ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ

KannadaprabhaNewsNetwork | Published : May 16, 2024 12:52 AM

ಸಾರಾಂಶ

ಹೊನ್ನಾಳಿ ಪಟ್ಟಣಗಳ ಸ್ವಚ್ಛತೆ, ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ ಎಂದು ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಹೇಳಿದ್ದಾರೆ.

- ಎಸಿ ವಿ.ಅಭಿಷೇಕ್‌ ಶ್ಲಾಘನೆ । ಹೊನ್ನಾಳಿ ಪುರಸಭೆಯಲ್ಲಿ ಕಾರ್ಮಿಕ ದಿನಾಚರಣೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣಗಳ ಸ್ವಚ್ಛತೆ, ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ ಎಂದು ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಹೇಳಿದರು.

ಬುಧವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ, ಕಾರ್ಮಿಕ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ವತಿಯಿಂದ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿನಿತ್ಯ ನಗರ ಸ್ವಚ್ಛತೆಯಂಥ ಕೆಲಸಗಳನ್ನು ಮಾಡುವ ಪೌರಕಾರ್ಮಿಕರಿಗಾಗಿ ಸರ್ಕಾರ ಹತ್ತುಹಲವು ಸೌಲಭ್ಯಗಳ ಯೋಜನೆಗಳನ್ನು ರೂಪಿಸಿದೆ. ಆದರೆ, ಇವುಗಳ ಬಗ್ಗೆ ಮಾಹಿತಿ ಕೊರತೆಯಿಂದ ಸೌಲಭ್ಯಗಳಿಂದ ವಂಚಿತರಾಗುವ ಸಂದರ್ಭಗಳೂ ಇವೆ. ಈ ಬಗ್ಗೆ ಪೌರ ಕಾರ್ಮಿಕರು ಆದಷ್ಟು ತಮ್ಮ ಮೇಲಾಧಿಕಾರಿಗಳಿಂದ ಅಥವಾ ತಮ್ಮ ಸಂಘಟನೆಗಳ ಮುಖ್ಯಸ್ಥರಿಂದ ಸೂಕ್ತ ಮಾಹಿತಿ ಪಡೆದು ಸವಲತ್ತು ಪಡೆಯಬೇಕು ಎಂದು ಹೇಳಿದರು.

ಪೌರಕಾರ್ಮಿಕರಿಗೆ ಇ.ಎಸ್.ಐ., ಪಿ.ಎಫ್‌. ಸೌಲಭ್ಯಗಳ ಬಗ್ಗೆ ಕೂಡ ಹೆಚ್ಚಿನ ಅರಿವು ಬೇಕು. ಪೌರಕಾರ್ಮಿಕರಿಗೆ ಕೆಲಸ ಮಾಡುವಲ್ಲಿ ಸಂರಕ್ಷಣಾ ಉಪಕರಣಗಳಾದ ಹ್ಯಾಂಡ್ ಗ್ಲೌಸ್, ಬೂಟ್ಸ್‌, ಮಾಸ್ಕ್‌ ಮುಂತಾದ ಪರಿಕರಗಳನ್ನು ಪುರಸಭೆ ಅಧಿಕಾರಿಗಳು ಒದಗಿಸಿಕೊಡಬೇಕು. ಜೊತೆಗೆ ಅವುಗಳನ್ನು ತಪ್ಪದೇ ನೌಕರರು ಕೆಲಸ ಮಾಡುವ ಸಂದರ್ಭ ಉಪಯೋಗಿಸುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಪುರಸಭೆಮಟ್ಟದ ಆರೋಗ್ಯ ನಿರೀಕ್ಷಕರು ಹೆಚ್ಚಿನ ಗಮನಹರಿಸಬೇಕು ಎಂದ ಅವರು, ಪುರಸಭೆ ಪೌರ ಕಾರ್ಮಿಕರಿಗೆ ಇರುವ ಅನೇಕ ಸೌಲಭ್ಯಗಳ ಮಾಹಿತಿಗಳನ್ನು ವಿವರಿಸಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪುಣ್ಯಕೋಟಿ ಎಸ್.ಎನ್. ಕಾರ್ಯಕ್ರಮ ಉದ್ಘಾಟಿಸಿ, ಪುರಸಭೆ ಪೌರ ಕಾರ್ಮಿಕರಲ್ಲಿ ಕಾಯಂ, ಹೊರಗುತ್ತಿಗೆ ಹೀಗೆ ಪಂಗಡಗಳಿವೆ. ಯಾರೇ ಆಗಲಿ, ತಾವು ಸಲ್ಲಿಸುವ ಕೆಲಸಕ್ಕೆ ತಕ್ಕ ವೇತನ ಪಡೆಯುವ ಹಕ್ಕು ಅವರಿಗಿದೆ. ಸಕಾಲದಲ್ಲಿ ಪೌರಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಆಡಳಿತ ವ್ಯವಸ್ಥೆಗಳು ಸಕಾಲದಲ್ಲಿ ನೀಡಬೇಕು ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ಭರತೆ ಭೀಮಯ್ಯ, ತಹಸೀಲ್ದಾರ್ ಪುರಂದರ ಹೆಗಡೆ, ವಕೀಲರ ಸಂಘ ಅಧ್ಯಕ್ಷ ಕೆ.ಪಿ. ಜಯಪ್ಪ, ಉಪಾಧ್ಯಕ್ಷ ಚಂದ್ರಪ್ಪ ಮಡಿವಾಳ, ಕಾರ್ಯದರ್ಶಿ ಬಿ.ಎಂ. ಪುರುಷೋತ್ತಮ, ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಮುಖ್ಯಅತಿಥಿಗಳಾಗಿ ಮಾತನಾಡಿದರು.

ಕಾರ್ಮಿಕ ಇಲಾಖೆ ನಿರೀಕ್ಷಕರಾದ ಮುಮ್ತಾಜ್ ಬೇಗಂ ಮಾತನಾಡಿ, ಕನಿಷ್ಠ ವೇತನ ಕಾಯ್ದೆ ಜಾರಿಯಲ್ಲಿದೆ. ವೇತನ ಕಾಯ್ದೆ ಮುಂತಾದ ಅನೇಕ ಕಾರ್ಮಿಕ ಕಾಯ್ದೆಗಳಿವೆ. ಪುರುಷ, ಮಹಿಳೆ ತಾರತಮ್ಯವಿಲ್ಲದೇ ಸಮಾಜ ಕೆಲಸಕ್ಕೆ ಸಮಾನ ವೇತನ ನೀಡಬೇಕಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ಕಾರ್ಮಿಕರು ಗಮನಕ್ಕೆ ತಂದರೆ ಬಗೆಹರಿಸಲಾಗುವುದು. ಕಾರ್ಮಿಕ ಕಾರ್ಡ್‌ ಪ್ರತಿಯೊಬ್ಬರು ಹೊಂದಿರಬೇಕು ಎಂದು ಹೇಳಿದ ಅವರು, ಕಾರ್ಮಿಕ ಕಾನೂನು ವ್ಯವಸ್ಥೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸಂರಕ್ಷಣಾ ಉಪಕರಣಗಳನ್ನು ವಿತರಿಸಲಾಯಿತು. ಪುರಸಭೆ ಸಭೆ ಕರವಸೂಲಿಗಾರ ರೋಹಿತ್ ಸ್ವಾಗತಿಸಿದರು. ಲೆಕ್ಕಾಧಿಕಾರಿ ಎನ್.ರಂಜಿತ ಕಾರ್ಯಕ್ರಮ ನಿರೂಪಿಸಿದರು. ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಎಚ್. ವಂದಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಎಂಜಿನಿಯರ್ ದೇವರಾಜ್, ಮೋಹನ್, ಪರಮೇಶ್ ನಾಯ್ಕ, ಹರ್ಷವರ್ಧನ್, ಭಾಗ್ಯಮ್ಮ, ಶಿವಣ್ಣ, ಮಹಾಂತೇಶ್, ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.

- - - -15ಎಚ್.ಎಲ್.:

ಕಾರ್ಮಿಕ ದಿನಾಚರಣೆಯಲ್ಲಿ ಪುರಸಭೆ ಆಡಳಿತಾಧಿಕಾರಿ ಹಾಗೂ ಎಸಿ ವಿ.ಅಭಿಷೇಕ್ ಮಾತನಾಡಿದರು. ನ್ಯಾಯಾಧೀಶರಾದ ಪುಣ್ಯಕೋಟಿ ಎಸ್.ಎನ್., ಇನ್ನಿತರ ಗಣ್ಯರು ಹಾಜರಿದ್ದರು.

Share this article