ಕನ್ನಡಪ್ರಭ ವಾರ್ತೆ ಬೆಳಗಾವಿ ಚಿತ್ರಕಲೆ ಮಾನವನ ಮನಸ್ಸಿಗೆ ಶಾಂತಿ ನೀಡುವ, ಭಾವನೆಗಳಿಗೆ ಆಕಾರ ನೀಡುವ ಹಾಗೂ ಸಮಾಜದ ಒಳನೋಟಗಳನ್ನು ವ್ಯಕ್ತಪಡಿಸುವ ಶಕ್ತಿಯುತ ಕಲೆಯಾಗಿದ್ದು, ಸಮಾಜಕ್ಕೆ ಚಿತ್ರಕಲಾವಿದರ ಕೊಡುಗೆ ಅಪಾರವಾಗಿದೆ ಎಂದು ಕೆ.ಎಚ್.ಇ.ಆರ್. ಹಾಗೂ ಕೆ.ಎಲ್.ಇ. ಬಾಹ್ಯ ಆಸ್ಪತ್ರೆಯ ವೈದ್ಯಕೀಯ ಸಲಹಾಗಾರ ಡಾ.ಮಲ್ಲಿಕಾರ್ಜುನ ಜಾಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಚಿತ್ರಕಲೆ ಮಾನವನ ಮನಸ್ಸಿಗೆ ಶಾಂತಿ ನೀಡುವ, ಭಾವನೆಗಳಿಗೆ ಆಕಾರ ನೀಡುವ ಹಾಗೂ ಸಮಾಜದ ಒಳನೋಟಗಳನ್ನು ವ್ಯಕ್ತಪಡಿಸುವ ಶಕ್ತಿಯುತ ಕಲೆಯಾಗಿದ್ದು, ಸಮಾಜಕ್ಕೆ ಚಿತ್ರಕಲಾವಿದರ ಕೊಡುಗೆ ಅಪಾರವಾಗಿದೆ ಎಂದು ಕೆ.ಎಚ್.ಇ.ಆರ್. ಹಾಗೂ ಕೆ.ಎಲ್.ಇ. ಬಾಹ್ಯ ಆಸ್ಪತ್ರೆಯ ವೈದ್ಯಕೀಯ ಸಲಹಾಗಾರ ಡಾ.ಮಲ್ಲಿಕಾರ್ಜುನ ಜಾಲಿ ಹೇಳಿದರು.ನಗರದ ತಿಲಕವಾಡಿಯ ವರೇರಕರ ನಾಟ್ಯ ಸಂಘ ಸಭಾಂಗಣದಲ್ಲಿ ವರ್ಣಕಲಾ ಸಾಂಸ್ಕೃತಿಕ ಸಂಘ ಹಾಗೂ ಶ್ರೀಮಾತಾ ಗ್ಲಾಸ್ ಆರ್ಟ್ ಗ್ಯಾಲರಿ ವತಿಯಿಂದ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವಿಶ್ವಕಲಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಪ್ರಾತ್ಯಕ್ಷಿಕೆಗಳು, ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರಕಲೆ ಕೇವಲ ಕಲಾತ್ಮಕ ಅಭಿವ್ಯಕ್ತಿಯ ಸಾಧನವಾಗಿರದೆ, ಮಾನಸಿಕ ಆರೋಗ್ಯದ ಮೇಲೆಯೂ ಮಹತ್ವದ ಪ್ರಭಾವ ಬೀರುತ್ತದೆ. ಚಿತ್ರಕಲೆಯ ಮೂಲಕ ವ್ಯಕ್ತಿಯ ಮನೋಧೈರ್ಯವನ್ನು ಹೆಚ್ಚಿಸಬಹುದು. ಕೆಲವೊಮ್ಮೆ ರೋಗಿಗಳಿಗೆ ಮಾನಸಿಕ ಶಾಂತಿ ನೀಡಿ ಅವರ ಆರೋಗ್ಯ ಸುಧಾರಣೆಗೆ ಸಹಾಯ ಮಾಡುವ ಸಾಮರ್ಥ್ಯವೂ ಈ ಕಲೆಗೆ ಇದೆ ಎಂದು ಅವರು ವಿವರಿಸಿದರು. ಕಲಾವಿದನಿಗೆ ಭಾಷೆಯ ಅಡೆತಡೆಗಳಿಲ್ಲ; ತನ್ನ ಹೃದಯದ ಭಾವನೆಗಳನ್ನು ಚಿತ್ರಗಳ ಮೂಲಕ ವಿಶ್ವಕ್ಕೆ ತಲುಪಿಸುವ ಸಾಮರ್ಥ್ಯ ಚಿತ್ರಕಲೆಯಲ್ಲಿ ಅಡಕವಾಗಿದೆ ಎಂದು ಬಣ್ಣಿಸಿದರು.ಅತಿಥಿಯಾಗಿದ್ದ ಲೇಖಕ ಗುಂಡೇನಟ್ಟಿ ಮಧುಕರ ಮಾತನಾಡಿ, ಸಾಹಿತ್ಯ, ಸಂಗೀತ ಮತ್ತು ಚಿತ್ರಕಲೆ ಎಂದಿಗೂ ಅಳಿಯದ ಕಲಾರೂಪಗಳಾಗಿವೆ. ಕಾಲಬದ್ಧವಾಗಿ ಅವು ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದ್ದು, ಸಮಾಜದೊಂದಿಗೆ ಬೆರೆತು ಬೆಳೆಯುತ್ತವೆ. ಹೊಸ ಪ್ರತಿಭೆಗಳು ನಿರಂತರವಾಗಿ ಮೂಡಿ ಬರುತ್ತಿರುವುದು ಕಲಾ ಕ್ಷೇತ್ರದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ಣಕಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ನಾಗೇಶ ಚಿಮರೋಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲಾವಿದ ದಿಲೀಪಕುಮಾರ ಕಾಳೆ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಲಾವಿದರಾದ ದರ್ಶನ ಚೌದರಿ ಹಾಗೂ ದಾದಾ ಚಿತ್ರದುರ್ಗ ಚಿತ್ರಕಲೆಯ ವೈವಿಧ್ಯತೆ ಮತ್ತು ಅದರ ಸಾಮಾಜಿಕ ಪ್ರಭಾವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವಿವಿಧ ಕಲಾವಿದರು ತಮ್ಮ ಚಿತ್ರಕಲಾ ಕೃತಿಗಳನ್ನು ಪ್ರದರ್ಶಿಸಿದ್ದು, ಪ್ರೇಕ್ಷಕರ ಗಮನ ಸೆಳೆಯಿತು. ಚಿತ್ರಕಲಾ ಪ್ರಾತ್ಯಕ್ಷಿಕೆಗಳ ಮೂಲಕ ಕಲಾವಿದರು ತಮ್ಮ ಕೌಶಲ್ಯವನ್ನು ನೇರವಾಗಿ ಪ್ರದರ್ಶಿಸಿದರು. ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಯುವ ಕಲಾವಿದರು ಹಿರಿಯ ಕಲಾವಿದರಿಂದ ಮಾರ್ಗದರ್ಶನ ಪಡೆದು ತಮ್ಮ ಪ್ರತಿಭೆಯನ್ನು ವಿಸ್ತರಿಸಿಕೊಳ್ಳುವ ಅವಕಾಶ ಪಡೆದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಸಂಗೀತ ಹಾಗೂ ನೃತ್ಯ ಪ್ರದರ್ಶನಗಳು ನಡೆದಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದುಕೊಟ್ಟಿತು. ವಿದ್ಯಾರ್ಥಿಗಳು ಹಾಗೂ ಯುವ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ನಮನ ಸೆಳೆದರು. ಭಾಸ್ಕರ ಪಾಟೀಲ, ದೀಪಾ ವಾಲಿ, ರವಿ ಓಂಕಾರ, ದೇಮಣ್ಣಾ, ಭರಮಣ್ಣ ವೇತಾಳ, ವಾಣಿ ಹಿರೇಮಠ, ವಾಣಿ ನಡಗಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.