ಸರ್ಕಾರದ ವರ್ಚಸ್ಸು ಹೆಚ್ಚಿಸುವಲ್ಲಿ ಗ್ರಾಮಾಡಳಿತ ಪಾತ್ರ ಮುಖ್ಯ: ಡಿಸಿ ದಿವ್ಯಪ್ರಭು

KannadaprabhaNewsNetwork |  
Published : Dec 10, 2024, 12:30 AM IST
9ಡಿಡಬ್ಲೂಡಿ2ರೇವೆನ್ಯೂ ಕ್ಲಬ್ ಆವರಣದಲ್ಲಿ ಸೋಮವಾರ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಕಚೇರಿ ಉದ್ಘಾಟನೆ.  | Kannada Prabha

ಸಾರಾಂಶ

ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆ ಪಾತ್ರ ಮಹತ್ವದ್ದಾಗಿದೆ. ಅದರಂತೆ ಗ್ರಾಮ ಆಡಳಿತ ಅಧಿಕಾರಿಗಳ ಸ್ಥಾನ ಮುಖ್ಯವಾಗಿದೆ. ಬ್ರಿಟಿಷರ ಆಡಳಿತ ಕಾಲದಿಂದಲೂ ಕಂದಾಯ ಇಲಾಖೆಗೆ ಅಗ್ರಸ್ಥಾನವಿದೆ.

ಧಾರವಾಡ:

ಜನರ ಕಲ್ಯಾಣಕ್ಕಾಗಿ ಸರ್ಕಾರಗಳು ಜಾರಿಗೆ ತರುವ ಪ್ರತಿ ಯೋಜನೆ, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಮತ್ತು ನಿಯಮಾನುಸಾರ ಅನುಷ್ಠಾನವಾಗಲು ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವದ್ದು. ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕಾರ್ಯಶೈಲಿ, ತತ್‌ಕ್ಷಣದ ಸ್ಪಂದನೆಗಳ ಮೂಲಕ ಕ್ಷೇತ್ರಮಟ್ಟದಿಂದ ಸರ್ಕಾರದ ವರ್ಚಸ್ಸು ಹೆಚ್ಚಿಸುತ್ತಾರೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ನಗರದ ರೇವೆನ್ಯೂ ಕ್ಲಬ್ ಆವರಣದಲ್ಲಿ ಸೋಮವಾರ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಕಚೇರಿ ಉದ್ಘಾಟನೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ಪೀಠೋಪಕರಣ ವಿತರಣೆ ಮಾಡಿದ ಅವರು, ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆ ಪಾತ್ರ ಮಹತ್ವದ್ದಾಗಿದೆ. ಅದರಂತೆ ಗ್ರಾಮ ಆಡಳಿತ ಅಧಿಕಾರಿಗಳ ಸ್ಥಾನ ಮುಖ್ಯವಾಗಿದೆ. ಬ್ರಿಟಿಷರ ಆಡಳಿತ ಕಾಲದಿಂದಲೂ ಕಂದಾಯ ಇಲಾಖೆಗೆ ಅಗ್ರಸ್ಥಾನವಿದೆ. ಸರ್ಕಾರದ ಎಲ್ಲ ಯೋಜನೆ, ಕಾರ್ಯಕ್ರಮಗಳು ಅರ್ಹರಿಗೆ ತಲುಪುವಲ್ಲಿ ಗ್ರಾಮ ಆಡಳಿತ ಅಧಿಕಾರಿ ಪಾತ್ರ ಮುಖ್ಯ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರತಿ ಆರ್‌ಟಿಸಿಗೆ ಆಧಾರ ಜೋಡಣೆ ಕಾರ್ಯ ಶೇ. 86ರಷ್ಟಾಗಿದೆ. ಸರ್ಕಾರಿ ಜಮೀನುಗಳನ್ನು ದಾಖಲಿಸುವ ಲ್ಯಾಂಡ್ ಬೀಟ್ ಆ್ಯಪ್‌ದಲ್ಲಿ ಶೇ. 96ರಷ್ಟು ಪ್ರಗತಿ ಆಗಿದೆ. ಜಿಲ್ಲೆಗೆ ರಾಜ್ಯಮಟ್ಟದ ಎರಡು ಪ್ರಶಸ್ತಿಗಳು ಬಂದಿದೆ. ಇದರಲ್ಲಿ ಕಂದಾಯ ಇಲಾಖೆ, ವಿಎಗಳ ಪಾತ್ರವೂ ಬಹಳಷ್ಟಿದೆ. ಸುಮಾರು ₹ 4.5 ಲಕ್ಷ ವೆಚ್ಚದಲ್ಲಿ ತಾಲೂಕಿನ ಎಲ್ಲ 47 ಜನ ಗ್ರಾಮ ಆಡಳಿತ ಅಧಿಕಾರಿಗಳು ಕಚೇರಿಗೆ ಪೀಠೋಪಕರಣ ಪೂರೈಸಿರುವುದು ಹೆಮ್ಮೆಯ ಸಂಗತಿ. ವಿವಿಧ ಕೈಗಾರಿಕೆಗಳ ಸಿಎಸ್‌ಆರ್ ನಿಧಿಯಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ಒಂದು ಲ್ಯಾಪ್‌ಟಾಪ್ ನೀಡುವ ಉದ್ದೇಶವಿದೆ. ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳ ಕುರಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಸಭೆ ಜರುಗಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಗ್ರಾಮಮಟ್ಟದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ಕಲ್ಪಿಸಲು ಗ್ರಾಪಂ ಕಟ್ಟಡಗಳಲ್ಲಿ ಅವಕಾಶ ನೀಡಲು ಸೂಚಿಸಲಾಗಿತ್ತು. ಪ್ರತಿ ಗ್ರಾಮದಲ್ಲಿ ಕಂದಾಯ ಇಲಾಖೆ ಚಾವಡಿ ನಿರ್ಮಿಸಲು ಸರ್ಕಾರಿ ಭೂಮಿ ಗುರುತಿಸಿ, ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ ಮಾಡಿಕೊಡಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ಹಟ್ಟಿಯವರ ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ಕಂದಾಯ ಇಲಾಖೆಯ ರವಿ ಕಟ್ಟಿ, ಮಲ್ಲಿಕಾರ್ಜುನ ಸೋಲಗಿ, ಅಮಿತ ಮುದ್ದಿ, ಮಹೇಶ ನಾಗಮ್ಮನವರ ಹಾಗೂ ದಾನಿಗಳಾದ ವೀರೇಶ ಬ್ಯಾಹಟ್ಟಿ ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್‌ ಡಿ.ಎಚ್. ಹೂಗಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ರಮೇಶ ಬಂಡಿ ವೇದಿಕೆಯಲ್ಲಿದ್ದರು.

ಕಂದಾಯ ಇಲಾಖೆ ಅಧಿಕಾರಿಗಳಾದ ಹನಮಂತ ಕೊಚ್ಚರಗಿ, ಅಜ್ಜಪ್ಪ ಮಂಗಳಗಟ್ಟಿ, ಮಂಜುನಾಥ ಗೂಳಪ್ಪನವರ, ಸಂಪತ್ತಕುಮಾರ ಗುರುವಡೆಯರ, ಗುರು ಸುಣಗಾರ ಇದ್ದರು. ಗಂಗಾಧರ ಮೇದಾರ ಸ್ವಾಗತಿಸಿದರು. ಅಶ್ವಿನಿ ಪೂಜಾರ ಪ್ರಾರ್ಥಿಸಿದರು. ಸುವರ್ಣಾ ಚೀಟಿನ ನಿರೂಪಿಸಿದರು. ಪರಮಾನಂದ ದಡ್ಡಿನವರ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ