ಅಣ್ಣಿಗೇರಿ ಗುರುಗಳ ಸೇವೆ ಅನುಪಮವಾದದ್ದು

KannadaprabhaNewsNetwork | Published : Sep 7, 2024 1:32 AM

ಸಾರಾಂಶ

ಸನ್ಯಾಸಿ,ಸಂತನಾಗಿ, ಗಾಂಧಿವಾದಿಯಾಗಿ ಅತ್ಯಂತ ಸರಳ ಸಜ್ಜನಿಕೆಯ ಜೀವನ ನಡೆಸಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು

ಗದಗ: ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಶಿಕ್ಷಣ ಪ್ರೇಮಿ,ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅನುಪಮವಾದದ್ದು ಎಂದು ಜ.ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ಅವರು ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಶಿಕ್ಷಣ ಪ್ರೇಮಿ,ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ನಡೆದ ಬಿ.ಜಿ. ಅಣ್ಣಿಗೇರಿ ಗುರುಗಳ 5ನೇ ಪುಣ್ಯಸ್ಮರಣೆ ಸಮಾರಂಭ ಹಾಗೂ ವಾರ್ಷಿಕ ಸರ್ವಸಾಧಾರಣ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸುತ್ತಿದ್ದ ಅಣ್ಣಿಗೇರಿ ಅವರು, ಆಧುನಿಕ ದಿನಗಳಲ್ಲಿಯೂ ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಕೈತುಂಬ ಸಂಬಳ ಐಷಾರಾಮಿ ಜೀವನ ನಡೆಸಬಹುದಿತ್ತು ಆದರೆ ಸನ್ಯಾಸಿ,ಸಂತನಾಗಿ, ಗಾಂಧಿವಾದಿಯಾಗಿ ಅತ್ಯಂತ ಸರಳ ಸಜ್ಜನಿಕೆಯ ಜೀವನ ನಡೆಸಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು ಎಂದರು.

ಲೋಕಾಯುಕ್ತ ಡಿಎಸ್ಪಿ ವಿಜಯ ಬಿರಾದಾರ ಮಾತನಾಡಿ, ಇಂದು ಶಿಕ್ಷಣ ಮಟ್ಟ ಕುಸಿಯುತ್ತಿದೆ, ಇದಕ್ಕೆ ಕಾರಣ ವಿದ್ಯಾರ್ಥಿ, ಪಾಲಕರು, ಶಿಕ್ಷಕರು ಎಲ್ಲರೂ ಜವಾಬ್ದಾರರಾಗಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರು ತಿದ್ದಿ ತೀಡಿ ಕೊಂಚ ಕಠಿಣ ಕ್ರಮ ಕೈಗೊಂಡರೆ ಪಾಲಕರು ಪ್ರಶ್ನಿಸಿ ಜಗಳಕ್ಕಿಳಿಯುವದು ಸಲ್ಲದು. ವಿದ್ಯಾರ್ಥಿಗಳನ್ನು ಸನ್ಮಾರ್ಗದ ದಾರಿಯಲ್ಲಿ ಮುನ್ನಡೆಸಲು ಶಿಕ್ಷಿಸದಿದ್ದರೆ ಅಂತಹ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಪೊಲೀಸರು ಶಿಕ್ಷಿಸಬೇಕಾದೀತು ಎಂದರು.

ಡಾ. ಎಸ್.ಬಿ. ಶೆಟ್ಟರ ಮಾತನಾಡಿ, ತ್ಯಾಗಜೀವಿ ಎಂಬ ಪದ ಬಳಕೆಯಾಗಿದ್ದು ಶಿರಸಂಗಿ ಲಿಂಗರಾಜ ನಂತರ ಅದು ಬಿ.ಜಿ. ಅಣ್ಣಿಗೇರಿ ಅವರಿಗೆ ಸಲ್ಲುವಂತದ್ದು, ಅಷ್ಟೇ ಅಲ್ಲಿ ಶೋಭಿಸುವಂತದ್ದು. ಅವರು ಬದುಕಿರುವಾಗಲೇ ದಂತಕಥೆ ಆದವರು. ಒಬ್ಬ ಶಿಕ್ಷಕನ ಹೆಸರಿನಲ್ಲಿ ಆಶ್ರಮ, ಪ್ರತಿಷ್ಠಾನ, ಉದ್ಯಾನವನ, ಗದ್ದುಗೆ, ಸ್ಮಾರಕ, ಮೂರ್ತಿ ನಿರ್ಮಾಣಗೊಳ್ಳುತ್ತವೆ ಎನ್ನುವುದಾರೆ ಆ ಶಿಕ್ಷಕ ಸಮಾಜದ ಮೇಲೆ, ವಿದ್ಯಾರ್ಥಿಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿರಬೇಕು ಎಂಬುದನ್ನು ತಿಳಿಯಬಹುದು. ನಗರಸಭೆ ಇಡೀ ವಕಾರಗಳ ಸಾಲುಗಳನ್ನೇ ನಿರ್ಧಾಕ್ಷೀಣ್ಯವಾಗಿ ಬುಲ್ಡೋಜರ್ ಹಚ್ಚಿ ತೆರವುಗೊಳಿಸಿದರೆ ಆ ಸಾಲುಗಳಲ್ಲಿದ್ದ ಅಣ್ಣಿಗೇರಿ ಅವರ ಆಶ್ರಮ ಇಂದಿಗೂ ತಲೆಎತ್ತಿ ಹಾಗೇ ನಿಂತಿರುವದು ಅಣ್ಣಿಗೇರಿ ಅವರ ವ್ಯಕ್ತಿತ್ವಕ್ಕೆ, ಸಾಧನೆಗೆ ಹಿಡಿದ ಕೈಗನ್ನಡಿ ಎಂದರು.

ಈ ವೇಳೆ ನಿವೃತ್ತ ಹಿರಿಯ ಶಿಕ್ಷಕ ಎಂ.ಡಿ. ಕಮತರ ಅವರಿಗೆ ಪ್ರತಿಷ್ಠಾನದಿಂದ ಗುರುಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಾರ್ಷಿಕ ವರದಿಯನ್ನು ಶಿವಾನಂದ ಕಟ್ಟಿ ವಾಚಿಸಿದರು ಎಸ್.ಆರ್. ಪಾಟೀಲ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.

ಎಸ್.ಜಿ. ಅಣ್ಣಿಗೇರಿ, ಪ್ರಸನ್ನಕುಮಾರ ಗುತ್ತಿ, ಸಂತೋಷ ಹಾದಿ, ಜ್ಯೋತಿ ವಡಗೇರಿ, ಮಂಜುಳಾ ತುಮ್ಮರಮಟ್ಟಿ, ಹುಲಿಗೆಮ್ಮ ಹಂಚಿನಾಳ, ರೇಣುಕಮ್ಮ, ಮೋಹನ ಆಚಾರ್ಯ, ನಾಗರಾಜ, ಯಲ್ಲಪ್ಪ ಕಲ್ಯಾಣಿ, ಆರ್.ವಿ. ಅಂಗಡಿ, ಶಿವಾನಂದ ಭಜಂತ್ರಿ, ಬಸಲಿಂಗಮ್ಮ, ಈರಬಸಮ್ಮ ಅವರನ್ನು ಗೌರವಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ, ಎಸ್.ಆರ್. ಪಾಟೀಲ, ಶಿವಾನಂದ ದಂಡಿನ, ವಿರುಪಾಕ್ಷಪ್ಪ ಮ್ಯಾಗೇರಿ, ರವಿ ದಂಡಿನ, ಚನ್ನಪ್ಪ ಮಲ್ಲಾಡದ, ತೋಂಟೇಶ ವೀರಲಿಂಗಯ್ಯನಮಠ, ವಿರುಪಾಕ್ಷಪ್ಪ ಶಾಂತಗೇರಿ, ಬಸವರಾಜ ಚೆನ್ನಪ್ಪಗೌಡ್ರ, ಬಸಯ್ಯ ಬೆಳ್ಳೇರಿಮಠ, ಸಿದ್ಧಣ್ಣ ಕವಲೂರ, ಗುರುಸಿದ್ಧಪ್ಪ ಪಿರಂಗಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಬಸವರಾಜ ಬಿಂಗಿ ಸ್ವಾಗತಿಸಿದರು. ಶ್ರೀಶೈಲ ಚಿಕ್ಕಮಠ ಅವರಿಂದ ಸಂಗೀತ ಜರುಗಿತು. ಕಳಕಪ್ಪ ಕುರ್ತಕೋಟಿ ವಂದಿಸಿದರು.

Share this article