ರಿಯಾಜಅಹ್ಮದ ಎಂ. ದೊಡ್ಡಮನಿ
ಎಪ್ಪತ್ತುಗಿರಿ ನೋಡುವುದಕ್ಕಿಂತ ಕಪ್ಪತಗಿರಿ ನೋಡುವುದು ಮೇಲು ಎಂಬ ಜನಪದ ನುಡಿಯು ಕಪ್ಪತ್ತಗುಡ್ಡದ ವೈಭವವನ್ನು ಬಿಂಬಿಸುತ್ತದೆ. ಔಷಧಿ ಸಸ್ಯಗಳ ಕಾಶಿ, ಜೀವವೈವಿಧ್ಯದ ತಾಣ, ಪರಿಸರ ಅಧ್ಯಯನದ ಪ್ರಯೋಗಾಲಯ, ಜನಪದ ಕಥೆಗಳ ತೊಟ್ಟಿಲು ಹಾಗೂ ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಪ್ಪತ್ತಗುಡ್ಡ ಇಂದು ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.
33 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಶಿರಹಟ್ಟಿ, ಮುಂಡರಗಿ ಹಾಗೂ ಗದಗ ತಾಲೂಕುಗಳಲ್ಲಿ ಹರಡಿಕೊಂಡಿರುವ ಈ ಗಿರಿಶ್ರೇಣಿ, ಬಿಂಕದಕಟ್ಟಿಯಿಂದ ಸಿಂಗಟಾಲೂರಿನವರೆಗೆ ಸುಮಾರು 64 ಕಿಮೀ ಉದ್ದವಿದೆ. ಬೇಸಿಗೆಯಲ್ಲಿ ಬೋಳುಗುಡ್ಡದಂತೆ ಕಾಣುವ ಈ ಪ್ರದೇಶ ಮಳೆಗಾಲದಲ್ಲಿ ಹಸಿರು ಉಡುಗೆಯುಟ್ಟು ಪ್ರಕೃತಿ ಸೌಂದರ್ಯ ಅನಾವರಣ ಮಾಡುತ್ತದೆ.ಮಾದರಿಯಾದ ಅರಣ್ಯ ಇಲಾಖೆ: ಕಪ್ಪತ್ತಗುಡ್ಡಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮಳೆಗಾಲದಲ್ಲಿ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರಿಗೂ ವಿವಿಧ ಮಾದರಿಯ ಬೀಜದುಂಡೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದರ ಮೂಲಕ ಜನರಲ್ಲಿ ಗಿಡ ನೆಡುವ ಅಭ್ಯಾಸ ಬೆಳೆಸುವ ಉದ್ದೇಶ ಹೊಂದಲಾಗಿದೆ.ಜತೆಗೆ ಪ್ಲಾಸ್ಟಿಕ್ ಮುಕ್ತ ಕಪ್ಪತ್ತಗುಡ್ಡ ನಿರ್ಮಾಣಕ್ಕಾಗಿ ಪ್ರವಾಸಿಗರು ತರುವ ಪ್ಲಾಸ್ಟಿಕ್ ಬಾಟಲ್‌ಗಳಿಗೆ ಸ್ಟಿಕ್ಕರ್ ಅಳವಡಿಸಲಾಗುತ್ತದೆ. ಇದುವರೆಗೆ ಕಪ್ಪತ್ತಗುಡ್ಡಕ್ಕೆ ಬರುವ ಪ್ರವಾಸಿಗರಿಂದ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣದಲ್ಲಿ ಗಮನಾರ್ಹ ಯಶಸ್ಸು ಕಂಡಿದೆ. ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಮಾದರಿಯ 10 ಸಾವಿರ ಬೀಜದುಂಡೆಗಳನ್ನು ಪ್ರವಾಸಿಗರಿಗೆ ವಿತರಿಸಲಾಗಿದೆ ಎಂದು ಕಪ್ಪತ್ತಗುಡ್ಡ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ತಿಳಿಸಿದ್ದಾರೆ.
ಜೀವವೈವಿಧ್ಯದ ಅಪರೂಪದ ತಾಣ: ಕಪ್ಪತ್ತಗುಡ್ಡ ಔಷಧೀಯ ಸಸ್ಯಗಳ ಆಗರವಾಗಿದ್ದು, ಆಯುರ್ವೇದ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಅಧ್ಯಯನ ಕೇಂದ್ರವಾಗಿದೆ. ಚಿರತೆ, ಕರಡಿ, ತೋಳ, ನರಿ, ಪುನುಗು ಬೆಕ್ಕು, ಚುಕ್ಕೆ ಜಿಂಕೆ, ಸಾರಂಗ, ಮುಳ್ಳುಹಂದಿ ಸೇರಿದಂತೆ ಹಲವು ವನ್ಯಜೀವಿಗಳು ಇಲ್ಲಿ ಕಂಡುಬರುತ್ತವೆ. ನವಿಲು, ಬುಲ್‌ಬುಲ್, ಸನ್‌ಬರ್ಡ್, ಮಿಂಚುಳ್ಳಿ, ಬ್ಲ್ಯಾಕ್ ಡ್ರಾಂಗೋ ಸೇರಿದಂತೆ ವೈವಿಧ್ಯಮಯ ಪಕ್ಷಿಗಳು ಛಾಯಾಗ್ರಾಹಕರು ಮತ್ತು ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತವೆ.
ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಹಲವು ಪರಿಸರಪ್ರೇಮಿಗಳು ಕಪ್ಪತ್ತಗುಡ್ಡದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ ಈ ಪ್ರದೇಶ ಉಳಿದುಕೊಂಡಿದೆ. ಇದು ಉತ್ತರ ಕರ್ನಾಟಕದ ಪರಿಸರ ಸಮತೋಲನ ಕಾಪಾಡುವ ಪ್ರಮುಖ ಹಸಿರು ಸಂಪತ್ತಾಗಿ ಗುರುತಿಸಿಕೊಂಡಿದೆ.