ಹುತಾತ್ಮ ಪೊಲೀಸರ ತ್ಯಾಗ, ಬಲಿದಾನ ಸ್ಮರಣೀಯ: ನ್ಯಾಯಾಧೀಶ ಎಂ.ಜಿ. ಶಿವಳ್ಳಿ

KannadaprabhaNewsNetwork |  
Published : Oct 22, 2026, 02:00 AM IST
21ಎಚ್‌ವಿಆರ್5,5ಎ | Kannada Prabha

ಸಾರಾಂಶ

ಪೊಲೀಸರು ಬಿಸಿಲು, ಮಳೆ, ಚಳಿ ಎನ್ನದೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಾರೆ. ಸಾರ್ವಜನಿಕರು ನೆಮ್ಮದಿಯಿಂದ ಬದುಕಲು, ಹಬ್ಬ-ಹರಿದಿನಗಳನ್ನು ಸಂತೋಷದಿಂದ ಆಚರಿಸಲು ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬದ ಸಂತೋಷವನ್ನೂ ಬದಿಗಿಟ್ಟು ಶ್ರಮಿಸುತ್ತಾರೆ.

ಹಾವೇರಿ: ದೇಶದ ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುವಾಗ ಪ್ರಾಣಾರ್ಪಣೆ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ತ್ಯಾಗ, ಬಲಿದಾನ ಸದಾ ಸ್ಮರಣೀಯ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎಂ.ಜಿ. ಶಿವಳ್ಳಿ ಹೇಳಿದರು.

ನಗರದ ಹೊರವಲಯದಲ್ಲಿರುವ ಕೆರಿಮತ್ತಿಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರು ಬಿಸಿಲು, ಮಳೆ, ಚಳಿ ಎನ್ನದೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಾರೆ. ಸಾರ್ವಜನಿಕರು ನೆಮ್ಮದಿಯಿಂದ ಬದುಕಲು, ಹಬ್ಬ-ಹರಿದಿನಗಳನ್ನು ಸಂತೋಷದಿಂದ ಆಚರಿಸಲು ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬದ ಸಂತೋಷವನ್ನೂ ಬದಿಗಿಟ್ಟು ಶ್ರಮಿಸುತ್ತಾರೆ. ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ, ವಿಪತ್ತು ನಿರ್ವಹಣೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಜನರ ರಕ್ಷಣೆಗೆ ಮುಂದಾಗುತ್ತಾರೆ. ಇಂತಹ ಸೇವೆಯಲ್ಲಿ ಪ್ರಾಣ ಕಳೆದುಕೊಂಡವರ ತ್ಯಾಗವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಖಾಕಿ ಸಮವಸ್ತ್ರ ಕೇವಲ ಉದ್ಯೋಗದ ಸಂಕೇತವಲ್ಲ; ಅದು ಕರ್ತವ್ಯ, ಶಿಸ್ತು, ಧೈರ್ಯ, ಜವಾಬ್ದಾರಿ ಮತ್ತು ದೇಶಸೇವೆಯ ಪ್ರತೀಕವಾಗಿದೆ. ಕಾನೂನನ್ನು ಗೌರವಿಸುವುದು, ಪೊಲೀಸರ ಕರ್ತವ್ಯಕ್ಕೆ ಸಹಕರಿಸುವುದು ಹಾಗೂ ಸಾರ್ವಜನಿಕ ಶಾಂತಿ ಕಾಪಾಡಲು ಕೈಜೋಡಿಸುವುದೇ ಹುತಾತ್ಮರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.

ಪೊಲೀಸ್ ಇಲಾಖೆಯ ಜವಾಬ್ದಾರಿಗಳು ಇಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸಿವೆ. ಸೈಬರ್ ಅಪರಾಧಗಳ ನಿಯಂತ್ರಣ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಹಾಗೂ ಸಾರ್ವಜನಿಕರ ಆಸ್ತಿ ಮತ್ತು ಜೀವ ರಕ್ಷಣೆ ಸೇರಿದಂತೆ ಹಲವು ಸವಾಲುಗಳನ್ನು ಪೊಲೀಸರು ಎದುರಿಸುತ್ತಿದ್ದಾರೆ. ಯಾವುದೇ ಸಂಕಷ್ಟದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ಜನರ ನೆರವಿಗೆ ಧಾವಿಸುವ ಪೊಲೀಸ್ ಸಿಬ್ಬಂದಿಯ ಸೇವೆ ಶ್ಲಾಘನೀಯವಾಗಿದೆ. ಪೊಲೀಸ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸುವುದು ಹಾಗೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಎತ್ತಿಹಿಡಿಯುವುದು ಅತ್ಯಂತ ಮುಖ್ಯವಾಗಿದೆ.

ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕುಟುಂಬಗಳಿಗೆ ಗೌರವ, ಸಹಕಾರ ಹಾಗೂ ಬೆಂಬಲ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ. ಹುತಾತ್ಮರ ದಿನಾಚರಣೆ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಅವರ ತ್ಯಾಗವನ್ನು ಸದಾ ಸ್ಮರಿಸುವ ಸಂಕಲ್ಪವಾಗಬೇಕು. ಪೊಲೀಸ್ ಸಿಬ್ಬಂದಿಯ ಸೇವೆ ಮತ್ತು ಸಮರ್ಪಣೆಯನ್ನು ಗುರುತಿಸಿ ಗೌರವಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಕಾಪಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, 1959ರ ಅ. 21ರಂದು ಭಾರತ- ಚೀನಾ ಗಡಿಯ ಲಡಾಖ್‌ನ ಹಾಟ್ ಸ್ಪಿಂಗ್ಸ್ ಪ್ರದೇಶದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಭಾರತೀಯ ಪೊಲೀಸ್ ಪಡೆಯ ಮೇಲೆ ಚೀನಾದ ಸೈನಿಕರು ನಡೆಸಿದ ದಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರು. ಪ್ರತಿಕೂಲ ಹವಾಮಾನ ಮತ್ತು ಸೀಮಿತ ಶಸ್ತ್ರಾಸ್ತ್ರಗಳ ನಡುವೆಯೂ ಧೈರ್ಯದಿಂದ ಹೋರಾಡಿದ ವೀರರ ಸ್ಮರಣಾರ್ಥ ಪ್ರತಿವರ್ಷ ಅ. 21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದರು.

2026ನೇ ಸಾಲಿನಲ್ಲಿ ದೇಶಾದ್ಯಂತ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ 154 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸ್ಮರಿಸಲಾಗುತ್ತಿದ್ದು, ಇವರಲ್ಲಿ ಕರ್ನಾಟಕದ ಐವರು ಸೇರಿದ್ದಾರೆ. ಹುತಾತ್ಮರ ಬಲಿದಾನ ಪೊಲೀಸ್ ಇಲಾಖೆಯ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ 154 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಹೆಸರುಗಳನ್ನು ವಾಚಿಸಿ ಗೌರವ ಸಲ್ಲಿಸಲಾಯಿತು. ಪರೇಡ್ ಕಮಾಂಡರ್ ಆರ್‌ಪಿಐ ಪ್ರದೀಪ್ ಪಿ.ಆರ್. ಅವರ ನೇತೃತ್ವದಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಮೌನಾಚರಣೆ ಹಾಗೂ ಪೊಲೀಸ್ ಬ್ಯಾಂಡ್ ಮೂಲಕ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶ ರಾಹುಲ್ ನ್ಯಾಮಗೌಡ್ರ, ಜಿಲ್ಲೆಯ ವಿವಿಧ ವಿಭಾಗಗಳ ಡಿವೈಎಸ್‌ಪಿಗಳು, ಸಿಪಿಐಗಳು, ಪಿಎಸ್‌ಐಗಳು, ಎಎಸ್‌ಐಗಳು, ಪೊಲೀಸ್ ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಮಾಜ ಸೇವಕರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಯುವಕ ನಾಪತ್ತೆ
ಕಾರಟಗಿಯಲ್ಲಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ರಥೋತ್ಸವ ಸಂಭ್ರಮ