ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ಕಾರಿ ಆಸ್ಪತ್ರೆಗಳ ಸೇವೆ ಖಾಸಗಿ ಆಸ್ಪತ್ರೆಗಿಂತ ಉತ್ತಮವಾಗಿರುವಂತೆ ಮಾಡಲು ಆರೋಗ್ಯಾಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಸೂಚಿಸಿದರು.ಜಿಲ್ಲಾ ಪಂಚಾಯತಿ ನೂತನ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು, ಅಸಹಾಯಕರು ಆಗಿರುತ್ತಾರೆ. ಸರ್ಕಾರಿ ಆಸ್ಪತ್ರೆಗಳ ಸೇವೆ ಉತ್ತಮವಾಗಿದ್ದಲ್ಲಿ ಇತರರೂ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುವರು. ಇದರಿಂದ ಆಸ್ಪತ್ರೆಗಳ ಆದಾಯ ಹೆಚ್ಚಳವಾಗಿ ವೈದ್ಯಾಧಿಕಾರಿಗಳ ನೇಮಕ, ಸರ್ಕಾರದ ಅನುದಾನಕ್ಕಾಗಿ ಕಾಯುವ ಪ್ರಸಂಗ ಬರುವುದಿಲ್ಲ ಎಂದರು.
ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 18 ಎಂಬಿಬಿಎಸ್ ವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಒಂದು ವೇಳೆ ನೇಮಕಾತಿ ಮಾಡಿದ ನಂತರ ವೈದ್ಯರು ಬಿಟ್ಟು ಹೋಗಿದ್ದಲ್ಲಿ ಮುಂದಿನ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸೇವೆಗಳು ಲಭ್ಯವಾಗುವಂತೆ ಮಾಡಬೇಕು. 276 ಗ್ರೂಪ್ ಡಿ ನೌಕರರನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲು ಈಗಾಗಲೇ ಅನುಮತಿ ದೊರೆತಿದ್ದು, ಸಿಬ್ಬಂದಿ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಇಳಕಲ್ಲ ಸರ್ಕಾರಿ ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಅವ್ಯವಸ್ಥೆ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರಗೊಂಡಿದೆ. ಕೂಡಲೇ ಅಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು. ಹಲಕುರ್ಕಿ ಮತ್ತು ಹಡಗಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಸರಿಯಾಗಿಲ್ಲ ಎಂಬ ವರದಿ ಇದ್ದು, ಇದನ್ನು ಸರಿ ಪಡಿಸುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿರುವ ಸ್ಕಾನಿಂಗ್ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ತಪಾಸಣೆ ನಡೆಸಬೇಕು. ಗರ್ಭಪಾತ ವಿಷಯ ಗಂಭೀರ ವಿಷಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಪ್ರತಿ ಸಭೆಗಳಲ್ಲೂ ಈ ಬಗ್ಗೆ ಚರ್ಚಿಸಿ ಭ್ರೂಣ ಹತ್ಯೆಯ ಪ್ರಕರಣ ತಡೆಯಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎಚ್.ವೈ. ಮೇಟಿ, ಭೀಮಸೇನ್ ಚಿಮ್ಮನಕಟ್ಟಿ, ಆರೋಗ್ಯಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಆಯುಕ್ತ ರಂದೀಪ, ನಿರ್ದೇಶಕರಾದ ಅನಂತ ದೇಸಾಯಿ, ಶ್ರೀನಿವಾಸ, ಜಿಲ್ಲಾಧಿಕಾರಿ ಜಾನಕಿ ಕೆ. ಎಂ. ಜಿಪಂ ಸಿಇಒ ಶಶಿಧರ್ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಯಶ್ರೀ ಎಮ್ಮಿ, ಜಿಲ್ಲಾ ಆರ್.ಸಿ.ಎಚ್ ಡಾ.ರಾಜಕುಮಾರ ಯರಗಲ್ ಸೇರಿದಂತೆ ಇತರರು ಇದ್ದರು. ಆಹಾರ ಸುರಕ್ಷತೆಗೆ ಒತ್ತು ನೀಡಿ:ಆಹಾರ ಸುರಕ್ಷತಾ ಅಧಿಕಾರಿಗಳು ಜಿಲ್ಲೆಯಾದ್ಯಂತ ಇರುವ ಹೋಟೆಲ್ ಮತ್ತು ಬೇಕರಿ ಅಂಗಡಿಗಳಿಗೆ ಭೇಟಿ ನೀಡಬೇಕು. ನಿಯಮಿತವಾಗಿ ಭೇಟಿ ನೀಡುತ್ತಿದ್ದರೆ ಆಹಾರ ತಯಾರಿಸುವವರು ಎಚ್ಚೆತ್ತುಕೊಂಡು ಗುಣಮಟ್ಟ ಕಾಯ್ದುಕೊಳ್ಳುತ್ತಾರೆ. ಇದರಿಂದ ಜನರು ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ ಎಂದು ಸಚಿವ ದಿನೇಶ ಗುಂಡೂರಾವ್ ಹೇಳಿದರು.