ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿ ವಾಲ್ಮೀಕಿ, ಮುಡಾ ಹಗರಣದ ಕುರಿತು ಮುಖ್ಯಮಂತ್ರಿಗಳು ಸುಧೀರ್ಘವಾಗಿ ಮಾತನಾಡಿದ್ದಾರೆ. ಮುಡಾದಲ್ಲಿ ಯಾವುದೇ ಹಗರಣ ಆಗಿಲ್ಲ, ವಾಲ್ಮೀಕಿ ನಿಗಮದ ಹಗರಣ ತನಿಖೆ ಆಗುತ್ತಿದ್ದು, ಎಸ್‌ಐಟಿ, ಇಡಿ ತನಿಖೆ ಮಾಡುತ್ತಿವೆ. ಈಗಾಗಲೇ ಸಾಕಷ್ಟು ಹಣ ರಿಕವರಿ ಆಗಿದೆ, ಉಳಿದದ್ದು ರಿಕವರಿ ಆಗೋದು ಪಕ್ಕಾ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಹಗರಣಗಳು ನಡೆದಿದ್ದು, ಅವುಗಳನ್ನು ತನಿಖೆ ನಡೆಸುತ್ತೇವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಗಳ ತಪ್ಪಿದೆ. ನಾವೇ ಸಾಲ ಕೇಳಿದರೆ ಬೇಗ ಕೊಡಲ್ಲ. ಕೇಂದ್ರ ವಿತ್ತ ಸಚಿವರು ಎಚ್ಚರಿಕೆ ವಹಿಸಬೇಕಿತ್ತು, ಅವರು ಸಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲೂ ಹಗರಣ ನಡೆದಿವೆ. ಬಿಜೆಪಿಯಲ್ಲಿ ನಡೆದ ಎಲ್ಲ ಹಗರಣಗಳ ತನಿಖೆ ನಡೆಯುತ್ತವೆ, ನಾವು ಲಿಸ್ಟ್ ಕೊಡುತ್ತೇವೆ, ಸಿಬಿಐ ತನಿಖೆ ಆಗಲಿ ಎಂದಿದ್ದಾರೆ.ರಾಜ್ಯದಲ್ಲಿ ಹಗರಣಗಳ ಸದ್ದು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಪಾತ್ರ ಇಲ್ಲ. ಹಗರಣ ಕೇಳಿ ಬಂದಾಗ ನಾವು ಸುಮ್ಮನೇ ಕೂತಿಲ್ಲ. ನಾಗೇಂದ್ರ ಮೇಲೆ ಸಹ ನೇರ ಆರೋಪ ಇಲ್ಲ. ಓರಲ್ ಇನ್‌ಸ್ಟ್ರಕ್ಷನ್ ಅಂತ ಹೇಳುತ್ತಾರೆ. ತನಿಖೆ ನಡೆಯುತ್ತದೆ, ಅವರ ಪಾತ್ರ ಇದೆಯೋ ಇಲ್ಲವೋ ಗೊತ್ತಾಗುತ್ತದೆ. ಮೌಖಿಕ ಆದೇಶ ಅಂತ ಯಾರು ಬೇಕಾದರೂ ಆರೋಪ ಮಾಡಬಹುದು. ನಿಗಮಗಳಲ್ಲಿ ಮೌಖಿಕ ಆದೇಶ ಅಲ್ಲ, ರೈಟಿಂಗ್‌ನಲ್ಲಿ ಕೊಟ್ಟರೂ ಅದು ಕಾನೂನು ಬಾಹಿರ ಇದ್ದರೆ ಎಂಡಿ ಮಾಡಬಾರದು. ಇದರಲ್ಲಿ ಎಂಡಿ ಮುಖ್ಯ ಪಾತ್ರ ಇದೆ. ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಆಗಿದ್ದು ಸತ್ಯ, ಮುಡಾದಲ್ಲಿ ಯಾವುದೇ ಹಗರಣ ನಡೆದೇ ಇಲ್ಲ. ನಮ್ಮ ಸರ್ಕಾರದಲ್ಲಿ ತಪ್ಪಿತಸ್ಥರು ಯಾರೇ ಇರಲಿ ಶಿಕ್ಷೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಭೇಟಿ ಕುರಿತು ಮಾತನಾಡಿ, ನೈಸರ್ಗಿಕ ವಿಕೋಪ ಆಗಿದೆ. ಸಿಎಂ, ಸಚಿವರು ಅಧಿವೇಶನ ನಡೆದಿದೆ, ಹೀಗಾಗಿ, ಹೋಗಿರಕ್ಕಿಲ್ಲ. ಯಾಕೆ ಕುಮಾರಸ್ವಾಮಿ ಇಷ್ಟೊಂದು ಆತುರದಲ್ಲಿದ್ದಾರೆ?. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನೈಸರ್ಗಿಕ ವಿಕೋಪ ಆಗಿದ್ದ ವೇಳೆ ಎಲ್ಲಾ ಕಡೆಗೆ ಹೋಗಿದ್ದರಾ?. ಬಹಳ ಮಳೆ ಆಗಿದ್ದಾಗ ಭೂ ಕುಸಿತ ಆಗುತ್ತೆ. ಪ್ರಕೃತಿ ಮುಂದೆ ಯಾರೂ ದೊಡ್ಡವರಲ್ಲ. ಸಂಬಂಧಿಸಿದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಹೋಗುತ್ತಾರೆ ಎಂದು ಹೇಳಿದರು.ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅನ್ ಆಫೀಸಿಯಲ್ ಬಿಜೆಪಿಯ ವಿರೋಧ ಪಕ್ಷದ ನಾಯಕ ಎಂದು ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯ ವಾಡಿದರು. ಆಫೀಸಿಯಲ್ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಅನ್ ಆಫೀಸಿಯಲ್ ಯತ್ನಾಳ ವಿರೋಧ ಪಕ್ಷದ ನಾಯಕ ಎಂದಿದ್ದಾರೆ.
------------------------------------------ಬಾಕ್ಸ್
ಯತ್ನಾಳ ಕೋವಿಡ್ ಹಗರಣದ ದಾಖಲೆ ಕೊಡಿಬಿಜೆಪಿ ಅಧಿಕಾರದಲ್ಲಿ ಕೋವಿಡ್‌ನಲ್ಲಿ ಹಗರಣ ಆಗಿದೆ ಎಂದು ಯತ್ನಾಳ್ ಆರೋಪಿಸಿದ್ದ ವಿಚಾರದ ಕುರಿತು ಮಾತನಾಡಿದ ಅವರು, ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಲು ನಾವು ಸಿದ್ಧ. ಯತ್ನಾಳ್ ಬಳಿ ದಾಖಲೆಗಳಿದ್ದರೆ ಕೊಡಲಿ ನಾವು ತನಿಖೆ ನಡೆಸುತ್ತೇವೆ. ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ಹಗರಣ ಆಗಿದೆ ಎಂದು ಯತ್ನಾಳ್ ಹೇಳಿದ್ದಾರೆ. ಕೋವಿಡ್ ಹಣ ತಿಂದು ತೇಗಿದ್ದಾರೆ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ₹ 10 ಸಾವಿರ ಕೋಟಿ ಹಣ ಮಾರಿಷಸ್‌ನಲ್ಲಿ ಇಟ್ಟಿದ್ದಾರೆ ಅಂತ ಹೇಳಿದ್ದರು. ಅವೆಲ್ಲ ತನಿಖೆ ಆಗಬೇಕಲ್ಲ. ಸ್ವತಃ ಅವರ ಪಕ್ಷದ ಯತ್ನಾಳರೇ ಹೇಳಿದ್ದಾರೆ. ಯತ್ನಾಳ್ ಸುಳ್ಳು ಹೇಳ್ತಾರಾ? ಅವರು ವಿಜಯಪುರ ಜಿಲ್ಲೆಯವರು ಸುಳ್ಳು ಹೇಳಲ್ಲ ಎಂದುಕೊಂಡಿದ್ದೇನೆ ಎಂದು ಟಾಂಗ್ ಕೊಟ್ಟರು. ಯತ್ನಾಳ್ ಸೂಕ್ತ ದಾಖಲೆಗಳನ್ನು ನೀಡಿದರೆ ನಾವು ತನಿಖೆ ಮಾಡಿಸುತ್ತೇವೆ. ಯತ್ನಾಳ್ ಬಿಜೆಪಿ ಹಗರಣದ ದಾಖಲೆ ಕೊಡಲಿ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.