಮ್.ಎಸ್ ಸ್ವಾಗತಿಸಿದರು.