ಊರಿಂದ ಒಂದು ಕಿಮೀ ದೂರದ ಶೆಡ್‌ನಲ್ಲಿ ಶಾಲೆ ಶುರು

KannadaprabhaNewsNetwork | Published : Oct 26, 2023 1:00 AM

ಸಾರಾಂಶ

80 ಮಕ್ಕಳಲ್ಲಿ ಮೊದಲ ದಿನ ಬಂದವರೇ ಮೂರು ವಿದ್ಯಾರ್ಥಿಗಳು। ತಾತ್ಕಾಲಿಕ ಶೆಡ್ ನಲ್ಲಿ ಮೂಲ ಸೌಕರ್ಯದ ಕೊರತೆ
80 ಮಕ್ಕಳಲ್ಲಿ ಮೊದಲ ದಿನ ಬಂದವರೇ ಮೂರು ವಿದ್ಯಾರ್ಥಿಗಳು। ತಾತ್ಕಾಲಿಕ ಶೆಡ್ ನಲ್ಲಿ ಮೂಲ ಸೌಕರ್ಯದ ಕೊರತೆ ಕನ್ನಡಪ್ರಭ ವಾರ್ತೆ ಹಿರಿಯೂರು ರಸ್ತೆ ಅಗಲೀಕರಣಕ್ಕಾಗಿ ಹುಲಗಲಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳನ್ನುನೆಲಸಮ ಮಾಡಿದ ಮೇಲೆ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್ ಗಳಲ್ಲಿ ಬುಧವಾರದಿಂದ ಶಾಲೆ ಆರಂಭವಾಗಿದೆ. 80 ಮಕ್ಕಳಲ್ಲಿ ಬುಧವಾರ ಶಾಲೆಗೆ ಬಂದದ್ದು ಮೂರೇ ಮಕ್ಕಳು. ಭೂ ಸ್ವಾಧೀನ ಇಲಾಖೆ ಪರಿಹಾರವೆಂದು ಎಸ್‌ಡಿಎಂಸಿ ಅಧ್ಯಕ್ಷರ ಖಾತೆಗೆ ಹಾಕಿದ ಮೊತ್ತವನ್ನು ಹಿಂಪಡೆದ ಶಿಕ್ಷಣ ಇಲಾಖೆ ಬರೋಬ್ಬರಿ ನಾಲ್ಕು ತಿಂಗಳಾದರೂ ಹೊಸ ಕಟ್ಟಡ ಕಟ್ಟುವ ಬಗ್ಗೆ ಗಮನಹರಿಸಿಲ್ಲ. ಶಾಲೆ ಕಟ್ಟಲು ಭರ್ತಿ ಐದು ಎಕರೆ ಜಾಗ ಇದೆ. ಆದರೆ ನಾಲ್ಕು ತಿಂಗಳು ಭೂ ಸ್ವಾಧೀನ ಇಲಾಖೆ ಕೊಟ್ಟ ಹಣ ಇಲಾಖೆಯ ಬಳಿಯಲ್ಲಿಯೇ ಇದ್ದು ಅದಕ್ಕೆ ಲಕ್ಷಗಟ್ಟಲೆ ಬಡ್ಡಿ ಬೆಳೆದಿದೆ. ಊರ ಹೊರಗೆ ಸುಮಾರು ಒಂದು ಕಿಮೀ ದೂರದಲ್ಲಿ ಶೆಡ್ ಗಳನ್ನು ನಿರ್ಮಿಸಿದ್ದು, ಆ ಶಾಲೆಗೆ ಹೋಗಲು ಇದೀಗ ರಸ್ತೆ ನಿರ್ಮಾಣವಾಗುತ್ತಿದೆ. ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಯಿದ್ದು ಎದುರಿಗಿರುವ ಧರ್ಮಸ್ಥಳ ಸಂಘದ ಜವಾಬ್ದಾರಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ತರಲಾಗುತ್ತಿದೆ. ಬೆಟ್ಟದ ಸಾಲಿನಲ್ಲಿರುವ ಶಾಲೆಗೆ ಕಟ್ಟಡದ ಜೊತೆಗೆ ತುರ್ತಾಗಿ ಕಾoಪೌಂಡ್ ಆಗಬೇಕಿದೆ. ಶಾಲೆಯ ಶೆಡ್ ಗಳಿಗೆ ಕೂಲಿಂಗ್ ಶೀಟ್ ಅಳವಡಿಸಲಾಗಿದ್ದರು ಸಹ ಹೊರಗಿನ ಬಿಸಿಲ ಧಗೆ ಅವುಗಳನ್ನು ಸಹ ಬಿಸಿಯಾಗಿಸಲಿದೆ. ಹುಲಗಲಕುಂಟೆ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಭೂ ಸ್ವಾಧೀನ ಇಲಾಖೆ ನೀಡಿದ ಹಣ ಕಂಪನಿ ಹಿಂಪಡೆದಿಲ್ಲ. ಅದು ನಮ್ಮ ಬೇಡಿಕೆಯಷ್ಟು ಕೊಠಡಿ ನಿರ್ಮಾಣಕ್ಕೆ ಸಾಲದು ಎಂದು ಹಾಗೇ ಉಳಿಸಲಾಗಿದೆ. ಈಗಾಗಲೇ ಸದ್ಯದ ಮಟ್ಟಿಗೆ ಮಕ್ಕಳ ಓಡಾಟಕ್ಕೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಚಿವರ ಕಡೆಯಿಂದಲೂ ಶಾಲಾ ಕಟ್ಟಡ ನಿರ್ಮಾಣದ ಅನುದಾನಕ್ಕೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎನ್ನಲಾಗಿದೆ. ಆ ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕೆ ನಾವು ಕಟಿಬದ್ದರಾಗಿದ್ದೇವೆ. -ತಿಪ್ಪೇಸ್ವಾಮಿ.. ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಯನ್ನು ಬೆಟ್ಟದ ತಪ್ಪಲಿಗೆ ತಂದು ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಊರಿಂದ ಒಂದು ಕಿಮೀ ನಷ್ಟು ಶಾಲೆ ದೂರವಿದೆ. ಹೊಸ ಕಟ್ಟಡ ಕಟ್ಟಿ ಹಳೆಯ ಕಟ್ಟಡ ತೆರವು ಮಾಡಿ ಎಂಬ ಊರಿನವರ ಮನವಿಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ. ಹಳೆಯ ಶಾಲೆಯ ಬಾಗಿಲು, ಕಿಟಕಿ, ಅಡುಗೆ ಕೋಣೆಯ ಕೆಲವು ವಸ್ತುಗಳನ್ನು ಸಹ ನೋಡದೆ ಕೆಡವಿ ಹಾಕಿದರು. ಇನ್ನಾದರೂ ಆದಷ್ಟು ಬೇಗ ಹೊಸ ಕೊಠಡಿ ನಿರ್ಮಾಣ ಮಾಡಿಕೊಟ್ಟು ನಮ್ಮ ಗ್ರಾಮದ ಮಕ್ಕಳ ಭವಿಷ್ಯಕ್ಕೆ ಅಧಿಕಾರಿಗಳು ದಾರಿ ಮಾಡಿಕೊಡಬೇಕು. -ರಂಗಸ್ವಾಮಿ. ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ

Share this article