ಸಾಹಿತ್ಯ ಪರಿಚಾರಕ ರೈಲ್ವೆ ರಾಮಚಂದ್ರು ರವರ ಸೇವೆ ಅನುಪಮ

KannadaprabhaNewsNetwork |  
Published : Jul 05, 2026, 01:30 AM IST
4 ಟಿವಿಕೆ 1 – ತುರುವೇಕೆರೆಯ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ ಸಂಸ್ಥಾಪಕ ರೈಲ್ವೆ ರಾಮಚಂದ್ರು ದಂಪತಿಗಳನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ಕಳೆದ 17 ವರ್ಷಗಳಿಂದ ಸಾಹಿತ್ಯ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ ಸಂಸ್ಥಾಪಕರಾದ ರೈಲ್ವೆ ರಾಮಚಂದ್ರು ಅವರ ಸಾಹಿತ್ಯ ಸೇವೆ ಅನುಪಮವಾದುದು ಎಂದು ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿಯವರು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕಳೆದ 17 ವರ್ಷಗಳಿಂದ ಸಾಹಿತ್ಯ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ ಸಂಸ್ಥಾಪಕರಾದ ರೈಲ್ವೆ ರಾಮಚಂದ್ರು ಅವರ ಸಾಹಿತ್ಯ ಸೇವೆ ಅನುಪಮವಾದುದು ಎಂದು ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿಯವರು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಇಲ್ಲಿಯ ಪತಂಜಲಿ ಯೋಗ ಮಂದಿರದಲ್ಲಿ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ ವತಿಯಿಂದ ನಡೆದ ತಿಂಗಳಿಗೊಂದು ಪುಸ್ತಕದ 200ನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಪುಸ್ತಕದಿಂದ ಮಸ್ತಕಕ್ಕೆ, ಮಸ್ತಕದಿಂದ ಹಸ್ತಕ್ಕೆ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. ಸಾಹಿತ್ಯದ ಪ್ರಸಾರ ಮಾಡುವುದು ಅಸಾಧ್ಯದ ಮಾತು. ಈ ರೈಲ್ವೆ ರಾಮಚಂದ್ರು ದಂಪತಿಗಳು ಕಳೆದ 17 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಪ್ರತಿ ತಿಂಗಳೂ ಒಂದೊಂದು ಪುಸ್ತಕದ ಪರಿಚಯ ಮಾಡುತ್ತಿದ್ದಾರೆ. ಈಗಾಗಲೇ ನಮ್ಮನ್ನಗಲಿರುವ ಸಾಹಿತಿಗಳು ರಚಿಸಿರುವ ನೂರಾರು ಪುಸ್ತಕಗಳನ್ನು ಜನ ಸಾಮಾನ್ಯರಿಗೆ ಪರಿಚಯಿಸುತ್ತಿರುವುದು ಒಂದು ಸಾಧನೆಯೇ ಸರಿ. ಜನ ಸಾಮಾನ್ಯರಿಗೆ ಸಿಗದ, ಸಿಕ್ಕರೂ ಕೊಂಡು ಓದುವಷ್ಟು ವ್ಯವಧಾನ ಇರದ ಮಂದಿಗೆ ಕೇವಲ ಒಂದು ಗಂಟೆಯೊಳಗೆ ಇಡೀ ಪುಸ್ತಕದ ವಿಷಯವನ್ನು ತಿಳಿಸುವ ಪ್ರಯತ್ನ ಖುಷಿ ಕೊಡುತ್ತದೆ. ರೈಲ್ವೆ ರಾಮಚಂದ್ರು ರವರ ಸಾಹಿತ್ಯ ಪ್ರಸಾರ ಅವರಿಗಾಗಿ ಮಾತ್ರ ಅಲ್ಲ. ಅದು ಜನರಿಗಾಗಿ ಆಗಿರುವುದು ಬೇರೆಯವರಿಗೆ ಮಾದರಿಯಾಗಿದೆ ಎಂದರು.

ಇತ್ತೀಚೆಗೆ ಕಾಲಹರಣ ಹೆಚ್ಚಾಗಿದೆ. ಮೋಜು ಹುಚ್ಚಾಟವಾಗಿದೆ. ಸೋಮಾರಿತನಕ್ಕೆ ಗೇಟ್ ಪಾಸ್ ನೀಡಿ ಸಾಹಿತ್ಯದ ದೀಕ್ಷೆ ತೆಗೆದುಕೊಳ್ಳಿ. ಪ್ರತಿ ದಿನ ಒಂದು ಗಂಟೆಯಷ್ಟು ಮಾತ್ರ ಸಾಹಿತ್ಯದ ಅವಲೋಕನ ಮಾಡಿದರೆ ನಿಮ್ಮ ಮನಸ್ಥಿತಿ ಉತ್ತಮಗೊಳ್ಳಲಿದೆ. ಯಾವುದೇ ಕೆಲಸವಿಲ್ಲದೇ ಇರುವವರನ್ನು ಜೀವಂತ ಶವಗಳು ಎಂದು ಕರೆಯಬಹುದು. ಜೀವನದಲ್ಲಿ ಸಾಮಾಜಿಕ ಹೊಣೆಗಾರಿಕೆ ಇಲ್ಲದವನು ಜೀವನದಲ್ಲಿ ಅನುತ್ತೀರ್ಣನಾಗುತ್ತಾನೆ. ಜ್ಞಾನ ವಿಜ್ಞಾನ ಸಮ್ಮಿಲನ ಆಗಬೇಕಿದೆ. ಜನರಲ್ಲಿರುವ ಸದ್ಗುಣಗಳನ್ನು ಗೌರವಿಸಬೇಕು. ಕಲಿಕೆಯ ಜ್ಞಾನದಾಹಿಗಳಾಗಬೇಕು. ಜ್ಞಾನದಾಹಿಗಳ ಪ್ರಪಂಚ ಕಟ್ಟಬೇಕು. ನಮ್ಮಲ್ಲಿರುವ ದೌರ್ಬಲ್ಯಗಳು ನಮ್ಮನ್ನು ಉನ್ನತ ಮಟ್ಟಕ್ಕೆ ಏರಲು ಬಿಡುವುದಿಲ್ಲ. ಅತಿಯಾದ ಅವಲಂಬನೆ ಸರಿಯಲ್ಲ. ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು. ಸಾಧನೆಯ ಮೂಲಕ ಬ್ರಾಹ್ಮಣ್ಯನಾಗಬೇಕು. ಸಾಧನೆಗೆ ವಯಸ್ಸು ಮುಖ್ಯವಲ್ಲ. ಜಾತಿ ಎಂಬುದನ್ನು ನಾವಷ್ಠೇ ಮಾಡಿಕೊಂಡಿರುವುದು. ನಮ್ಮ ನಮ್ಮ ಸಾಧನೆಗೆ ಜಾತಿ ಎಂದೂ ಅಡ್ಡಬಾರದು ಎಂದು ಶ್ರೀಗಳು ಹೇಳಿದರು. ಪ್ರಾಸ್ತಾವಿಕ ನುಡಿ ನುಡಿದ ಕೃಷ್ಣಚೈತನ್ಯ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ 200 ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ ಹತ್ತಾರು ಎಡರು ತೊಡರುಗಳ ನಡುವೆಯೂ ಸಾಗಿಬಂದಿದೆ. ಕೊರೋನಾ ವೇಳೆಯೂ ಸಹ ಆನ್ ಲೈನ್ ಮೂಲಕವೂ ಪುಸ್ತಕದ ಪರಿಚಯ ಮಾಡಲಾಗಿದೆ. ಪುಸ್ತಕದ ಅರಿವಿನ ಗುಣವನ್ನು ಪ್ರತಿಬಿಂಬಿಸಲು ಈ ಪುಸ್ತಕ ಪರಿಚಯ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ಈ ವೇಳೆ ಹಲವಾರು ಸಂಘಸಂಸ್ಥೆಗಳ ಪದಾದಿಕಾರಿಗಳು ರೈಲ್ವೆ ರಾಮಚಂದ್ರ ದಂಪತಿಗಳನ್ನು ಗೌರವಿಸಿದರು. ರೈಲ್ವೆ ರಾಮಚಂದ್ರು ಸ್ವಾಗತಿಸಿದರು. ಉಪನ್ಯಾಸಕಿ ರೂಪಶ್ರೀ ನಿರೂಪಿಸಿದರು. ಪತಂಜಲಿ ಯೋಗಮಂದಿರದ ಆನಂದ ರಾಜ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೌರ ಕಾರ್ಮಿಕರ ನಡುವೆ ತಾರತಮ್ಯ ಬೇಡ
ಪೌರಕಾರ್ಮಿಕರ ಸಮಸ್ಯೆ ಪರಿಹರಿಸಲು ಮುತುವರ್ಜಿ ವಹಿಸಿ