ಗದಗ: ಜನರ ನೋವು ನಿವಾರಿಸಿ, ಕಣ್ಣೀರು ಒರೆಸಿ ಆತ್ಮಸ್ಥೈರ್ಯ ತುಂಬುವ ಕಾಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಔಷಧ ತಜ್ಞರ ಸೇವೆ ಅನುಪಮವಾದದ್ದು ಎಂದು ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಆರೋಗ್ಯದಲ್ಲಿ ತೊಂದರೆಯಾಗಿ ನೋವಿನಿಂದ ಬಳಲುವವರಿಗೆ ಔಷಧ ಕೊಟ್ಟು ಹಗಲಿರುಳು ಸೇವೆ ಮಾಡುತ್ತಿರುವ ಔಷಧ ವ್ಯಾಪಾರಸ್ಥರ ಸೇವೆ ಅನುಪಮವಾದದ್ದು. ಬದಲಾದ ಜೀವನ ಶೈಲಿ, ಬದಲಾದ ಸನ್ನಿವೇಶದಿಂದ ಮನುಷ್ಯ ಸಹಜವಾಗಿ ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಈ ಹಿಂದೆ ಮನೆಯಲ್ಲಿ ಮಸಾಲೆ ತುಂಬಿದ ಡಬ್ಬಿಗಳಿರುತ್ತಿದ್ದವು. ಆ ಜಾಗೆಯಲ್ಲಿ ಈಗ ಗುಳಿಗಿ ಡಬ್ಬಿಗಳು ಬಂದಿವೆ. ಮಾತೃ ಭಕ್ತಿ ಕಡಿಮೆಯಾಗಿ ಮಾತ್ರೆ ಭಕ್ತಿ ಹೆಚ್ಚುತ್ತಿದೆ ಎಂದರು.
ತುರ್ತು ಸಂದರ್ಭದಲ್ಲಿ ಔಷಧ ತಜ್ಞರು ಕೊಟ್ಟ ಔಷಧಗಳಿಂದ ಆರಾಮ ಆಗಿರುವ ಸಂದರ್ಭಗಳಿವೆ. ಜೀವನ್ಮರಣಗಳ ಮಧ್ಯ ತೊಳಲಾಡುತ್ತಿರುವವರ ಜೀವ ರಕ್ಷಣೆಗೆ ಸಣ್ಣ ಪ್ರಯತ್ನ ದೇವರು ನಿಮಗೆ ಕೊಟ್ಟಿದ್ದಾನೆ. ನಿಷ್ಠೆ ಪ್ರಾಮಾಣಿಕತೆ ಜತೆಗೆ ಮಾನವೀಯತೆಯಿಂದ ಕೆಲಸ ಮಾಡಿ ಸಂತೃಪ್ತಿಪಟ್ಟುಕೊಳ್ಳಿ ಎಂದರು.ಸಹಾಯಕ ಔಷಧ ನಿಯಂತ್ರಕ ನೀಲಕಂಠ ರಾಠೋಡ ಮಾತನಾಡಿ, ಗುಣಮಟ್ಟದ ಹಾಗೂ ಕಡಿಮೆ ದರದಲ್ಲಿ ಔಷಧ ಉತ್ಪಾದನೆಗೆ ಭಾರತ ಹೆಸರಾಗಿದೆ. ಔಷಧ ವ್ಯಾಪಾರಸ್ಥರ ಕಾರ್ಯ ಸೇವಾ ಮನೋಭಾವನೆಯಿಂದ ಕೊಡಿದ್ದಾಗಿದೆ. ಹಗಲು ರಾತ್ರಿ ತುರ್ತು ಸಂದರ್ಭದಲ್ಲಿ ಔಷಧ ಪೂರೈಸುವ ಮೂಲಕ ಮಾನವೀಯತೆ ಕಾರ್ಯ ಮಾಡುತ್ತಿದ್ದಾರೆ. ಔಷಧ ವ್ಯಾಪಾರಸ್ಥರು ಕಾಯ್ದೆ-ಕಾನೂನು ಪಾಲಿಸಿ ಉತ್ತಮ ರೀತಿಯಲ್ಲಿ ಸೇವೆ ಮಾಡಿ, ಸಂಘಟನೆ ಬಲಗೊಳ್ಳಲಿ ಎಂದರು.
ಈ ವೇಳೆ ಕೋಟುಮಚಗಿಯ ಸೋಮೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷ ಆರ್.ವಿ. ಕುಲಕರ್ಣಿ, ಮಂಜುನಾಥ ರಡ್ಡಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಸಂಘದ ಗದಗ ತಾಲೂಕಾಧ್ಯಕ್ಷ ರಾಮನಗೌಡ ದಾನಪ್ಪಗೌಡ್ರ ಮಾತನಾಡಿದರು. ಹಿರಿಯ ಔಷಧ ತಜ್ಞರನ್ನು ಸನ್ಮಾನಿಸಲಾಯಿತು.ರಾಜ್ಯ ಜಿಲ್ಲಾ ಪ್ರತಿನಿಧಿ ಎಂ.ಬಿ. ರಮಣಿ, ಶಾಮಸುಂದರ ಆನೆಗುಂದಿ, ಮಹಾಬಳೇಶ್ವರಪ್ಪ ಕೋಡಬಳಿ, ಚಂದ್ರಕಾಂತ ಗದಗ, ಗಂಗಾಧರ ಮೆಕ್ಕಿ, ಜನದತ್ತ ಹಿರೇಗೌಡ್ರ, ಮಹೇಶ್ವರ ಮಾಳಗಿ, ಮಹಾದೇವಗೌಡ ಲಿಂಗನಗೌಡ್ರ, ನಾಗರಾಜ ಲಿಂಗಸೂರ, ರಾಜೇಂದ್ರ ನಡವಿ ಸೇರಿದಂತೆ ಇತರರು ಇದ್ದರು.
ಗುರುರಾಜ ಕುಲಕರ್ಣಿ ಪ್ರಾರ್ಥಿಸಿದರು. ಮಹೇಶ ಕುಂದ್ರಾಳಹಿರೇಮಠ ಅವರಿಂದ ಭಕ್ತಿಗೀತೆ ಜರುಗಿತು. ನಾಗೇಶ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಾನ್‌ಸಾಬ ನದಾಫ ನಿರೂಪಿಸಿದರು. ಜ್ಞಾನೇಶ ಖೋಕಲೆ ವಂದಿಸಿದರು.