ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲೇ ರಾತ್ರೋರಾತ್ರಿ ಮಹಾನಗರ ಪಾಲಿಕೆಯ ಜೆಸಿಬಿಗಳು ಘರ್ಜಿಸುವ ಮೂಲಕ ಕಳೆದ 16 ವರ್ಷಗಳಿಂದ ವಾಸವಾಗಿದ್ದ ಕುಟುಂಬಗಳ ಶೆಡ್‌ಗಳನ್ನು ನೆಲಸಮಗೊಳಿಸಿ, ಧ್ವಂಸ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲೇ ರಾತ್ರೋರಾತ್ರಿ ಮಹಾನಗರ ಪಾಲಿಕೆಯ ಜೆಸಿಬಿಗಳು ಘರ್ಜಿಸುವ ಮೂಲಕ ಕಳೆದ 16 ವರ್ಷಗಳಿಂದ ವಾಸವಾಗಿದ್ದ ಕುಟುಂಬಗಳ ಶೆಡ್‌ಗಳನ್ನು ನೆಲಸಮಗೊಳಿಸಿ, ಧ್ವಂಸ ಮಾಡಲಾಗಿದೆ.ನಗರದ 29ನೇ ವಾರ್ಡ್ ವ್ಯಾಪ್ತಿಯಲ್ಲಿ ಮರಳೂರಿಗೆ ಸೇರುವ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಕಾಲೇಜು ಕಟ್ಟಡಕ್ಕೆ ಹಾಗೂ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಹಾಕಲಾಗಿದ್ದ ಶೆಡ್‌ಗಳನ್ನು ಮಧ್ಯರಾತ್ರಿ ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ಜೆಸಿಬಿ ಯಂತ್ರ ಪೊಲೀಸರೊಂದಿಗೆ ನುಗ್ಗಿ ಶೆಡ್‌ಗಳಲ್ಲಿ ವಾಸವಾಗಿದ್ದವರನ್ನು ಹೊರ ಹಾಕಿ ಹಾಗೂ ಅದರೊಳಗಿದ್ದ ಲಕ್ಷಾಂತರ ರು. ಸಾಮಗ್ರಿಗಳನ್ನು ಬೀದಿಗೆ ಹಾಕಿ ನೆಲಸಮಗೊಳಿಸಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ನಡುರಾತ್ರಿ ಏಕಾಏಕಿ ಯಾವುದೇ ನೋಟಿಸ್ ನೀಡದೆ ಧ್ವಂಸ ಮಾಡಿರುವ ಶೆಡ್‌ಗಳ ಜಾಗ ಸತೀಶ್ ಎಂಬುವರಿಗೆ ಸೇರಿದ್ದಾಗಿದ್ದು, ಇವರ ಕುಟುಂಬಕ್ಕೆ ಈ ಜಾಗ ಪಿತ್ರಾರ್ಜಿತವಾಗಿ ಬಂದಿದೆ ಎನ್ನಲಾಗಿದೆ. ಪೊಲೀಸರ ರಕ್ಷಣೆಯಲ್ಲಿ ಜೆಸಿಬಿ ಯಂತ್ರಗಳೊಂದಿಗೆ ಸರ್ವೆ ನಂ. 87/1ಎ ಜಾಗಕ್ಕೆ ತೆರಳಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಸತೀಶ್ ಎಂಬುವರಿಗೆ ಸೇರಿದೆ ಎನ್ನಲಾದ ಜಾಗದಲ್ಲಿದ್ದ ಶೆಡ್‌ಗಳಲ್ಲಿ ವಾಸವಾಗಿದ್ದ ಮಹಿಳೆಯರು, ಮಕ್ಕಳು, ವೃದ್ಧರನ್ನು ಮಧ್ಯರಾತ್ರಿ ಅನಾಗರಿಕರಂತೆ ಹೊರದಬ್ಬಿ, ಅದರೊಳಗಿದ್ದ ಸಾಮಗ್ರಿಗಳನ್ನು ಹೊರಗೆ ಎಸೆದು ಶೆಡ್‌ಗಳನ್ನು ಧ್ವಂಸ ಮಾಡಿರುವ ಕ್ರಮವನ್ನು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ.ದೌರ್ಜನ್ಯ, ದಬ್ಬಾಳಿಕೆಯಿಂದ ನಡುರಾತ್ರಿ ಶೆಡ್‌ಗಳನ್ನು ನೆಲಸಮಗೊಳಿಸಿ ಕುಟುಂಬಗಳನ್ನು ಬೀದಿಗೆ ತಳ್ಳಿ ಈ ಜಾಗ ಮಹಾನಗರ ಪಾಲಿಕೆ ಸ್ವತ್ತು ಎಂದು ಬೋರ್ಡ್ ಹಾಕಿರುವ ಪಾಲಿಕೆ ಅಧಿಕಾರಿಗಳು ಇಷ್ಟು ದಿನ ಏನು ಮಾಡುತ್ತಿದ್ದರು. ಅದರಲ್ಲೂ ರಾತ್ರಿ ವೇಳೆ ಈ ಕೆಲಸ ಮಾಡಲು ಇವರಿಗೆ ಅನುಮತಿ ಕೊಟ್ಟವ ಯಾರು?. ಇವರಿಗೆ ಹೇಳೋರು, ಕೇಳೋರು ಯಾರು ಇಲ್ಲವೇ, ನಗರದ ಜನತೆ ಎಂದರೆ ಇವರಿಗೆ ಇಷ್ಟೊಂದು ಅಸಡ್ಡೆಯೇ ಎಂದು ನಾಗರಿಕರು ಕಿಡಿಕಾರಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.