ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದಲ್ಲಿ ಬುಧವಾರ ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಅದರ ಪಾವಿತ್ರ್ಯತೆಯನ್ನು ಹಾಳು ಮಾಡಬಾರದು ಎಂದರು.
ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಕೆಲಸ ಮಾಡಿದಾಗ ಮಾತ್ರ ಸಹಕಾರ ಕ್ಷೇತ್ರದ ಮೂಲಕ ಸಮೂಹಕ್ಕೆ ಒಂದಿಷ್ಟು ಕೊಡುಗೆಯನ್ನು ನೀಡಲು ಸಾಧ್ಯವಿದೆ. ತಾಲೂಕಿನಲ್ಲಿ ಕಲ್ಮನೆ ಹೊರತುಪಡಿಸಿ ಉಳಿದ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಕಲ್ಮನೆ ಸೊಸೈಟಿಯನ್ನು ಸಹ ಸರಿದಾರಿಗೆ ತರುವ ಕೆಲಸ ಮಾಡಲಾಗುತ್ತಿದೆ. ಹಣಕಾಸು ದುರುಪಯೋಗವಾಗದಂತೆ, ಸದಸ್ಯರ ಹಿತ ಕಾಯುವುದು ಹೇಗೆ ಎನ್ನುವುದನ್ನು ಇಂತಹ ಮಾಹಿತಿ ಕಾರ್ಯಾಗಾರಗಳ ಮೂಲಕ ಅರಿತುಕೊಳ್ಳಲು ಸಾಧ್ಯವಿದೆ. ಈ ಆರ್ಥಿಕ ವರ್ಷದಿಂದ ತಾಲೂಕಿನಲ್ಲಿ ಉತ್ತಮ ಸಹಕಾರಿ ಸಂಘಗಳಿಗೆ ಡಿಸಿಸಿ ಬ್ಯಾಂಕ್ ಮೂಲಕ ಹೆಚ್ಚಿನ ಸಾಲಸೌಲಭ್ಯ ಒದಗಿಸುವ ಜೊತೆಗೆ ಅತ್ಯುತ್ತಮವಾಗಿ ಕೆಲಸ ಮಾಡುವ ಮೂರು ಸಹಕಾರಿ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಸಿ. ವರ್ಷಕ್ಕೆ ೮ಕ್ಕೂ ಹೆಚ್ಚು ತರಬೇತಿಗಳನ್ನು ಆಯೋಜಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ವ್ಯವಹರಿಸುವ ಕುರಿತು ಮಾಹಿತಿ ನೀಡಲಾಗುತ್ತದೆ. ಪ್ರತಿಯೊಂದು ಸಹಕಾರಿ ಸಂಸ್ಥೆಯ ಪ್ರಮುಖರು ಇಂತಹ ಕಾರ್ಯಾಗಾರಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವ ಮೂಲಕ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಮೃತೇಶ್ವರ ಬಿ.ಎಂ., ಸಹಕಾರ ಸಂಘಗಳ ಸಹಾಯಕ ನಿಬಂಧಕ ಸತೀಶ್ ಕುಮಾರ್ ಎಚ್.ಎಸ್. ಉಪಸ್ಥಿತರಿದ್ದರು. ಯಶವಂತ ಕುಮಾರ್ ಎಚ್. ಸ್ವಾಗತಿಸಿ, ದಿನೇಶ್ ಬಿ.ಜಿ. ಬರದವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ಎಚ್.ಎಚ್. ವಂದಿಸಿ, ಸಂತೋಷ ಕುಮಾರ್ ಆರ್. ನಿರೂಪಿಸಿದರು.