ಸಂಡೂರು: ಕನ್ನಡ ಲಿಪಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಲಿಪಿಯು ಕೇವಲ ಬರವಣಿಗೆಯ ಸಾಧನವಷ್ಟೇ ಅಲ್ಲ. ಅದು ನಾಡಿನ ಸಂಸ್ಕೃತಿ, ಪರಂಪರೆ, ಧಾರ್ಮಿಕತೆ ಹಾಗೂ ಆಡಳಿತವನ್ನು ಪೂರೈಸಿದ ಜೀವಂತ ಸಾಕ್ಷ್ಯವಾಗಿದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸಿದ್ದಲಿಂಗಮ್ಮ ಬಿ.ಜಿ. ಹೇಳಿದರು.
ಕನ್ನಡವು ಬ್ರಾಹ್ಮಿ ಲಿಪಿಯಿಂದ ವಿಕಾಸಗೊಂಡರೂ, ಕಾಲಕ್ರಮೇಣ ತನ್ನದೇ ಆದ ಸ್ವತಂತ್ರ ಶೈಲಿ, ಅಕ್ಷರರೂಪ ಹಾಗೂ ವ್ಯಾಕರಣದ ಗುಣಲಕ್ಷಣ ಅಳವಡಿಸಿಕೊಂಡು, ಒಂದು ವಿಶಿಷ್ಟ ಲಿಪಿಯಾಗಿ ರೂಪಗೊಂಡಿದೆ. ಮೌರ್ಯರ ಕಾಲದಿಂದಲೇ ಕನ್ನಡ ಭಾಷೆಯ ಅಸ್ತಿತ್ವ ಕಂಡು ಬರುತ್ತದೆ. ಆದರೆ, ಲಿಪಿಯ ರೂಪದಲ್ಲಿನ ಪ್ರಥಮ ದಾಖಲೆಗಳು ಐದನೇ ಶತಮಾನದಿಂದಲೇ ಲಭ್ಯವಿವೆ. ಕದಂಬರು, ಗಂಗರು, ಚಾಲುಕ್ಯರು ಮೊದಲಾದ ರಾಜ್ಯವ್ಯವಸ್ಥೆಗಳು ಕನ್ನಡ ಲಿಪಿಯನ್ನು ಆಡಳಿತ ಭಾಷೆಯನ್ನಾಗಿ ಬಳಸಿದ್ದು, ಅದರಿಂದ ಲಿಪಿಯ ಬಳಕೆ ಮತ್ತಷ್ಟು ವ್ಯವಸ್ಥಿತವಾಗಿ ವೃದ್ಧಿಯಾಯಿತು ಎಂದರು.
ಕೇಂದ್ರದ ಖನಿಜ ಸಂಸ್ಕರಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಶಶಿಧರ ಮಾತನಾಡಿ, ಕುಮುದೇಂದು ಮುನಿಯ ಸಿರಿಭೂವಲಯ ಕೃತಿಯಲ್ಲಿ ಅಕ್ಷರಗಳನ್ನು ಅಂಕಿಗಳ ರೂಪದಲ್ಲಿ ಬರೆಯುವ ಕೋಡಿಂಗ್-ಡೀಕೋಡಿಂಗ್ ಪದ್ಧತಿ ಬಳಸಲಾಗಿದೆ. ಇದು ಕನ್ನಡ ಭಾಷೆಯ ಹೆಗ್ಗಳಿಕೆ. ಭಾಷೆಯ ಇತಿಹಾಸವೆಂದರೆ ಜನರ ಜಾನಪದವೂ, ಸಂಸ್ಕೃತಿಯ ಸಾರವೂ ಆಗಿದೆ ಎಂದರು.ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಯೋಜಕ ಡಾ. ನಾಯಕರ ಹೊನ್ನೂರ್‌ಸ್ವಾಮಿ ತಮ್ಮ ಮಾತುಗಳಲ್ಲಿ ಲಿಪಿಯ ಚರಿತ್ರೆಯನ್ನು ಹೊಸ ದೃಷ್ಟಿಕೋನದಲ್ಲಿ ಪರಿಶೀಲಿಸುವ ಅಗತ್ಯತೆ ಉಲ್ಲೇಖಿಸಿದರು.
ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ರವಿ ಬಿ. ಅಧ್ಯಕ್ಷತೆ ವಹಿಸಿದ್ದರು. ಡಾ. ಸಿದ್ದಲಿಂಗಮ್ಮ ಬಿಜಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ. ನರಸಿಂಹಮೂರ್ತಿ ಟಿ.ಎನ್., ಡಾ. ವಿರೂಪಾಕ್ಷಪ್ಪ ಎಂ., ರಮೇಶ ರಾಯಚೂರ್ ಹಾಗೂ ಕೇಂದ್ರದ ಕ್ರೀಡಾ ನಿರ್ದೇಶಕ ಶಿವರಾಮ ರಾಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.