ಕನ್ನಡಪ್ರಭ ವಾರ್ತೆ ಕುಮಟಾ
ಭಾರತ ಮಾತೆಯನ್ನು ವಿಶ್ವಗುರುವಿನ ಸ್ಥಾನಕ್ಕೆ ಕೊಂಡೊಯ್ದು ಪಟ್ಟಾಭಿಷೇಕ ಮಾಡುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉದ್ದೇಶ ಎಂದು ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಜಗದೀಶ ಕಾರಂತ ಹೇಳಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಶತಾಬ್ದಿ ವರ್ಷದ ನಿಮಿತ್ತ ಶನಿವಾರ ಪಟ್ಟಣದಲ್ಲಿ ಪಥಸಂಚಲನ ಬಳಿಕ ಗಿಬ್ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಸಭಾಕಾರ್ಯಕ್ರಮದಲ್ಲಿ ಬೌದ್ಧಿಕ ಉಪನ್ಯಾಸ ಮಾಡಿದರು.
ಆರ್.ಎಸ್.ಎಸ್ ನ ಎಲ್ಲಾ ಚಟುವಟಿಕೆ ನಿತ್ಯವು ಬಟಾಬಯಲಿನಲ್ಲಿಯೇ ನಡೆಯುತ್ತದೆ. ಆದರೆ ಯಾವುದೇ ಭೂಗತ ಚಟುವಟಿಕೆಯನ್ನೂ ಸಂಘ ನಡೆಸುವುದಿಲ್ಲ. ಸಂಘದ ತತ್ವ ಅರ್ಥ ಮಾಡಿಕೊಳ್ಳುವುದು ಸಾಮಾನ್ಯರಿಗೆ ಕಷ್ಟ.ದೇಶದಾದ್ಯಂತ ಸಂಘದ ಕಾರ್ಯಕರ್ತರಲ್ಲಿ ದೇಶ ನನ್ನದು, ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂಬ ಭಾವ ಎಲ್ಲಾ ಕಡೆ ಇದೆ. ಆರ್.ಎಸ್.ಎಸ್ ಸಾಧನೆ ಯಾರಿಗೂ ಹೇಳುವ ಅಗತ್ಯ ಇಲ್ಲ. ಹಿಂದುತ್ವದ ನೆಲಗಟ್ಟಿನ ಮೇಲೆ ಭಾರತವನ್ನು ವಿಶ್ವಮಾನ್ಯವಾಗಿ ಮಾಡುವುದು ಸ್ವಾಮಿ ವಿವೇಕಾನಂದರ, ಮಹರ್ಷಿ ಅರವಿಂದರ ಕನಸು. ಆರ್.ಎಸ್.ಎಸ್ ಜಗತ್ತಿನ ಯಾವ ಕ್ಷೇತ್ರವನ್ನು ಬಿಟ್ಟಿಲ್ಲ. ಆರ್.ಎಸ್.ಎಸ್. ಇಂದು ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದು ಇದು ಸಂಘ ಎನ್ನುವುದಕ್ಕಿಂತ ಇದೊಂದು ರಾಷ್ಟ್ರೀಯ ಆಂದೋಲನ ಅಥವಾ ಚಳುವಳಿ ಎನ್ನಬಹುದಾಗಿದೆ. ಶತಾಬ್ಧಿ ಯಾರಿಗೆ ತೋರಿಸುವುದಕ್ಕಾಗಿ ಅಲ್ಲ. ನಾವು ನಡೆದುಬಂದ ದಾರಿಯ ಸಿಂಹಾವಲೋಕನ ಮಾತ್ರ ಎಂದರು.
ಚೈನಾದಲ್ಲಿ ಮಳೆಬಂದಾಗ ಭಾರತದಲ್ಲಿ ಕೊಡೆಹಿಡಿಯುವ ಭಾರತದಲ್ಲಿಯ ದೇಶದ್ರೋಹಿಗಳ ಕೈಯಲ್ಲಿ ಸಿಕ್ಕಿ ಕಾರ್ಮಿಕ ಸಂಘಟನೆ ಒದ್ದಾಡುತ್ತಿರುವಾಗ ಆರ್.ಎಸ್.ಎಸ್ ಭಾರತೀಯ ಮಜದೂರ್ ಸಂಘದ ಮೂಲಕ ಕಾರ್ಮಿಕ ಶಕ್ತಿಯನ್ನ ದೇಶಪ್ರೇಮಿ ಸಂಘಟನೆಯಾಗಿ ರೂಪಿಸಿದೆ. ವಿದ್ಯಾರ್ಥಿ ಶಕ್ತಿಯನ್ನು ರಾಷ್ಟ್ರ ಶಕ್ತಿಯನ್ನಾಗಿ ಪರಿವರ್ತಿಸುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳನ್ನು ರಾಷ್ಟ್ರ ಭಕ್ತರನ್ನಾಗಿ ಬೆಳೆಸುತ್ತಿದೆ.ಗುಡ್ಡಗಾಡಿನಲ್ಲಿ ವಾಸಿಸುವ ಮುಗ್ಧರಿಗೆ ಒಂದಿಷ್ಟು ಹಿಟ್ಟು ನೀಡಿ, ಅವರ ಕುತ್ತಿಗೆಗೆ ಕ್ರಾಸ್ ಕಟ್ಟಿ, ಚರ್ಚಿಗೆ ಕೊಂಡೊಯ್ಯುವ ಮಿಷನರಿಗಳ ಕುತಂತ್ರ ತಡೆಯಲು ವನವಾಸಿ ಕಲ್ಯಾಣ ಅದನ್ನು ತಡೆಯಲು ಯಶಸ್ಸಿಯಾಗಿದೆ ಎಂದು ಜಗದೀಶ ಕಾರಂತ ಹೇಳಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಆರ್.ಎಸ್.ಎಸ್ ಗಣವೇಶಧಾರಿಗಳು ಎರಡು ತಂಡಗಳಲ್ಲಿ ಪಥಸಂಚಲನ ಆರಂಭಿಸಿ, ೧ನೇ ಪಥಕ ಕುಮಟಾ ಪಟ್ಟಣದ ದೇವರಹಕ್ಕಲಿನ ಶ್ರೀ ಶಾಂತಿಕಾಪರಮೇಶ್ವರಿ ದೇವಾಲಯದ ಆವರಣದಿಂದ ಪ್ರಾರಂಭಗೊಂಡು, ಗುಡಿಗಾರಗಲ್ಲಿ, ಸುಭಾಸರಸ್ತೆ ರಥಬೀದಿ, ಮೂರುಕಟ್ಟೆ, ಬಸ್ತಿಪೇಟೆ ತಲುಪಿದರೆ, ೨ ನೇ ಪಥಕ ಮಹಾಸತಿ ಸರ್ಕಲ್ ಸಮೀಪದಿಂದ ಆರಂಭಗೊಂಡು, ನೆಲ್ಲಿಕೇರಿ, ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಬಸ್ತಿಪೇಟೆ ತಲುಪಿದ ನಂತರ ಎರಡೂ ಪಥಕಗಳು ಸೇರಿ, ಗಿಬ್ ಸರ್ಕಲ್ ಮೂಲಕ ಗಿಬ್ ಹೈಸ್ಕೂಲ್ ಮೈದಾನಕ್ಕೆ ಆಗಮಿಸಿದರು. ಈ ವೇಳೆ ಶಾಸಕ ದಿನಕರ ಶೆಟ್ಟಿ, ಶಿವಾನಂದ ಹೆಗಡೆ ಕಡತೋಕ, ಪ್ರೊ. ಎಂ.ಜಿ. ಭಟ್, ವೆಂಕಟೇಶ ನಾಯಕ, ಹನುಮಂತ ಶಾನಭಾಗ, ಡಾ. ಜಿ.ಜಿ. ಹೆಗಡೆ ಇತರರಿದ್ದರು.