ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ನಾಡಿನಲ್ಲಿರುವ ಮಠಮಾನ್ಯಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿವೆ. ಸಿದ್ದಗಂಗಾ ಮಠ, ಸುತ್ತೂರು ಮಠ, ಸಿರಿಗೆರೆಯಂತಹ ನಮ್ಮ ಸಮಾಜದ ಮಠಗಳು ನೀಡಿರುವ ಸೇವೆ ಅನನ್ಯವಾದುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ಶಿವಗಂಗೆಯ ಹೊನ್ನಮ್ಮಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಹೊನ್ನಾದೇವಿ ದಶಮಾನೋತ್ಸವ, ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ದಕ್ಷಿಣಕಾಶಿ ಶಿವಗಂಗೆಯಲ್ಲಿರುವ ಹೊನ್ನಮ್ಮಗವಿ ಮಠವೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಾಣಿಕ ಮಠಗಳಲ್ಲಿ ಒಂದಾಗಿದ್ದು ತನ್ನದೇ ಆದ ಮಹತ್ತರವಾದ ಇತಿಹಾಸವನ್ನು ಹೊಂದಿದೆ. ಈ ಮಠವು ಉಜ್ಜಯಿನಿ ಜಗದ್ಗುರುಗಳಾಗಿದ್ದ ಶ್ರೀ ಮರುಳಸಿದ್ದೇಶ್ವರ ಮಹಾಸ್ವಾಮಿಗಳಿಂದಾಗಿ 10ನೇ ಶತಮಾನದಲ್ಲಿಯೇ ಸ್ಥಾಪಿತವಾಗಿದ್ದು, ದಕ್ಷಿಣಕಾಶಿಯಂದೇ ಪ್ರಸಿದ್ದವಾಗಿರುವ ಶಿವಗಂಗಾ ಕ್ಷೇತ್ರವನ್ನು ಶಿಕ್ಷಣಕಾಶಿಯಾಗಿಸಿದ ಕೀರ್ತಿ ಪೂಜ್ಯ ಶ್ರೀಗಳಿಗೆ ಸಲ್ಲುತ್ತದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಮಠಗಳಿಗೆ ವಿಶೇಷ ಸ್ಥಾನಮಾನ ನೀಡಿದ್ದು ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮ ಮುಂದಿನ ಪೀಳಿಗೆಯವರದ್ದಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸರ್ಕಾರಕ್ಕೆ ಶಿಕ್ಷಣ, ವಸತಿ, ದಾಸೋಹದ ದಿಕ್ಸೂಚಿ ನೀಡಿದ್ದೇ ನಮ್ಮ ವೀರಶೈವ ಲಿಂಗಾಯತ ಮಠಗಳು, ಮಠಗಳು ಇಲ್ಲದಿದ್ದರೆ ಇವತ್ತು ಎಷ್ಟೋ ಜನ ಬೀದಿಪಾಲಾಗುತ್ತಿದ್ದರು. ನಮ್ಮ ಸಂಸ್ಕೃತಿಯಲ್ಲಿ ಮಠಾಧೀಶರಿಗೆ ವಿಶಿಷ್ಟ ಸ್ಥಾನಮಾನವಿದೆ. ನಾನು ಧರ್ಮದಿಂದ ರಾಜಕಾರಣ ಮಾಡಿದ್ದೇನೆ. ವೀರಶೈವ ಲಿಂಗಾಯತ ಧರ್ಮದ ಹೆಣ್ಣು ಮಗಳಾದ ನಾನು ಸಂಘರ್ಷದಿಂದ, ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆದುಕೊಂಡು ಬಂದು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಮಠಗಳು ಜಾತಿ ಭೇದವಿಲ್ಲದೆ ಬಸವಣ್ಣನವರ ವಚನದಂತೆ ಎಲ್ಲ ಸಮಾಜದವರನ್ನು ಮನೆಯ ಮಗನಾಗಿ ಕಾಣುತ್ತೇವೆ ಎಂದರು.ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ನಾನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಠಗಳ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ವೀರಶೈವ ಲಿಂಗಾಯತ ಸಮಾಜದ ಮಠಗಳು, ಮುಖಂಡರು, ಜನತೆ ನನ್ನ ಬಗ್ಗೆ ವಿಶೇಷವಾದ ಅಭಿಮಾನವಿಟ್ಟು ಗೌರವಿಸುತ್ತಿರುವುದಕ್ಕೆ ಸಮಾಜಕ್ಕೆ ಋಣಿಯಾಗಿದ್ದೇನೆ ಎಂದರು.
ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ವಿವೇಕಾನಂದಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ, ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಂಬಾಳು ಮಠದ ಶ್ರೀ ಚನ್ನವೀರಶಿವಾಚಾರ್ಯ ಸ್ವಾಮೀಜಿ, ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ, ಮಾಜಿ ಎಂಎಲ್ ಸಿ ಕಾಂತರಾಜು, ಕೆಐಆರ್ ಡಿ ಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಜಿ.ಪಂ.ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಮಾಜಿ ಉಪಮೇಯರ್ ಪುಟ್ಟರಾಜು, ಮುಖಂಡರಾದ ಸಪ್ತಗಿರಿ ಶಂಕರ್ ನಾಯಕ್, ಅಗಳಕುಪ್ಪೆ ಗೋವಿಂದರಾಜು, ಅಂಚೆಮನೆ ಪ್ರಕಾಶ್, ಬೃಂಗೇಶ್, ಪ್ರದೀಪ್, ತಟ್ಟೆಕೆರೆ ಬಾಬು, ರೇವಣಸಿದ್ದಯ್ಯ, ಪ್ರಭುದೇವ್, ಶಾಂತಕುಮಾರ್, ಪುಟ್ಟಣ್ಣ, ನಾರಾಯಣಸ್ವಾಮಿ, ದಿನೇಶ್ ನಾಯಕ್, ಮನುಪ್ರಸಾದ್, ರಾಜಮ್ಮ, ವೇದಾವತಿ, ಪೂರ್ಣಿಮಾ ಮತ್ತಿತರರಿದ್ದರು.ಪೋಟೋ 1 : ಶಿವಗಂಗೆಯ ಹೊನ್ನಮ್ಮಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಹೊನ್ನಾದೇವಿ ದಶಮಾನೋತ್ಸವ, ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿರುವುದುಪೋಟೋ 2 : ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಿವಯೋಗದ ಚಿತ್ರಪಟ ಬಿಡುಗಡೆಗೊಳಿಸಿದರು.