ಆಡಳಿತ ವಿಪಕ್ಷಗಳಿಗೆ ಒಳಗಿನ ಶತ್ರುಗಳ ಕಾಟವೇ ಜಾಸ್ತಿ

KannadaprabhaNewsNetwork | Published : Feb 25, 2025 12:46 AM

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದಲ್ಲಿ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳ ಕಾಟ ಹೆಚ್ಚಿದೆ. ಆದ್ದರಿಂದ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದ ಕಾರಣದಿಂದ ರಾಜ್ಯದ ಜತೆ ಇಟ್ಟುಕೊಂಡಿದ್ದ ನಿರೀಕ್ಷೆಗಳು ಸಾಕಾರಗೊಳ್ಳದೇ ತುಂಬಾ ನೋವು ಅನುಭವಿಸುತ್ತಿದ್ದಾರೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಠದ ಮಠಾಧೀಶರಾದ ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ವಿಷಾದ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಇತ್ತೀಚಿನ ದಿನಗಳಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದಲ್ಲಿ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳ ಕಾಟ ಹೆಚ್ಚಿದೆ. ಆದ್ದರಿಂದ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದ ಕಾರಣದಿಂದ ರಾಜ್ಯದ ಜತೆ ಇಟ್ಟುಕೊಂಡಿದ್ದ ನಿರೀಕ್ಷೆಗಳು ಸಾಕಾರಗೊಳ್ಳದೇ ತುಂಬಾ ನೋವು ಅನುಭವಿಸುತ್ತಿದ್ದಾರೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಠದ ಮಠಾಧೀಶರಾದ ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ವಿಷಾದ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹಳ್ಳಿಮೈಸೂರು ಹೋಬಳಿ ನಿಡುವಣಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಜನರ ನಿರ್ಧಾರವನ್ನು ಆಕ್ಷೇಪಿಸುವ ರೀತಿಯಲ್ಲಿ ಪಕ್ಷಗಳ ನಾಯಕರು ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ಇಂದಿನ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವ ನೀವು ಚುನಾವಣೆ ಸಂದರ್ಭದಲ್ಲಿ ಯೋಗ್ಯ ನಿರ್ಣಯ ತೆಗೆದುಕೊಳ್ಳುವ ಬುದ್ಧಿಶಕ್ತಿಯೊಂದಿಗೆ ಸಮಾಜದ ಸರ್ವಜನಾಂಗದ ಜಾತಿಯವರನ್ನು ಪ್ರೀತಿ, ವಿಶ್ವಾಸದಿಂದ ಕಾಣುವ, ಎಲ್ಲರ ಅಭಿವೃದ್ಧಿಗೆ ಪ್ರೇರೇಪಿತರಾಗಿ ದುಡಿಯುವ ವ್ಯಕ್ತಿಯನ್ನು ಆಯ್ಕೆ ಮಾಡಿದರೇ ಇಂತಹ ಪರಿಸ್ಥಿತಿ ಖಂಡಿತವಾಗಿ ಬರುತ್ತಿರಲ್ಲಿಲ್ಲ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಅವರು ವಿನಯಶೀಲರಾಗಿದ್ದು, ಸಂಕಷ್ಟದ ಪರಿಸ್ಥಿತಿಗಳಲ್ಲಿ ಸಹನಶೀಲರಾಗಿ ಕೆಲಸ ಮಾಡಲಿ. ಅವರಿಗೆ ಪಕ್ಷದೊಳಗೇ ಸಾಕಷ್ಟು ಕಿರುಕುಳ ಆಗುತ್ತಿದೆ. ಈ ಹಿಂದೆ ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆದರೂ ಪಕ್ಷದೊಳಗಿನವರೇ ಅವರಿಗೆ ಕೆಲಸ ಮಾಡಲು ಬಿಡಲಿಲ್ಲ. ಈಗ ವಿಜಯೇಂದ್ರಗೆ ಕೂಡ ಅದೇ ಪರಿಸ್ಥಿತಿ ಇದೆ. ಭವಿಷ್ಯದಲ್ಲಿ ಅವರಿಗೆ ಒಳ್ಳೆಯದು ಆಗುವುದರಲ್ಲಿ ಸಂಶಯವಿಲ್ಲ. ನಿಮ್ಮೆಲ್ಲರ ಅಭಿಮಾನ ಅವರ ಮೇಲಿದೆ ಎಂದು ತಿಳಿಯಬಹುದಾಗಿದೆ ಎಂದರು.

ಭಾವೈಕ್ಯತೆಯ ಧರ್ಮ ಭೂಮಿಯಲ್ಲಿ ಹಲವಾರು ಧರ್ಮಗಳ ಆಚರಣೆ ಬೇರೆ ಬೇರೆಯಾಗಿದ್ದರೂ ಸಹ ಬದುಕಿ ಬಾಳುವ ಜನರು ಒಳ್ಳೆಯ ರೀತಿಯಿಂದ ಸಾಮರಸ್ಯದ ಸೌಹಾರ್ದತೆ ಕಾಪಾಡಿಕೊಂಡು ಬರಬೇಕು ಎಂಬ ಸಂದೇಶ ಸಾರುತ್ತದೆ. ಜತೆಗೆ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಧರ್ಮದ ಬಗ್ಗೆ ಸಹಿಷ್ಣುತಾ ಮನೋಭಾವ ಹೊಂದಿ ಸಾಗಿದಾಗ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಧರ್ಮ ಹಾಗೂ ಸಂಸ್ಕೃತಿಯ ಪಾಲನೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿದರು. ಮೈಸೂರಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಕೆ.ಸಿ.ಬಸವರಾಜು ಪ್ರಧಾನ ಉಪನ್ಯಾಸ ಹಾಗೂ ಮೈಸೂರಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಡಾ. ಶ್ರೀ ಮೊರಬಾದ ಮಲ್ಲಿಕಾರ್ಜುನ ಮತ್ತು ನಂದೀಶ್ ಅಂಚೆ ಉಪನ್ಯಾಸ ಮಾಡಿದರು.

ಶುಕ್ರವಾರದಿಂದ ದೇವಾಲಯದ ಪುನರ್ ಪ್ರತಿಷ್ಠಾಪನಾ ಪೂಜಾ ಮಹೋತ್ಸವ ಸಂಪ್ರದಾಯದ ಆಚರಣೆಯಂತೆ ಪ್ರಾರಂಭಗೊಂಡು, ಮೂರು ದಿನಗಳು ವಿವಿಧ ಪೂಜಾ ಮಹೋತ್ಸವ ನಡೆಯಿತು. ಸೋಮವಾರ ಬೆಳಿಗ್ಗೆ ೪.೩೦ರ ಬ್ರಾಹ್ಮೀ ಮಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ, ೬.೩೦ರಿಂದ ರುದ್ರಾಭಿಶೇಕ, ಕಲಾಹೋಮ, ಗ್ರಾಮದೇವತಾ, ಇಷ್ಟದೇವತಾ, ಜಯಾದಿ ಪ್ರಾಯಶ್ಚಿತ್ತ ಹೋಮ, ಶಿಖರ ಕಲಶಾರೋಹಣ, ಪೂರ್ಣಹುತಿ, ದೃಷ್ಠಿಪೂಜೆ, ಮಂತ್ರೋಪದೇಶಗಳು ನಡೆಯಿತು.

ಬಾಳೆಹೊನ್ನೂರು ತೆಂಡೇಕೆರೆ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ತೇಜೂರು ಸಿದ್ದರಾಮೇಶ್ವರ ಮಠದ ಕಲ್ಯಾಣ ಸ್ವಾಮೀಜಿ, ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠದ ಶ್ರೀ ಜಯದೇವ ಸ್ವಾಮಿಗಳು, ನುಗ್ಗೆಹಳ್ಳಿ ರಂಭಾಪುರಿ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಕರ್ಜುವಳ್ಳಿಯ ರಂಭಾಪುರಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮಿ, ಟಿ.ಮಾಯಗೋಡನಹಳ್ಳಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು, ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮಿಗಳು, ಶಿರದನಹಳ್ಳಿಯ ಶ್ರೀ ಸಿದ್ದಲಿಂಗಸ್ವಾಮಿ, ಲಾಲನಹಳ್ಳಿ ದಾಸೋಹ ಮಠದ ಜಯದೇವಿತಾಯಿ ಅವರ ಉಪಸ್ಥಿತಿಯಲ್ಲಿ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು.

ಚಿತ್ರದುರ್ಗದ ಮಾಜಿ ಶಾಸಕ ಎಸ್. ಬಸವರಾಜು, ವೀರಶೈವ ಲಿಂಗಾಯಿತ ಮಹಾವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್, ಬೆಂಗಳೂರಿನ ಉದ್ಯಮಿ ಸೋಮಶೇಖರ್, ಹಾಸನ ಜಿಲ್ಲಾಧ್ಯಕ್ಷ ಸಿದ್ದೇಶ್‌ ನಾಗೇಂದ್ರ, ವಕೀಲರು, ವೀ.ಲಿಂ.ಮ.ವೇದಿಕೆ ರಾಜ್ಯ ಸಮಿತಿ ಸದಸ್ಯ ವಸಂತ್‌ ಕುಮಾರ್, ಹಿರೆಬೆಳಗೂಲಿ ಗ್ರಾಪಂ ಮಾಜಿ ಅಧ್ಯಕ್ಷ ವಿರೂಪಾಕ್ಷ ಇತರರು ಇದ್ದರು.

Share this article