ಅಣ್ಣಾಸಾಬ ತೆಲಸಂಗ
ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುವುದೆಂದರೆ ಮೂಗುಮುರಿಯುವ ಇಂದಿನ ಕಾಲದಲ್ಲಿ ತಾಲೂಕಿನ ಕಟಗೇರಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ. ಈ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯ ಸಾಧನೆ ಸಾಕಷ್ಟು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ಅನೇಕ ಖಾಸಗಿ ಶಾಲೆಗಳ ಹೈಟೆಕ್ ಸೌಲಭ್ಯಗಳ ನಡುವೆ ಗ್ರಾಮೀಣ ಭಾಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ರಾಜ್ಯದ ಗಮನ ಸೆಳೆಯುವಂತೆ ಅಮೋಘ ಸಾಧನೆ ಮಾಡಿದ ಪ್ರಾರ್ಥನಾ ಕಲಿತಿರುವ ಶಾಲೆಗೆ ಸ್ಥಿತಿಗತಿ ಹೇಗಿದೆ ಎಂಬ ಕುತೂಹಲ ಜನರಲ್ಲಿದೆ.
ಉತ್ತಮ ಶಿಕ್ಷಕರ ಬಳಗ:ಸುಂದರ ಪರಿಸರ ಹಾಗೂ ಶಾಂತವಾದ ವಾತಾವರಣವಿರುವ ಈ ಕಟಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಷಯವಾರು ಅನುಭವಿ ಶಿಕ್ಷಕರಿದ್ದಾರೆ. ಇದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕುತ್ತಿದೆ. ಇಲ್ಲಿನ ಮುಖ್ಯೋಪಾಧ್ಯಾಯರು ಸೇರಿದಂತೆ ಶಿಕ್ಷಕ ಸಿಬ್ಬಂದಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂತಹ ಶಿಕ್ಷಕರ ಬಳಗದ ಸಹಕಾರದಿಂದ ಪ್ರಾರ್ಥನಾ ಕಠಿಣ ಪರಿಶ್ರಮ, ಸತತ ಪ್ರಯತ್ನ ಮಾಡಿ ಈ ಬಾರಿಯ ಎಸ್ಎಸ್ಎಲ್ಸಿಯಲ್ಲಿ ರಾಜ್ಯಮಟ್ಟದ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಖಾಸಗಿ ಶಾಲೆಗಳಲ್ಲಿ ಅನೇಕ ಸ್ಮಾರ್ಟ್ ಬೋರ್ಡ್‌ಗಳನ್ನು, ಸ್ಮಾರ್ಟ್ ಕ್ಲಾಸ್‌ಗಳನ್ನ ಅಳವಡಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಅನೇಕ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಪ್ರೌಢಶಾಲೆಗಳಲ್ಲಿ ಈಗಾಗಲೇ ಡಿಜಿಟಲ್ ಕ್ಲಾಸ್ ರೂಮ್‌ಗಳನ್ನು ಅಳವಡಿಸಲಾಗಿದೆ. ಆದರೆ, ಕಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಇಲ್ಲದಿರುವುದು ದುರ್ದೈವದ ಸಂಗತಿ ಎನ್ನುವಂತಾಗಿದೆ.
ಕಟಗೇರಿ ಸರ್ಕಾರಿ ಪ್ರೌಢಶಾಲೆಯು ಗ್ರಾಮದಿಂದ 2 ಕಿಮೀ ದೂರದಲ್ಲಿದ್ದು, ಗ್ರಾಮೀಣ ಭಾಗದ ಮಕ್ಕಳು ನಡೆದುಕೊಂಡು ಶಾಲೆಗೆ ಹೋಗುವ ಪರಿಸ್ಥಿತಿ ಇದೆ. ರಾಜ್ಯ ಸರ್ಕಾರ ಹಿಂದಿನ ವರ್ಷಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ಭಾಗ್ಯ ಕರುಣಿಸಿತ್ತು. ಅಂತಹ ಯೋಜನೆ ನಿರಂತರವಾಗಿದ್ದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಹಳಷ್ಟು ಸಹಕಾರಿಯಾಗಲಿದೆ.
ಕಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ 365ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಲಿಕೆಗೆ ಮತ್ತು ಗ್ರಂಥಾಲಯಕ್ಕೆ ಇನ್ನೂ ಎರಡು ಕೊಠಡಿಗಳ ಅವಶ್ಯಕತೆ ಇದೆ. ವಿದ್ಯುತ್ ಸೌಲಭ್ಯ ಹೊಂದಿರುವ ಈ ಶಾಲೆಗೆ ಇದುವರೆಗೆ ಕಂಪ್ಯೂಟರ್ ಶಿಕ್ಷಣ, ಡಿಜಿಟಲ್ ಕ್ಲಾಸ್‌ಗಳ ಸೌಲಭ್ಯ ದೊರೆತಿಲ್ಲ. ಹೊಸ ತಂತ್ರಜ್ಞಾನದ ಗ್ರಂಥಾಲಯ ಸೌಲಭ್ಯ ಇಲ್ಲ. ವಿಜ್ಞಾನ ಪ್ರಯೋಗಾಲಯ ಸೌಲಭ್ಯವೂ ಇಲ್ಲ. ಇಲ್ಲಿನ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೇ ಮುಖ್ಯವಾಗಿಲ್ಲ. ಮಕ್ಕಳ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿರುವ ಶೌಚಾಲಯ ಕೂಡ ಶಿಥಿಲಾವಸ್ಥೆಯಲ್ಲಿದೆ. ಇಂತಹ ಅನೇಕ ಮೂಲಸೌಲಭ್ಯಗಳ ಕೊರತೆಗಳನ್ನು ನಮ್ಮ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ನಿವಾರಿಸಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಯತ್ನಿಸಿದಾಗ ಗ್ರಾಮೀಣ ಮಕ್ಕಳು ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ.
ಕೋಟ್
- ಜಗನ್ನಾಥ ಭಾಮನೆ, ಕನ್ನಡಪರ ಹೋರಾಟಗಾರ
ಕೋಟ್
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಜಿಲ್ಲೆಯಲ್ಲಿಯೇ ಕಟಗೇರಿ ಸರ್ಕಾರಿ ಪ್ರೌಢ ಶಾಲೆಯ ಪ್ರಾರ್ಥನಾ ನಾಗಪ್ಪ ಬಿರಾದಾರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ನಮ್ಮ ಹೆಮ್ಮೆ. ಸರ್ಕಾರಿ ಶಾಲೆಗಳಲ್ಲೂ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ರಾಜ್ಯ ಸರ್ಕಾರದ ಇರುವ ಸೌಲಭ್ಯದಲ್ಲಿಯೇ ಇಂತಹ ಸಾಧನೆ ಮಾಡಿರುವುದು ಅನೇಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರೇರಣೆಯಾಗಿದೆ. ಈ ಶಾಲೆಯಲ್ಲಿ ಕೊರತೆ ಇರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.- ಎಂ.ಆರ್.ಮುಂಜೆ, ಕ್ಷೇತ್ರ ಶಿಕ್ಷಣಾಧಿಕಾರಿ
------ಕೋಟ್
ಸರಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ಸಿಗುತ್ತದೆ ಎಂಬುದನ್ನು ನಮ್ಮ ಶಾಲೆಯ ಬಾಲಕಿ ಪ್ರಾರ್ಥನಾ ಸಾಬೀತು ಮಾಡಿದ್ದಾಳೆ. ಶಾಲೆಗಳಿಗೆ ಅಗತ್ಯ ಕಟ್ಟಡ, ಪ್ರಯೋಗಾಲಯ, ಡಿಜಿಟಲ್ ಶಿಕ್ಷಣ ಸೌಲಭ್ಯ, ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಿದರೆ ಗ್ರಾಮೀಣ ವಿದ್ಯಾರ್ಥಿಗಳೂ ರಾಜ್ಯಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗಲಿದೆ. ಪ್ರಾರ್ಥನಾ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ.- ಗೌಡಪ್ಪ ಖೋತ, ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢ ಶಾಲೆ.ಕಟಗೇರಿ.--------------