ಹಿಂದೂ ಸಂಪ್ರದಾಯದ ಮಠಗಳ ಸೇವೆ ಅಪಾರ: ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

KannadaprabhaNewsNetwork | Published : May 2, 2025 12:14 AM

ಸಾರಾಂಶ

ನಾಡಿನ ಹಿಂದೂ ಸಂಪ್ರದಾಯದ ಹಲವು ಮಠಗಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಶ್ರೀಮಠದ ಗುರುಪರಂಪರೆ ಯಾವ ರೀತಿ ಜನಮಾನಸದಲ್ಲಿ ಬೇರೂರಿದೆ ಎಂಬುದನ್ನು ನಾನು ಗಮನಿಸಿದೆ. ರಾಜ್ಯದ ಹಲವು ಮಠಗಳ ಪರಂಪರೆಯಲ್ಲಿ ಕುಂದೂರು ರಸ ಸಿದ್ದೇಶ್ವರ ಮಠವು ಒಂದಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಹಿಂದೂ ಸಂಪ್ರದಾಯದ ನೆರೆಯ ರಾಜ್ಯಗಳ ಮಠಗಳಿಂದ ಕರ್ನಾಟಕದ ಮಠಗಳ ಸೇವೆ ಅಪಾರವಾಗಿದೆ ಎಂದು ಸುತ್ತೂರು ಕ್ಷೇತ್ರದ ವೀರ ಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.

ತಾಲೂಕಿನ ಇತಿಹಾಸ ಪ್ರಸಿದ್ಧ ಕುಂದೂರು ಬೆಟ್ಟದ ಸುಕ್ಷೇತ್ರ ಶ್ರೀರಸಸಿದ್ದೇಶ್ವರ ಮಠದ ಷಟ್ ಸ್ಥಳ ಬ್ರಹ್ಮೋಪದೇಶ ಪೂರ್ವಕ ಗುರುಪಟ್ಟಾಧಿಕಾರ ಮಹೋತ್ಸವ, ಹರಗುರು ಚರಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ನಡೆದ ಗುರುಪಟ್ಟಾಧಿಕಾರ ಮಹೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಡಿನ ಹಿಂದೂ ಸಂಪ್ರದಾಯದ ಹಲವು ಮಠಗಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಶ್ರೀಮಠದ ಗುರುಪರಂಪರೆ ಯಾವ ರೀತಿ ಜನಮಾನಸದಲ್ಲಿ ಬೇರೂರಿದೆ ಎಂಬುದನ್ನು ನಾನು ಗಮನಿಸಿದೆ. ರಾಜ್ಯದ ಹಲವು ಮಠಗಳ ಪರಂಪರೆಯಲ್ಲಿ ಕುಂದೂರು ರಸ ಸಿದ್ದೇಶ್ವರ ಮಠವು ಒಂದಾಗಿದೆ ಎಂದರು.

ಬೆಟ್ಟದ ತಪ್ಪಲಿನ ಸುಂದರ ಪರಿಸರದಲ್ಲಿರುವ ಶ್ರೀಮಠ ಕಾಯಕದಲ್ಲಿ ತೊಡಗಿದೆ. ಈ ಮಠದ ಏಳಿಗೆಗೆ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಬೆಂಬಲ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನಾನು ನಂಜುಂಡಸ್ವಾಮಿಗಳ ಮಾತುಗಳಲ್ಲಿ ಗಮನಿಸಿದೆ. ಶ್ರೀಕ್ಷೇತ್ರ ಮಹಾ ತಪಸ್ವಿಗಳು ಮತ್ತು ಪವಾಡ ಪುರುಷರ ನೆಲೆಯಾಗಿದೆ ಎಂದರು.

ಮಹದ್ವಾರ ಲೋಕಾರ್ಪಣೆಗೊಳಿಸಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಬಸವ ತತ್ವವನ್ನು ಈ ನಾಡಿನಲ್ಲಿ ಪಸರಿಸುತ್ತಿರುವ ಮಠಾಧೀಶರ ಸೇವೆ ಅನನ್ಯವಾದದ್ದು. ನಾನು ಸಹ ಬಸವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು ಶಾಸಕನಾಗಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.

ಕುಂದೂರು ಮಠದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನನ್ನ ಆರಾಧ್ಯ ದೈವ ಶಿವಕುಮಾರಸ್ವಾಮಿಗಳ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ. ಎಲ್ಲಾ ಹರಗುರು ಚರಮೂರ್ತಿಗಳ ಆಶೀರ್ವಾದದೊಂದಿಗೆ ನಾನು ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಂದೂರು ಶ್ರೀರಸಸಿದ್ದೇಶ್ವರ ಮಠದ ಶ್ರೀನಂಜುಂಡಸ್ವಾಮಿಗಳು ಮಠದ ಪರಂಪರೆ, ಬೆಳೆದು ಬಂದ ಹಾದಿ ಹಾಗೂ ಶ್ರೀಮಠದ ಗುರು ಪರಂಪರೆಯ ಪವಾಡಗಳು, ಅಂದಿನ ಕಾಲಘಟ್ಟದ ಪರಿಸ್ಥಿಯ ಬಗ್ಗೆ ವಿವರಿಸಿದರು.

ಮಾಜಿ ಉಪಸಭಾಪತಿ ಮರಿತಿಬ್ಬೆಗೌಡ ಮಾತನಾಡಿ, ಸಮಾಜದ ಪ್ರಗತಿಯಲ್ಲಿ ಮಠ ಮಾನ್ಯಗಳ ಕೂಡುಗೆ ಅಪಾರವಾಗಿದೆ. ಗುರು ಪರಂಪರೆ ಹಾದಿಯಲ್ಲಿ ಮಾನವ ಸಮುದಾಯ ಸಾಗಿದರೆ ಸಮಾಜದ ಪ್ರಗತಿ ಸಾಧ್ಯ ಎಂದರು.

ಕಾರ್ಯಕ್ರಮಕ್ಕೆ ಅಗಮಿಸಿದ್ದ ಸಾವಿರಾರು ಜನರಿಗೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀಮಠದ ಸಮಿತಿ ವ್ಯವಸ್ಥಿತವಾಗಿ ಬಿಸಿಲಿನಲ್ಲಿ ಅಗಮಿಸಿದ ಜನರಿಗೆ ಕುಡಿಯಲು ಶುದ್ಧ ನೀರಿನ ಬಾಟಲ್ ವಿತರಣೆ, ಒಂದು ಕಡೆ ಬಾಳೆ ಹಣ್ಣು ವಿತರಣೆ, ಕುಳಿತು ಪ್ರಸಾದ ಸೇವೆನೆಗೆ ಪ್ರತ್ಯೇಕ ವ್ಯವಸ್ಥೆ, ಸ್ವಸಹಾಯ ಪದ್ಧತಿಯಲ್ಲಿ ಪ್ರಸಾದ ಸೇವೆನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯದ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಅಗಮಿಸಿದ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪಟ್ಟಾಧಿಕಾರ ಮಹೋತ್ಸವ ಹಬ್ಬದ ವಾತವಾರಣವನ್ನೆು ಸೃಷ್ಟಿಸಿತ್ತು.

ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು ಹಾಗೂ ಅಂತಾರಾಷ್ಟ್ರೀಯ ಖೋ ಖೋ ಕ್ರೀಡಾಪಟು, ವಿಶ್ವಕಪ್ ವಿಜೇತೆ ಕು.ಚೈತ್ರ ಕುರುಬೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಧಾರ್ಮಿಕ ಕಾರ್ಯಕ್ರಮದಲ್ಲಿ ಕನಕಪುರ ದೇಗುಲಮಠದ ಕಿರಿಯ ಶ್ರೀಗಳಾದ ಚೆನ್ನಬಸವ ಸ್ವಾಮಿಗಳು, ಸಿದ್ಧಗಂಗಾ ಶ್ರೀಗಳು, ಮರಳೇಗವಿ ಮಠದ ಶಿವರುದ್ರ ಮಹಾಸ್ವಾಮಿಗಳು, ಸೋಮಹಳ್ಳಿ ವೀರಸಿಂಹಾಸನ ಮಠದ ಸಿದ್ದಮಲ್ಲ ಸ್ವಾಮಿಗಳು, ಸಾಲೂರು ಮಠದ ಶಾಂತ ಮಲ್ಲಿಕಾರ್ಜುನಸ್ವಾಮಿಗಳು, ಕುಂದೂರು ರಸ ಸಿದ್ದೇಶ್ವರ ಮಠದ, ಕಿರಿಯ ಶ್ರೂ ರುದ್ರಮಹಾಂತ ಮಹಾ ಸ್ವಾಮಿಗಳು, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಚಾಂಷುಗರ್ ವ್ಯವಸ್ಥಾಪಕ ಶ್ರೀನಿವಾಸನ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಆನಂದ್, ಹಿನಕಲ್ ಬಸವರಾಜು, ಮೂಡ್ಲಪುರ ನಂದೀಶ, ತಾಲೂಕು ಅಧ್ಯಕ್ಷ ಕುಂದೂರು ಮೂರ್ತಿ ಸೇರಿದಂತೆ ನೂರಾರು ಮುಖಂಡರು, ಸಮುದಾಯದ ಗಣ್ಯ ವ್ಯಕ್ತಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶ್ರೀ ಮಹಾಂತೇಶ್ವರ ಜ್ಞಾನ ವಿಕಸ ಸಮಿತಿ ಪದಾಧಿಕಾರಿಗಳು, ಸಾವಿರಾರು ಮಹಿಳೆಯರು, ಶರಣರು ಭಾಗವಹಿಸಿದ್ದರು.

Share this article