ಹುಬ್ಬಳ್ಳಿ: ಪ್ರತಿಯೊಬ್ಬರಲ್ಲಿರುವ ಆತ್ಮಚೈತನ್ಯವು ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿದೆ ಎಂದು ಇಲ್ಲಿಯ ಅಭಿನವ ಸಿದ್ಧಾರೂಢ ಶ್ರೀಗಳು ಹೇಳಿದರು.
ಈ ಆತ್ಮಚೈತನ್ಯವೇ ಆ ಪರಬ್ರಹ್ಮ, ಅಂದರೆ ಅದೇ ಸತ್ಯ ಅದನ್ನು ಕಾಣುವ ಗುರಿಯನ್ನು ಎಲ್ಲರೂ ಹೊಂದಬೇಕು. ಆಗ ಬದುಕು ಆನಂದಮಯವಾಗುವುದು. ಕಣ್ಣಿಗೆ ಕಾಣುವುದೆಲ್ಲ ಸತ್ಯವಲ್ಲ. ಅದೆಲ್ಲವೂ ಹುಸಿ. ಈ ಮಿಥ್ಯೆಯನ್ನು ಅರಿತು ಆತ್ಮಚೈತನ್ಯವೇ ಸತ್ಯ ಎಂದು ವೇದಾಂತ ಹೇಳುವುದು. ಸಾಮಾನ್ಯ ದೃಷ್ಟಿಗೆ ಅದು ಕಾಣುವುದಿಲ್ಲ. ಅದನ್ನು ಕಾಣಲು ಗುರು ಕೃಪೆ, ದೈವ ಕೃಪೆ ಬೇಕು. ಅದಕ್ಕಾಗಿ ಸಿದ್ಧಾರೂಢರಂತ ಮಹಾತ್ಮರ ಮಾರ್ಗದರ್ಶನವು ಅಗತ್ಯ ಎಂದರು.
ಕನಕಗಿರಿಯ ಚನ್ನಮಲ್ಲ ಸ್ವಾಮೀಜಿ ಆಶೀರ್ವಚನ ನೀಡಿ, ಯಾವುದನ್ನು ಅರಿತರೆ ಎಲ್ಲವನ್ನೂ ಅರಿತಂತಾಗುವುದು ಎಂಬ ವೇದವಾಕ್ಯದಂತೆ ಬ್ರಹ್ಮಸತ್ಯದ ತಿಳಿವಳಿಕೆ ಬಂದರೆ ಮತ್ತೇನೂ ತಿಳಿಯುವುದು ಉಳಿಯುವುದಿಲ್ಲ. ಸಿದ್ದಾರೂಢ ಮಠ ಎಂದರೆ ಅದು ವೇದಾಂತ ಮಠ, ಇಲ್ಲಿ ರಾದ್ಧಾಂತ ಇಲ್ಲ. ವೇದಾಂತವಿದೆ. ಮಕ್ಕಳಿಗೂ ಸಿದ್ಧಾರೂಢರ ಪರಿಚಯ ಆಗಬೇಕು. ಆ ದಿಶೆಯಲ್ಲಿ ಪಠ್ಯದಲ್ಲಿ ಅವರ ಚರಿತ್ರೆ ಸೇರಬೇಕಾದ ಅಗತ್ಯವಿದೆ ಎಂದರು.ಹೈದರಾಬಾದಿನ ಆಚಾರ್ಯ ಪರಿಶುದ್ಧಾನಂದಗಿರಿ ಮಹಾರಾಜರು, ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಉಪ್ಪಾರಟ್ಟಿಯ ನಾಗಾನಂದ ಸ್ವಾಮೀಜಿ, ಹಂಪಿ ಹೇಮಕೂಟದ ವಿದ್ಯಾನಂದಭಾರತಿ ಸ್ವಾಮೀಜಿ, ಬೆಂಗಳೂರು ಸಿದ್ಧಾರೂಢ ಮಿಷನ್‌ನ ಆರೂಢ ಭಾರತಿ ಶ್ರೀಗಳು ಪ್ರವಚನ ನೀಡಿದರು. ಇಂಚಲ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ, ಬೇರೆ ರಾಜ್ಯಗಳಲ್ಲಿ ಸಿದ್ಧಾರೂಢ ಸ್ವಾಮೀಜಿಯವರ ಮಠಗಳಿವೆ. ಲಕ್ಷಾಂತರ ಜನ ಭಕ್ತರಿದ್ದಾರೆ. ಎಲ್ಲೆಡೆ ಸಿದ್ಧಾರೂಢರ ಮಾರ್ಗದರ್ಶನವಿದೆ. ಇದು ಇನ್ನೂ ವ್ಯಾಪಕವಾಗಿ ತಲುಪುವಂತಾಗಲಿ. ಆ ದಿಶೆಯಲ್ಲಿ ವಿಶ್ವ ವೇದಾಂತ ಪರಿಷತ್ ಒಂದು ದೊಡ್ಡ ಪ್ರಯತ್ನ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಶೆಟ್ಟರ್ ದಂಪತಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ, ಉದ್ಯಮಿ ಡಾ. ಸಿಎಸ್‌ವಿ ಪ್ರಸಾದ, ಮುಖಂಡರಾದ ದಶರಥ ವಾಲಿ, ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಜಾತ್ಯತೀತ ಮಠವನ್ನು ಕಟ್ಟಿ ಯಾವ ಬೇಧವಿಲ್ಲದೇ ನಾಡಿನ ಸರ್ವ ಸದ್ಭಕ್ತರನ್ನು ಆಶೀರ್ವದಿಸಿರುವ ಸಿದ್ಧಾರೂಢ ಸ್ವಾಮೀಜಿ ಪರತಂತ್ರದಲ್ಲಿದ್ದ ಅವರ ಬಿಡುಗಡೆಗಾಗಿ ಸ್ವಾತಂತ್ರ್ಯ ಹೋರಾಟಕ್ಕೂ ಪ್ರೇರಣೆ ನೀಡಿದ ಮಹಾನುಭಾವರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಆರಂಭಿಸಿದ್ದ ಲೋಕಮಾನ್ಯ ಬಾಲ ಗಂಗಾಧರ ಟಿಳಕರು ಚಳವಳಿ ಕುರಿತು ಇದ್ದ ಅನುಮಾನಗಳ ಪರಿಹಾರಕ್ಕೆ ಸಲಹೆ ಕೇಳಲು ಹುಬ್ಬಳ್ಳಿಗೆ ಆಗಮಿಸಿ ಸಿದ್ಧಾರೂಢರನ್ನು ಭೇಟಿಯಾಗಿದ್ದರು. ಗುರುಗಳ ವಾಣಿಯಿಂದ ಸ್ಪೂರ್ತಿ ಪಡೆದು ಪುಣೆಗೆ ಮರಳಿ ಉತ್ಸಾಹದಿಂದ ಮತ್ತೆ ಚಳವಳಿಯನ್ನು ಆರಂಭಿಸಿದರು ಎಂದರು.